ಚಾಮರಾಜನಗರ:ಹಳೆ ಮೈಸೂರು ಭಾಗದ ಜಾನಪದ ಕಲೆಗಳ ತವರೂರು, ಮಲೆ ಮಹದೇಶ್ವರ, ಬಿಳಿಗಿರಿರಂಗನಾಥ, ಹಿಮವದ್ ಗೋಪಾಲಸ್ವಾಮಿ ಪುಣ್ಯ ಕ್ಷೇತ್ರಗಳನ್ನು ಒಳಗೊಂಡಿರುವ ಚಾಮರಾಜನಗರ ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆಯ ಕಾವು ತೀವ್ರತೆ ಪಡೆದಿದೆ. ಪರಿಶಿಷ್ಟ ಜಾತಿಗೆ (ಎಸ್ಸಿ)ಮೀಸಲಾದ ಕ್ಷೇತ್ರದಲ್ಲಿ ಮಾಜಿ ಶಾಸಕ ಎಸ್.ಬಾಲರಾಜು ಬಿಜೆಪಿ ಹಾಗೂ ಜಾತ್ಯತೀತ ಜನತಾದಳ ಮೈತ್ರಿ ಅಭ್ಯರ್ಥಿಯಾಗಿದ್ದರೆ, ಕಾಂಗ್ರೆಸ್ನಿಂದ ಸಚಿವ ಹೆಚ್.ಸಿ. ಮಹಾದೇವಪ್ಪ ಅವರ ಪುತ್ರ ಸುನಿಲ್ ಬೋಸ್ ಕಣಕ್ಕಿಳಿದಿದ್ದಾರೆ.
ಕ್ಷೇತ್ರದಲ್ಲಿ ಬಿಜೆಪಿಯ ಓರ್ವ ಶಾಸಕನೂ ಇಲ್ಲದಿರುವುದು, ಸಿಎಂ ಸಿದ್ದರಾಮಯ್ಯ ಅವರು ಪ್ರತಿನಿಧಿಸುವ ವರುಣಾ ಈ ಕ್ಷೇತ್ರಕ್ಕೆ ಒಳಪಡುವುದು ಹಾಗೂ ಗ್ಯಾರಂಟಿಗಳ ಕಾರಣದಿಂದ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಲಿದ್ದಾರೆ ಎಂಬುದು ಕೈ ಪಕ್ಷದ ವಿಶ್ವಾಸವಾಗಿದೆ. ಪ್ರಧಾನಿ ನರೇಂದ್ರ ಮೋದಿ ನಾಮಬಲ ಹಾಗೂ ಬಾಲರಾಜು ಅವರು ಸಜ್ಜನ ರಾಜಕಾರಣಿ ಎಂಬುದು ಕಮಲ ಅರಳುವ ಲೆಕ್ಕಾಚಾರ ಬಿಜೆಪಿಯದ್ದು.
2019 ರ ಲೋಕಸಭೆ ಚುನಾವಣೆಯಲ್ಲಿ ಮೊದಲ ಬಾರಿಗೆ ಚಾಮರಾಜನಗರದಲ್ಲಿ ಬಿಜೆಪಿ ಖಾತೆ ತೆರೆದಿತ್ತು. ಆ ಮೂಲಕ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಕ್ಷೇತ್ರದಲ್ಲಿ ವಿ.ಶ್ರೀನಿವಾಸಪ್ರಸಾದ್ ಅವರು ಗೆಲ್ಲುವ ಮೂಲಕ ಬಿಜೆಪಿ ಬಾವುಟ ಹಾರಿಸಿದ್ದರು. ಈಗ ಎರಡನೇ ಬಾರಿಗೆ ಕಮಲ ಅರಳಿಸುವ ಜೊತೆಗೆ ಸಿಎಂ ಸಿದ್ದರಾಮಯ್ಯ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಿಸಬೇಕೆಂದು ಕಮಲಕಲಿಗಳು ಪಣ ತೊಟ್ಟಿದ್ದಾರೆ.
