ಬೆಂಗಳೂರು :ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಎರಡು ಬಾರಿ ಗೆದ್ದು ಸಂಸದರಾಗಿರುವ ಮಾಜಿ ಕೇಂದ್ರ ಸಚಿವ ಡಿ. ವಿ ಸದಾನಂದಗೌಡರು ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಣೆ ಮಾಡಿರುವುದು ಎಲ್ಲರಿಗೂ ತಿಳಿದ ವಿಷಯ. ಆದರೆ, ಅಂದಿನಿಂದಲೂ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ ಚರ್ಚೆಯಾಗುತ್ತಲೇ ಇದೆ. ಮುಂಬರುವ ಲೋಕಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ಯಾರು?. ಬಿಜೆಪಿ ಭದ್ರಕೋಟೆಯನ್ನು ಈ ಬಾರಿ ಕಾಂಗ್ರೆಸ್ ಭೇದಿಸುವುದೇ? ಎಂಬೆಲ್ಲಾ ವಿಷಯಗಳು ಚರ್ಚೆಗೆ ಗ್ರಾಸವಾಗಿವೆ.
2004 ರಿಂದ 2019ರವರೆಗೂ ಸತತವಾಗಿ ನಾಲ್ಕು ಲೋಕಸಭೆ ಚುನಾವಣೆಯಿಂದ ಬಿಜೆಪಿ ಸಂಸದರನ್ನು ನೀಡಿದ ಉತ್ತರ ಲೋಕಸಭೆ ಕ್ಷೇತ್ರ, ಬಿಜೆಪಿಯ ಭದ್ರಕೋಟೆ ಆಗಿದ್ದು, ಸದಾನಂದಗೌಡ ನಿವೃತ್ತಿಯಾದ ಬೆನ್ನಲ್ಲೇ ಎರಡೂ ಪಕ್ಷಗಳಲ್ಲಿ ಅಭ್ಯರ್ಥಿಗಳ ದಂಡೇ ಈ ಕ್ಷೇತ್ರದ ಮೇಲೆ ಕಣ್ಣಿಟ್ಟಿದೆ. ಯಾವ ಮಾನದಂಡದ ಮೇಲೆ ಕೇಂದ್ರಕ್ಕೆ ಹೆಸರು ಶಿಫಾರಸು ಮಾಡಬೇಕು ಎಂಬ ತಲೆಬಿಸಿ ರಾಜ್ಯ ಬಿಜೆಪಿಗೆ ಎದುರಾಗಿದೆ.
ಸವಾಲುಗಳ ಸುಳಿಯಲ್ಲಿ ರಾಜ್ಯ ಬಿಜೆಪಿ:ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಈ ಬಾರಿ ಬಿಜೆಪಿ ಹೀನಾಯ ಸೋಲು ಕಂಡಿದೆ. ಆದರೆ, ಸೋತ ಅಭ್ಯರ್ಥಿಗಳು ಪಕ್ಷಕ್ಕೆ ದುಡಿದವರು. ಇವರನ್ನು ಪರಿಗಣಿಸಬೇಕಾ? ತಳಮಟ್ಟದ ಕಾರ್ಯಕರ್ತರಿಗೆ ಅವಕಾಶ ನೀಡಬೇಕಾ? ಪಕ್ಷದ ಮೇಲೆ ಮುನಿಸು ಇರುವವರಿಗೆ ಟಿಕೆಟ್ ನೀಡಬೇಕಾ? ಸ್ವಂತ ಕ್ಷೇತ್ರದಿಂದ ಟಿಕೆಟ್ ಕಳೆದುಕೊಂಡ ನಾಯಕರಿಗೆ ಆದ್ಯತೆ ನೀಡಬೇಕೇ? ಅಥವಾ ಸದಾನಂದ ಗೌಡರಿಗೆ ನಿವೃತ್ತಿ ಹಿಂಪಡೆದು ಮತ್ತೆ ನೀವೇ ಸ್ಪರ್ಧೆ ಮಾಡಿ ಎಂದು ಒತ್ತಡ ತರಬೇಕಾ? ಎಂಬ ಸವಾಲುಗಳ ಸುಳಿಯಲ್ಲಿ ರಾಜ್ಯ ಬಿಜೆಪಿ ಸಿಲುಕಿದೆ.
ಈ ಮಧ್ಯೆ ಬಿಜೆಪಿಯಲ್ಲಿ ಕೆಲ ಹೆಸರುಗಳು ಹಾಗೂ ಕಾರಣಗಳು ಮುನ್ನೆಲೆಗೆ ಬಂದಿವೆ. ಸಿ. ಟಿ ರವಿ ಅವರಿಗೆ ವಿಧಾನಸಭೆ ಚುನಾವಣೆಯಲ್ಲಿ ಸೋಲು ಆಗಿದೆ. ಆದರೆ ಪಕ್ಷದ ಪರವಾಗಿ ಗಟ್ಟಿ ಧ್ವನಿ ಎತ್ತುವ ನಾಯಕರಲ್ಲಿ ಇವರೂ ಒಬ್ಬರು. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆಗಿರುವ ಹಿನ್ನಲೆ ಡೆಲ್ಲಿ ನಂಟು ಹಾಗೂ ಕೇಂದ್ರ ಸರ್ಕಾರದ ಕಾರ್ಯವೈಖರಿ ಬಗ್ಗೆ ಇವರಿಗೆ ಚೆನ್ನಾಗಿ ತಿಳಿದಿದೆ. ಹಿಂದುತ್ವದ ಫೈರ್ ಬ್ರಾಂಡ್, ತಮಿಳುನಾಡು ಚುನಾವಣೆ ಸೇರಿದಂತೆ ಇತರ ಚುನಾವಣೆಯಲ್ಲಿ ಇವರು ಕೆಲಸ ಮಾಡಿರುವ ನಾಯಕರಾಗಿದ್ದಾರೆ.
