ಕರ್ನಾಟಕ

karnataka

ETV Bharat / state

ಬಿಜೆಪಿ ಭದ್ರ ಕೋಟೆಯಾಗಿರುವ ಬೆಂಗಳೂರು ಉತ್ತರ ಕ್ಷೇತ್ರಕ್ಕೆ ಲಗ್ಗೆ ಇಡುವುದೇ ಕಾಂಗ್ರೆಸ್? - LOK SABHA ELECTION 2024 - LOK SABHA ELECTION 2024

ಬಿಜೆಪಿ ಭದ್ರ ಕೋಟೆಯಾಗಿರುವ ಬೆಂಗಳೂರು ಉತ್ತರ ಕ್ಷೇತ್ರವನ್ನು ಮತ್ತೆ ವಾಪಸ್​ ಪಡೆಯಲು ಕಾಂಗ್ರೆಸ್​ ಯತ್ನಿಸುತ್ತಿದೆ.

CONGRESS AND BJP  LOK SABHA CONSTITUENCY  BANGALORE NORTH CONSTITUENCY  BENGALURU
ಬಿಜೆಪಿ ಭದ್ರ ಕೋಟೆಯಾಗಿರುವ ಬೆಂಗಳೂರು ಉತ್ತರ ಕ್ಷೇತ್ರಕ್ಕೆ ಲಗ್ಗೆ ಇಡುವುದೇ ಕಾಂಗ್ರೆಸ್?

By ETV Bharat Karnataka Team

Published : Apr 20, 2024, 3:01 PM IST

Updated : Apr 20, 2024, 4:04 PM IST

ಬೆಂಗಳೂರು :ಎರಡು ದಿನಗಳಿಂದ ಬಿಜೆಪಿ ಭದ್ರಕೋಟೆಯಾಗಿರುವ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರವನ್ನು ಮತ್ತೆ ಕಾಂಗ್ರೆಸ್ ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಮುಂದಾಗಿದೆ. ಈ ಬಾರಿ ಶತಾಯಗತಾಯ ಮತ್ತೆ ವಶಕ್ಕೆ ಪಡೆಯಲು ಕಾಂಗ್ರೆಸ್ ಲಗ್ಗೆ ಇಟ್ಟಿದೆ.

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಉತ್ತರಾಧಿಕಾರಿ ಯಾರಾಗುತ್ತಾರೆ ಎಂಬ ಕುತೂಹಲವಿದೆಯಷ್ಟೇ, ಜನರ ನಿರ್ಲಿಪ್ತತೆಯಿಂದಾಗಿ ಕ್ಷೇತ್ರದಲ್ಲಿ ಚುನಾವಣಾ ಮೂಡ್ ಬದಲಾದಂತೆ ಕಾಣುತ್ತಿದೆ. ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಪಕ್ಷದ ಆಂತರಿಕ ಸಮಸ್ಯೆ, ಗೊಂದಲಗಳ ಕಾರಣ ಶೋಭಾ ಕರಂದ್ಲಾಜೆ ಅವರು ಬೆಂಗಳೂರು ಉತ್ತರಕ್ಕೆ ವರ್ಗಾವಣೆಯಾಗಿದ್ದಾರೆ. ಆದರೆ, ಇಲ್ಲೂ ಸಹ ಗೋ ಬ್ಯಾಕ್ ಸನ್ನಿವೇಶ ಶೋಭಾ ಕರಂದ್ಲಾಜೆ ಅವರಿಗೆ ಎದುರಾಗಿತ್ತು. ಆದರೂ, ಛಲಬಿಡದೆ ಅವರು ಚುನಾವಣಾ ಅಖಾಡದಲ್ಲಿ ಮುಂದುವರಿಸಿದ್ದಾರೆ. ಹಿಂದೆ ಯಶವಂತಪುರ ವಿಧಾನಸಭೆಗೆ ಸ್ಪರ್ಧಿಸಿದ್ದ ಕಾರಣ ಕರಂದ್ಲಾಜೆ ಅವರಿಗೆ ಮತದಾರರನ್ನು ಸೆಳೆಯುವ ವಿಶ್ವಾಸವಿದೆ. ಜೊತೆಗೆ ಮೋದಿ ಅಲೆ ಇರುವುದರಿಂದ ಗೆಲ್ಲುವ ವಿಶ್ವಾಸ ಹೊಂದಿದ್ದಾರೆ.

ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ

ಮಾಜಿ ಮುಖ್ಯಮಂತ್ರಿ ಹಾಗೂ ಮಾಜಿ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಅವರು ಕಳೆದ ಎರಡು ಬಾರಿ ಈ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ ಬಿಜೆಪಿಯ ಭದ್ರ ಕೋಟೆಯಾಗಿದೆ. ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ ಸ್ವಾತಂತ್ರ್ಯ ಬಂದಾಗನಿಂದಲೂ ಅಸ್ಥಿತ್ವದಲ್ಲಿದೆ. 1951ರಲ್ಲಿ ಮೊದಲ ಬಾರಿಗೆ ಕೇಶವ ಐಯ್ಯಂಗಾರ್ ಕಾಂಗ್ರೆಸ್ ಪಕ್ಷದಿಂದ ಸಂಸದರಾಗಿ ಆಯ್ಕೆಯಾಗಿದ್ದರು. ನಂತರ ವಿಧಾನಸೌಧ ನಿರ್ಮಾತೃ ದಿ. ಕೆಂಗಲ್ ಹನುಮಂತಯ್ಯ ಅವರು ಪ್ರತಿನಿಧಿಸಿದ್ದರು. 17 ಬಾರಿ ಲೋಕಸಭಾ ಚುನಾವಣೆ ನಡೆದಿದ್ದು, 12 ಬಾರಿ ಕಾಂಗ್ರೆಸ್ ಗೆಲುವನ್ನು ಸಾಧಿಸಿದೆ. ಒಂದು ಬಾರಿ ಜನತಾದಳ ಗೆದ್ದಿದ್ದು, ಸತತವಾಗಿ ನಾಲ್ಕು ಬಾರಿ ಬಿಜೆಪಿ ಗೆಲುವನ್ನು ಕಂಡಿದೆ.

ಒಳಪೆಟ್ಟು : ಯಶವಂತಪುರ ಕ್ಷೇತ್ರದ ಬಿಜೆಪಿ ಶಾಸಕ ಎಸ್. ಟಿ. ಸೋಮಶೇಖರ್ ಅವರು ಬಿಜೆಪಿ ಅಭ್ಯರ್ಥಿ ಪರ ನಿಲ್ಲದೆ, ಕಾಂಗ್ರೆಸ್ ಅಭ್ಯರ್ಥಿ ರಾಜೀವ್ ಗೌಡರಿಗೆ ಬೆಂಬಲ ಘೋಷಿಸಿ ಕೆಲಸ ಮಾಡುತ್ತಿರುವುದು ಬಿಜೆಪಿಗೆ ಒಳಪೆಟ್ಟು ಕೊಟ್ಟಿದೆ.

ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ

ಪರ, ವಿರೋಧ :ಮೋದಿ ಪರವಾದ ಅಲೆ, ಅಭಿವೃದ್ಧಿಯಲ್ಲಾದ ಸಾಧನೆ ನೋಡಬಹುದು. ಮತ್ತೆ ಅಧಿಕಾರಕ್ಕೆ ಬರುವ ಪಕ್ಷವೆಂಬ ಜನಸಾಮಾನ್ಯರ ಭಾವನೆ ಇದೆ. ಜನರು, ಕಾರ್ಯಕರ್ತರ ಜತೆ ನಿಕಟ ಸಂಪರ್ಕ, ಸಂಘಟನಾ ಬಲ ಶೋಭಾ ಕರಂದ್ಲಾಜೆ ಅವರಿಗಿದೆ. ಅದೇ ರೀತಿ ನೆಗೆಟಿವ್ ಸಹ ಇದೆ.