ಮತ್ತೊಂದೆಡೆ ಸಚಿವ ಹೆಚ್.ಸಿ. ಮಹದೇವಪ್ಪ ಅವರು ತಮ್ಮ ಪುತ್ರನಿಗೆ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕ್ಷೇತ್ರದಲ್ಲಿ ಸಿಎಂ ಸಿದ್ದರಾಮಯ್ಯ ಅವರ ವರ್ಚಸ್ಸು, ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನದಿಂದಾಗಿ ಎಲ್ಲ ಸಮುದಾಯದ ಜನರು ಬೆಂಬಲ ನೀಡುವ ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಕ್ಷೇತ್ರದಲ್ಲಿ ಕೈ- ದಳದ್ದೇ ಪಾರುಪತ್ಯ:1962 ರಿಂದ ಈವರೆಗೆ ನಡೆದ ಲೋಕಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಅಧಿಪತ್ಯವನ್ನು ಮೆರೆದಿದೆ. ಕ್ಷೇತ್ರವು ಕಾಂಗ್ರೆಸ್ ಭದ್ರಕೋಟೆ ಎಂಬುದರಲ್ಲಿ ಎರಡು ಮಾತಿಲ್ಲ. ಪಕ್ಷ ಇಲ್ಲಿ ಬರೋಬ್ಬರಿ 10 ಬಾರಿ ಜಯಭೇರಿ ಬಾರಿಸಿದ್ದರೆ, 4 ಬಾರಿ ಜಾತ್ಯತೀತ ಜನತಾದಳ ಗೆದ್ದಿದೆ. 2019ರ ಲೋಕಸಭೆ ಚುನಾವಣೆಯಲ್ಲಿ ಮೊದಲ ಬಾರಿಗೆ ಬಿಜೆಪಿ ವಿಜಯ ಸಾಧಿಸಿತ್ತು.
ವರ್ಷ | ಗೆದ್ದ ಅಭ್ಯರ್ಥಿ | ಪಕ್ಷ |
1962 | ಎಂ.ಎಸ್.ಸಿದ್ದಯ್ಯ | ಕಾಂಗ್ರೆಸ್ |
1967 | ಎಂ.ಎಸ್.ಸಿದ್ದಯ್ಯ | ಕಾಂಗ್ರೆಸ್ |
1971 | ಎಂ.ಎಸ್.ಸಿದ್ದಯ್ಯ | ಕಾಂಗ್ರೆಸ್ |
1977 | ಬಿ.ರಾಚಯ್ಯ | ಕಾಂಗ್ರೆಸ್ |
1980 | ವಿ.ಶ್ರೀನಿವಾಸಪ್ರಸಾದ್ | ಕಾಂಗ್ರೆಸ್ |
1984 | ವಿ.ಶ್ರೀನಿವಾಸಪ್ರಸಾದ್ | ಕಾಂಗ್ರೆಸ್ |
1989 | ವಿ.ಶ್ರೀನಿವಾಸಪ್ರಸಾದ್ | ಕಾಂಗ್ರೆಸ್ |
1991 | ವಿ.ಶ್ರೀನಿವಾಸಪ್ರಸಾದ್ | ಕಾಂಗ್ರೆಸ್ |
1996 | ಎ.ಸಿದ್ದರಾಜು | ಜೆಡಿಎಸ್ |
1998 | ಎ.ಸಿದ್ದರಾಜು | ಜೆಡಿಎಸ್ |
1999 | ವಿ.ಶ್ರೀನಿವಾಸಪ್ರಸಾದ್ | ಜೆಡಿಯು |
2004 | ಕಾಗಲವಾಡಿ ಶಿವಣ್ಣ | ಜೆಡಿಎಸ್ |
2009 | ಆರ್.ಧ್ರುವನಾರಾಯಣ | ಕಾಂಗ್ರೆಸ್ |
2014 | ಆರ್.ಧ್ರುವನಾರಾಯಣ | ಕಾಂಗ್ರೆಸ್ |
2019 | ವಿ.ಶ್ರೀನಿವಾಸಪ್ರಸಾದ್ | ಬಿಜೆಪಿ |