ಬೆಳಗಾವಿ: ''ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ನಿಧನರಾದ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಶುಕ್ರವಾರ ನಡೆಯಬೇಕಿದ್ದ 'ಜೈ ಬಾಪು, ಜೈ ಭೀಮ್, ಜೈ ಸಂವಿಧಾನ' ಕಾರ್ಯಕ್ರಮವನ್ನು ರದ್ದುಪಡಿಸಲಾಗಿದೆ'' ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾಹಿತಿ ನೀಡಿದ್ದಾರೆ.
ಬೆಳಗಾವಿ ಪ್ರವಾಸಿಮಂದಿರದಲ್ಲಿ ಗುರುವಾರ ರಾತ್ರಿ ತುರ್ತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ''1924ರ ಕಾಂಗ್ರೆಸ್ ಅಧಿವೇಶನಕ್ಕೆ ನೂರು ವರ್ಷ ತುಂಬಿದ್ದರಿಂದ ಕಾಂಗ್ರೆಸ್ ಪಕ್ಷದ ವತಿಯಿಂದ ಬೆಳಗಾವಿಯಲ್ಲಿ ಹಮ್ಮಿಕೊಂಡಿದ್ದ 'ಗಾಂಧಿ ಭಾರತ' ಕಾರ್ಯಕ್ರಮವನ್ನು ರದ್ದುಮಾಡಲಾಗಿದೆ. ಅದನ್ನು ಸದ್ಯಕ್ಕೆ ಮುಂದೂಡುತ್ತೇವೆ. ಮುಂದಿನ ಕ್ರಮ ಏನು ಮಾಡಬೇಕು ಎಂದು ವರಿಷ್ಠರೊಂದಿಗೆ ಚರ್ಚಿಸಿ ತಿಳಿಸುತ್ತೇನೆ. ಈಗಾಗಲೇ ನಗರಕ್ಕೆ ಬಂದಿರುವ ಎಲ್ಲ ನಾಯಕರು ಬೆಳಿಗ್ಗೆ 10.30ಕ್ಕೆ ಅದೇ ವೇದಿಕೆಯಲ್ಲಿ ಮನಮೋಹನ್ ಸಿಂಗ್ ಅವರಿಗೆ ಗೌರವ ವಂದನೆ ಸಲ್ಲಿಸಲಾಗುವುದು'' ಎಂದರು.
''ನಮ್ಮ ನಾಯಕಿ ಸೋನಿಯಾ ಗಾಂಧಿ ಅವರು ಅಧಿಕಾರ ತ್ಯಾಗ ಮಾಡಿ ಮನಮೋಹನ್ ಸಿಂಗ್ ಅವರನ್ನು ಪ್ರಧಾನಿ ಮಾಡಿದ್ದರು. ನಮಗೆ ಅಧಿಕಾರ ಮುಖ್ಯವಲ್ಲ, ದೇಶದ ಆರ್ಥಿಕ ಸುಧಾರಣೆ ಮುಖ್ಯ ಎಂದು ಹೇಳಿದ್ದರು. ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಆ ಘಟನೆ ಮೈಲಿಗಲ್ಲಾಗಿ ಉಳಿಯಿತು. ಮನಮೋಹನ್ ಸಿಂಗ್ ಅವರು ನಿರೀಕ್ಷೆಗಿಂತ ಹೆಚ್ಚು, ವೇಗವಾಗಿ ದೇಶವನ್ನು ಅಭಿವೃದ್ಧಿಗೆ ಕೊಂಡೊಯ್ದಿದ್ದರು'' ಎಂದು ಡಿಕೆಶಿ ಸ್ಮರಿಸಿದರು.
ಸಿಂಗ್ ನೀತಿಗಳು ದೇಶದ ಗತಿಯನ್ನೇ ಬದಲಿಸಿದವು: 'ಮನರೇಗಾ ಯೋಜನೆ ಆರಂಭಿಸುವ ಮೂಲಕ ಅವರು ಇಡೀ ದೇಶದ ಬಡವರಿಗೆ ಕೆಲಸ ಕೊಟ್ಟು, ಸಬಲರಾಗಿ ಮಾಡಿದರು. ಶಿಕ್ಷಣ ಹಕ್ಕು, ಮಾಹಿತಿ ಹಕ್ಕು ಮುಂತಾದ ಅವರ ನೀತಿಗಳು ದೇಶದ ಗತಿಯನ್ನೇ ಬದಲಿಸಿದವು. ರೈತರ ಸಾಲ ಮನ್ನಾ ಮಾಡುವ ಮೂಲಕ ಅವರೊಬ್ಬ ದೊಡ್ಡ ಆರ್ಥಿಕ ತಜ್ಞ ಎಂಬುದನ್ನು ಜಗತ್ತಿಗೆ ತೋರಿಸಿದ್ದರು. ಇಡೀ ಪ್ರಪಂಚದ ರಾಷ್ಟ್ರಗಳು ಆರ್ಥಿಕವಾಗಿ ಜರ್ಜರಿತವಾದಾಗ ಭಾರತ ಮಾತ್ರ ಪ್ರಬಲವಾಗಿ ನಿಂತಿದ್ದು ಮನಮೋಹನ್ ಸಿಂಗ್ ಅವರ ಕೃರ್ತೃತ್ವ ಶಕ್ತಿಯ ಪ್ರತೀಕ'' ಎಂದು ಡಿ.ಕೆ.ಶಿವಕುಮಾರ್ ಶ್ಲಾಘಿಸಿದರು.