ಮುಖಂಡರ ಅಂತ ಕಲಹ, ಬಣಗಾರಿಕೆ, ಕಾರ್ಯಕರ್ತರಲ್ಲಿ ಉಂಟಾಗಿರುವ ನಿರುತ್ಸಾಹ. ಕ್ಷೇತ್ರದಲ್ಲಿ ಅಭಿವೃದ್ಧಿ ಕಾಣದಿರುವುದು.
ಇನ್ನು, ರಾಜ್ಯದಲ್ಲಿ ಆಡಳಿತದ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ ಲೋಕಸಭೆ ಚುನಾವಣೆಗಾಗಿ ಸಮರ್ಥ ಅಭ್ಯರ್ಥಿಗಾಗಿ ಹುಡುಕಾಡಿದ್ದು, ವಿಪರ್ಯಾಸ. ಅಳೆದೂ ತೂಗಿ, ತೀವ್ರ ಕಸರತ್ತು ನಡೆಸಿ ಪ್ರೊ. ಎಂ. ವಿ. ರಾಜೀವ್ ಗೌಡ ಅವರನ್ನು ಕಣಕ್ಕೆ ಇಳಿಸಿದೆ. ಆದರೆ ಕ್ಷೇತ್ರದ ಶಾಸಕರು, ಒಂದಿಷ್ಟು ಮತ ಸೆಳೆದು ತರಬಲ್ಲ ಮುಖಂಡರ ಜತೆಗೆ ಹೆಚ್ಚಿನ ಸಂಪರ್ಕವಿಲ್ಲ ಎಂಬ ಅಪಸ್ವರ ಪಕ್ಷದೊಳಗೆ ಹರಿದಾಡುತ್ತಿದೆ. ಸ್ವಾತಂತ್ರ್ಯ ಹೋರಾಟಗಾರರ ಮನೆತನ, ಪ್ರತಿಷ್ಠಿತ ಸಂಸ್ಥೆಯಲ್ಲಿ ಅಧ್ಯಾಪಕರಾಗಿ ಕೆಲಸ ಮಾಡಿದ ಅನುಭವ ರಾಜೀವ್ ಗೌಡರಿಗೆ ಇದೆ. ಲೋಕಸಭೆ ಚುನಾವಣೆಯಲ್ಲಿ ಅದೆಷ್ಟರ ಮಟ್ಟಿಗೆ ಫಲ ಕೊಡುತ್ತದೆಯೋ ಕಾದು ನೋಡಬೇಕು.

ಕಾಂಗ್ರೆಸ್ ಅಭ್ಯರ್ಥಿ ಪ್ರೊ.ಎಂ.ವಿ.ರಾಜೀವ್ ಗೌಡ

ಪರ, ವಿರೋಧ :ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿರುವುದರ ಜೊತೆಗೆ ಗ್ಯಾರಂಟಿ ಪ್ರಭಾವ ಮತದಾರರ ಮೇಲೆ ಬೀರಿದೆ. ಸಜ್ಜನರಾಗಿರುವ ರಾಜೀವ್ ಗೌಡ ಅವರು, ದೂರದೃಷ್ಟಿವುಳ್ಳವರು ಎಂಬ ಅಭಿಪ್ರಾಯವಿದೆ. ಸ್ಥಳೀಯರಾಗಿದ್ದರೂ ಮತದಾರರಿಗೆ ಅಭ್ಯರ್ಥಿಯ ಪರಿಚಯ ಇಲ್ಲದಿರುವುದು, ಹೈಪ್ರೊಫೈಲ್ ರಾಜಕಾರಣೆಯಾಗಿರುವ ಜನಸಾಮಾನ್ಯರಿಗೆ ಸಿಗುವುದಿಲ್ಲವೆಂಬ ಅಳುಕು ಸಹ ಇದೆ.

ಜಾತಿವಾರು ಲೆಕ್ಕಾಚಾರ ನೋಡುವುದಾದರೆ, ಒಟ್ಟು 13 ಲಕ್ಷ ಒಕ್ಕಲಿಗ ಮತದಾರರ ಮೇಲೆ ಬಿಜೆಪಿ, ಕಾಂಗ್ರೆಸ್ ಕಣ್ಣಿಟ್ಟು ಅದೇ ಸಮುದಾಯದ ಅಭ್ಯರ್ಥಿಗಳನ್ನು ಅಖಾಡಕ್ಕೆ ಇಳಿಸಿದ್ದಾರೆ. ಪರಿಶಿಷ್ಟ ಜಾತಿ-ಪಂಗಡ ಸೇರಿ 5 ಲಕ್ಷ, ಮುಸ್ಲಿಮರು-ಕ್ರೈಸ್ತರು 4.50 ಲಕ್ಷ ಮತಗಳು ಹಂಚಿಕೆಯಾದರೆ, ಗಮನಾರ್ಹ ಸಂಖ್ಯೆಯಲ್ಲಿರುವ ಇತರ ಹಿಂದುಳಿದ, ಸಾಮಾನ್ಯ ವರ್ಗದವರು ನಿರ್ಣಾಯಕರಾಗುವ ಲೆಕ್ಕಾಚಾರವಿದೆ.

ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ

ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಮತದಾರರ ಸಂಖ್ಯೆ ಪುರುಷರು 16,29,089, ಮಹಿಳೆಯರು- 15,44,415 ಸೇರಿದಂತೆ ಒಟ್ಟು 31,74,098 ಮತದಾರರಿದ್ದಾರೆ. 2019ರ ಲೋಕಸಭೆ ಚುನಾವಣೆಯಲ್ಲಿ ಶೇ.54.44 ಮತದಾನವಾಗಿತ್ತು. ಮತಗಳಿಕೆ ಪ್ರಮಾಣ-2019ರಲ್ಲಿ ಬಿಜೆಪಿ ಶೇ. 52.8 ಕಾಂಗ್ರೆಸ್ 43.4, ಜೆಡಿಎಸ್ - ಶೂನ್ಯ. 2014 ರಲ್ಲಿ ಬಿಜೆಪಿ ಶೇ. 52.9, ಕಾಂಗ್ರೆಸ್ ಶೇ. 36, ಜೆಡಿಎಸ್ ಶೇ. 6.8 ಗಳಿಸಿತ್ತು.

ಬಿಜೆಪಿಗೆ ಟ್ರಂಪ್ ಕಾರ್ಡ್ :ಪ್ರಧಾನಿ ಮೋದಿ ಜನಪ್ರಿಯತೆ, ವಿಕಸಿತ ಭಾರತ ಸಂಕಲ್ಪವು ಬಿಜೆಪಿಗೆ ಟ್ರಂಪ್ ಕಾರ್ಡ್. ಒಕ್ಕಲಿಗರಿಗೆ ಹೆಚ್ಚು ಟಿಕೆಟ್​ ನೀಡಿರುವುದು, ಪ್ರತಿಷ್ಠಿತ ಐಐಎಸ್‌ಸಿ, ಐಟಿ-ಬಿಟಿ ಸಂಸ್ಥೆಗಳು, ಜಕ್ಕೂರು ವಿಮಾನ ನಿಲ್ದಾಣ, ಇಸ್ಕಾನ್, ಕೃಷಿ ವಿವಿ, ದೊಡ್ಡ ಕೃಷಿ ಮಾರುಕಟ್ಟೆ, ಶೇ.79.1 ಸಾಕ್ಷರತೆ ಹೊಂದಿದ ಬೆಂಗಳೂರು ಉತ್ತರದಲ್ಲಿ ವರ್ಕೌಟ್ ಆದೀತೆ? ಎಂಬ ಪ್ರಶ್ನೆಗೆ ಉತ್ತರಕ್ಕಾಗಿ ಜೂ.4ರ ತನಕ ಕಾಯಬೇಕು.

ಬಿರುಸಿನ ಪ್ರಚಾರ :ಜೆಡಿಎಸ್ ಬೆಂಬಲದೊಂದಿಗೆ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಅವರು ಕ್ಷೇತ್ರದಲ್ಲಿ ನಿರಂತರ ಪ್ರಚಾರ ನಡೆಸುತ್ತಿದ್ದು, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಾಡಿದ ಅಭಿವೃದ್ಧಿ ಕೆಲಸಗಳು, ಈಗ ಘೋಷಣೆ ಮಾಡಿರುವ ಪ್ರಣಾಳಿಕೆ ಕುರಿತು ಪ್ರಚಾರ ನಡೆಸುತ್ತಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಪ್ರೊ. ರಾಜೀವ್ ಗೌಡ ಅವರು, ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಮುಂದಿಟ್ಟುಕೊಂಡು ಪ್ರಚಾರ ಮಾಡುತ್ತಿದ್ದಾರೆ. ಆರೋಪ, ಪ್ರತ್ಯಾರೋಪ, ಮಾತಿನ ವಾಗ್ದಾಳಿ ಹೀಗೆ, ಕ್ಷೇತ್ರದಲ್ಲಿ ಎರಡೂ ಪಕ್ಷಗಳ ಅಭ್ಯರ್ಥಿಗಳಿಂದ ಪ್ರಚಾರ ಜೋರಾಗಿಯೇ ನಡೆಯುತ್ತಿದೆ.