ಇನ್ನು ಕಾಂಗ್ರೆಸ್‌ನಿಂದ ಬಿಜೆಪಿಗೆ ಬಂದ ಉಡುಪಿ ರಾಜಕೀಯ ನಾಯಕ ಪ್ರಮೋದ್ ಮಧ್ವರಾಜ್ಗೆ ಉಡುಪಿ, ಚಿಕ್ಕಮಗಳೂರು ಕ್ಷೇತ್ರದ ಟಿಕೆಟ್ ನೀಡಿದ ಸಂದರ್ಭದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಬೆಂಗಳೂರು ಉತ್ತರ ಟಿಕೆಟ್ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇದರ ಮಧ್ಯೆ ಕಾಂಗ್ರೆಸ್‌ನಿಂದ ಬಿಜೆಪಿಗೆ ಬಂದು ಮತ್ತೆ ಕಾಂಗ್ರೆಸ್ನತ್ತ ಮುಖಮಾಡಿರುವ ಎಸ್. ಟಿ ಸೋಮಶೇಖರ್ ಅವರ ಹೆಸರು ಹರಿದಾಡುತ್ತಿದೆ. ಅದೇ ರೀತಿ ಸುಮಲತಾ ಅಂಬರೀಷ್ ಅವರ ಹೆಸರು ಸಹಾ ಚಾಲ್ತಿಯಲ್ಲಿದೆ. ಇವೆಲ್ಲಾ ಕುತೂಹಲ ಮೂಡಿಸಿವೆ.
ಈ ಹೆಸರುಗಳಲ್ಲದೇ ಇನ್ನು ಅನೇಕ ಹೆಸರುಗಳು ಬಿಜೆಪಿ ವಲಯದಲ್ಲಿ ಕೇಳಿಬರುತ್ತಿದೆ. ಕೆಲ ಹಿರಿಯ ನಾಯಕರು, ಸಾಮಾನ್ಯ ಕಾರ್ಯಕರ್ತರಿಗೆ ಟಿಕೆಟ್ ನೀಡಿದರೆ, ಕಾರ್ಯಕರ್ತರಲ್ಲಿ ಹುಮ್ಮಸ್ಸು ಹೆಚ್ಚಾಗಲಿದೆ ಎಂದು ಸಲಹೆ ನೀಡಿದ್ದಾರೆ. ಒಟ್ಟಾರೆ ಹೇಳುವುದಾದರೆ, ಬೆಂಗಳೂರು ಉತ್ತರ ಲೋಕಸಭೆ ಕ್ಷೇತ್ರದಲ್ಲಿ ಯಾರಿಗೆ ಟಿಕೆಟ್ ನೀಡಬೇಕು ಎಂಬ ಸವಾಲು ಈಗ ರಾಜ್ಯಾಧ್ಯಕ್ಷ ಬಿ. ವೈ ವಿಜಯೇಂದ್ರ ಮುಂದಿದೆ. ರಾಜ್ಯ ಬಿಜೆಪಿ ನೀಡಿರುವ ಶಿಫಾರಸ್ಸಿಗೆ ಕೇಂದ್ರ ಬಿಜೆಪಿ ಹೈಕಮಾಂಡ್ ಅಸ್ತು ಅನ್ನುತ್ತಾ? ಅಥವಾ ಕೇಂದ್ರ ಬಿಜೆಪಿ ಸ್ವತಂತ್ರವಾಗಿ ಟಿಕೆಟ್ ಘೋಷಣೆ ಮಾಡುವುದೇ?. ಇದಕ್ಕೆ ಈ ವಾರದಲ್ಲೇ ಉತ್ತರ ಸಿಗಲಿದೆ.
ಭೌಗೋಳಿಕವಾಗಿ ವಿಸ್ತಾರಗೊಂಡಿದ್ದ ಬೆಂಗಳೂರು ಉತ್ತರ ಲೋಕಸಭೆ ಕ್ಷೇತ್ರವು 2008ರ ಕ್ಷೇತ್ರ ಪುನರ್ವಿಂಗಡಣೆ ನಂತರ ಕ್ಷೇತ್ರ ಕಡಿತವಾಯಿತು. ಕ್ಷೇತ್ರದ ರಾಜಕೀಯ, ಅಭಿವೃದ್ಧಿ ನಕ್ಷೆಯು ಈಗಿನ ಸ್ವರೂಪ ಹೋಲುವಂತಿದ್ದರೆ ಕಾಕತಾಳೀಯವೇನಲ್ಲ. ಘಟಾನುಘಟಿಗಳು ಪ್ರತಿನಿಧಿಸಿದ್ದ ಬೆಂಗಳೂರು ಉತ್ತರ ಲೋಕಸಭೆ ಕ್ಷೇತ್ರದಲ್ಲಿ ಎಲ್ಲ ಇದ್ದು ಏನೂ ಇಲ್ಲ ಎಂಬ ಪರಿಸ್ಥಿತಿಯಿದೆ.