ಶಿವಮೊಗ್ಗ: ಈ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ಕುಮಾರ್ ಹಾಗೂ ಪತಿ, ನಟ ಶಿವರಾಜ್ಕುಮಾರ್ ಮತದಾರರ ನಡುವೆ ಯುಗಾದಿ ಹಬ್ಬವನ್ನು ಆಚರಿಸಿ, ಮತಯಾಚನೆ ಮಾಡಿದರು. ಶಿವಮೊಗ್ಗ ವಿನೋಬನಗರದ ಶ್ರೀರಾಮ ನಗರ (ಬೆಂಕಿನಗರ) ನಿವಾಸಿಗಳಿಂದ ಆಯೋಜನೆಗೊಂಡಿದ್ದ 'ನವ ಸಂವತ್ಸರದ ಸಂಭ್ರಮದಲ್ಲಿ ಗೀತಕ್ಕ ಶಿವಣ್ಣ ನಮ್ಮೊಂದಿಗೆ' ಎಂಬ ಕಾರ್ಯಕ್ರಮದಲ್ಲಿ ದಂಪತಿ ಭಾಗಿಯಾದರು.
ನಟ ಶಿವರಾಜ್ಕುಮಾರ್ ದೀಪ ಬೆಳಗುವ ಮೂಲಕ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ವೇಳೆ, ಕಲಾವತಿ ಎಂಬುವವರು ಕಾಂಗ್ರೆಸ್ ಅಭ್ಯರ್ಥಿ ಗೀತಾ ಅವರ ಕೈಗೆ ಬೆಳ್ಳಿ ಖಡ್ಗ ಹಾಕುವ ಮೂಲಕ ಚುನಾವಣೆಯಲ್ಲಿ ಜಯಶಾಲಿಯಾಗಬೇಕು ಎಂದು ಹಾರೈಸಿದರು. ಕಲಾವತಿ, ಬಂಗಾರಪ್ಪನವರ ಅಭಿಮಾನಿ. ಬಂಗಾರಪ್ಪನವರ ಆಶ್ರಯ ಮನೆಯ ಫಲಾನುಭವಿಯೂ ಹೌದು. ನಂತರ ಬೆಂಕಿ ನಗರದ ಸುಮಾ ಹಾಗೂ ಅವರ ಮಗಳು, ಗೀತಾ ಶಿವರಾಜ್ಕುಮಾರ್ ಅವರಿಗೆ ಠೇವಣಿ ಹಣ ನೀಡಿದರು. ನಂತರ ಮಹಿಳೆಯರು ಬೇವು - ಬೆಲ್ಲ ನೀಡಿ ಉಡಿ ತುಂಬಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಗೀತಾ ಶಿವರಾಜ್ಕುಮಾರ್, ನಾನು ಶಿವಮೊಗ್ಗದಲ್ಲಿಯೇ ಹುಟ್ಟಿ ಬೆಳೆದಿದ್ದು. ನಮ್ಮ ತಂದೆ ಬಂಗಾರಪ್ಪ ಅವರ ಅಭಿಮಾನಿಗಳು ಇಲ್ಲಿ ಬಹಳ ಜನ ಇದ್ದೀರಿ. ತಂದೆ ಜಾರಿಗೆ ತಂದ ಯೋಜನೆಯಾದ ಆಶ್ರಯ ಮನೆ ಪಡೆದ ಕಲಾವತಿ ಅವರು ನಮಗೆ ಬೆಳ್ಳಿ ಖಡ್ಗ ಹಾಕಿದ್ದು ನನಗೆ ಬಹಳ ಸಂತೋಷವಾಗಿದೆ. ನನಗೆ ಚುನಾವಣಾ ಠೇವಣಿ ಇಡಲು ಹಣ ನೀಡಿದ ತಾಯಿ ಮತ್ತು ಮಗಳಿಗೆ ತುಂಬು ಹೃದಯದ ಧನ್ಯವಾದಗಳು. ನನಗೆ ಉಡಿ ತುಂಬುವ ಮೂಲಕ ನಿಮ್ಮ ಮನೆ ಮಗಳು ಎಂಬುದನ್ನು ನೀವೆಲ್ಲ ತೋರಿಸಿದ್ದೀರಿ. ನಾನು ಹೇಗೆ ಕೆಲಸ ಮಾಡುತ್ತೇನೆ ಎಂಬುದನ್ನು ನೋಡುವುದಕ್ಕಾದರೂ ನನ್ನನ್ನು ಒಮ್ಮೆ ಗೆಲ್ಲಿಸಿ. ನಾನು ನಿಮ್ಮ ಮನೆ ಮಗಳಾಗಿರುತ್ತೇನೆ ಎಂದು ಭರವಸೆ ನೀಡಿದರು.
ನಂತರ ಮಾತನಾಡಿದ ನಟ ಶಿವರಾಜ್ಕುಮಾರ್, ಯುಗಾದಿ ಎಂದರೆ ಹೊಸ ವರ್ಷ. ಹೊಸ ವರ್ಷ ಎಂದರೆ ಹೊಸತನ, ಹೊಸ ಅಲೆ. ಹೊಸ ವರ್ಷದಲ್ಲಿ ಹೊಸತನವನ್ನು ತರುವತ್ತ ಎಲ್ಲರೂ ಪ್ರಯತ್ನಿಸಬೇಕು. ಹಬ್ಬಗಳನ್ನು ನಾವು ಮನೆಯಲ್ಲಿಯೇ ಮಾಡುತ್ತೇವೆ. ಈಗ ನಿಮ್ಮ ಜೊತೆ ಆಚರಿಸುತ್ತಿರುವುದು ನಿಜಕ್ಕೂ ಸಂತೋಷವಾಗುತ್ತಿದೆ. ನಮ್ಮ ಮನೆಯಲ್ಲಿ ಮಕ್ಕಳು, ಸ್ನೇಹಿತರು ಬಂದು ಹಬ್ಬ ಆಚರಿಸುತ್ತಿದ್ದರು. ಇಲ್ಲೂ ಸಹ ನಮ್ಮ ಕುಟುಂಬದ ಸದಸ್ಯರ ಜೊತೆ ಹಬ್ಬ ಆಚರಿಸುತ್ತಿದ್ದೇನೆ.