'ನಾನು ಹೊರಗಿನವಳಲ್ಲ. ಯಶವಂತಪುರ ವಿಧಾನಸಭೆ ಕ್ಷೇತ್ರವನ್ನು ಹಿಂದೆ ಪ್ರತಿನಿಧಿಸಿದ್ದು, ಜನರ ಒಡನಾಟ ಆಗಿನಿಂದಲೂ ಇಟ್ಟುಕೊಂಡಿದ್ದೇನೆ. ಇನ್ನು ಕೇಂದ್ರ ಸರ್ಕಾರದ ಹತ್ತು ವರ್ಷಗಳ ಸಾಧನೆ, ಅಭಿವೃದ್ಧಿ ಕಾರ್ಯಗಳು ಜನರ ಮುಂದಿವೆ. ಸಂಘಟನಾ ಬಲವಿದೆ. ಅದರ ಜೊತೆಗೆ ಈಗ ಜೆಡಿಎಸ್ ಕೈಜೋಡಿಸಿರುವ ಕಾರಣ ಮತ್ತಷ್ಟು ಬಲಬಂದಿದೆ' ಎಂದು ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

'ಮತದಾರರು ಬದಲಾವಣೆ ಬಯಸುತ್ತಿದ್ದಾರೆ. ಹೋದ ಕಡೆಯಲ್ಲೆಲ್ಲಾ ಉತ್ತಮ ಸ್ಪಂದನೆ ಸಿಗುತ್ತಿದೆ. ಹಿಂದೆ ಕಾಂಗ್ರೆಸ್ ಕೋಟೆಯಾಗಿದ್ದ ಬೆಂಗಳೂರು ಉತ್ತರ ಕ್ಷೇತ್ರ ಮತ್ತೆ ಕೈವಶವಾಗುತ್ತದೆ ಎಂಬ ವಿಶ್ವಾಸವಿದೆ. ಪ್ರಜ್ಞಾವಂತರು, ವಿವೇಚನಾಶೀಲರು ನಮ್ಮ ಕ್ಷೇತ್ರದಲ್ಲಿ ಹೆಚ್ಚಿದ್ದಾರೆ. ಜನರ ಕಷ್ಟದ ಸಮಯದಲ್ಲಿ ಗ್ಯಾರಂಟಿಗಳನ್ನು ರಾಜ್ಯ ಸರ್ಕಾರ ಕೊಟ್ಟಿದೆ. ನಮಗೆ ನೂರಕ್ಕೆ ನೂರರಷ್ಟು ಗೆಲ್ಲುವ ವಿಶ್ವಾಸವಿದೆ. ಕ್ಷೇತ್ರದಲ್ಲೂ ಮತದಾರರು ಕಾಂಗ್ರೆಸ್ ಬಗ್ಗೆ ಒಲವು ತೋರಿಸುತ್ತಿದ್ದಾರೆ' ಎಂದು ಕಾಂಗ್ರೆಸ್ ಅಭ್ಯರ್ಥಿ ಪ್ರೊ. ಎಂ.ವಿ. ರಾಜೀವ್ ಗೌಡ ಅವರು ಈಟಿವಿ ಭಾರತ್​ಗೆ ಹೇಳಿದ್ದಾರೆ.

ಓದಿ:ಲೋಕಸಭೆ ಚುನಾವಣೆ: ಮುಗಿದ ಮೊದಲ ಹಂತ- ಶೇ 60.03ರಷ್ಟು ಮತದಾನ - Voter Turnout

Last Updated : Apr 20, 2024, 4:04 PM IST

ABOUT THE AUTHOR

...view details