ಕರ್ನಾಟಕ

karnataka

ETV Bharat / state

ಮುಡಾದಲ್ಲಿ ದೇವೇಗೌಡರ ಕುಟುಂಬಕ್ಕೆ 48 ನಿವೇಶನ, ಹೆಚ್​ಡಿಕೆಗೆ 60 ಸಾವಿರ ಚದರಡಿ ನಿವೇಶನ ಹಂಚಿಕೆ: ರಮೇಶ್ ಬಾಬು ಆರೋಪ - Muda Land Issue - MUDA LAND ISSUE

ಮಾಜಿ ಪ್ರಧಾನಿ ಹೆಚ್​.ಡಿ.ದೇವೇಗೌಡರು ತಮ್ಮ ಕುಟುಂಬಕ್ಕೆ 48 ನಿವೇಶನಗಳ ಹಂಚಿಕೆ ಮಾಡಿರುವುದನ್ನು 2011ರಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ಪ್ರಸ್ತಾಪಿಸಿದ್ದರು. ಇದರ ಬಗ್ಗೆ ಸಿಬಿಐ ತನಿಖೆಗೆ ಬಿಜೆಪಿ ಒತ್ತಾಯಿಸುವುದೇ ಎಂದು ಕಾಂಗ್ರೆಸ್ ಮುಖಂಡ ರಮೇಶ್ ಬಾಬು ಪ್ರಶ್ನೆ ಮಾಡಿದ್ದಾರೆ.

ಮುಡಾ ಸಂಬಂಧ ಕಾಂಗ್ರೆಸ್ ಮುಖಂಡ ರಮೇಶ್ ಬಾಬು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಮುಡಾ ಸಂಬಂಧ ಕಾಂಗ್ರೆಸ್ ಮುಖಂಡ ರಮೇಶ್ ಬಾಬು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. (ETV)

By ETV Bharat Karnataka Team

Published : Jul 13, 2024, 6:50 PM IST

Updated : Jul 13, 2024, 7:23 PM IST

ಬೆಂಗಳೂರು:ಮುಡಾದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ತಮ್ಮ ಕುಟುಂಬಕ್ಕೆ 48 ನಿವೇಶನಗಳ ಹಂಚಿಕೆ ಮಾಡಿರುವುದನ್ನು 2011ರಲ್ಲಿ ಬಿ.ಎಸ್​.ಯಡಿಯೂರಪ್ಪ ಸಿಎಂ ಆಗಿದ್ದಾಗ ಸಭಾಪತಿಗೆ ದಾಖಲೆಗಳನ್ನು ಸಲ್ಲಿಕೆ ಮಾಡಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ರಮೇಶ್ ಬಾಬು ತಿಳಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ''2011ರಲ್ಲಿ ಮುಡಾ ನಿವೇಶನ ಅಕ್ರಮ ಹಂಚಿಕೆ ಕುರಿತು ಬಿಜೆಪಿಯಿಂದ ಜೆಡಿಎಸ್ ಮೇಲೆ ಗುರುತರ ಆರೋಪ ಇದೆ. ಮುಡಾ ಹಗರಣಕ್ಕೆ ಸಂಬಂಧಪಟ್ಟಂತೆ 17-03-2011ರಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ವಿಧಾನ ಪರಿಷತ್ತಿನ ಸಭಾಪತಿಗಳಿಗೆ ದಾಖಲೆಗಳನ್ನು ಸಲ್ಲಿಕೆ ಮಾಡಿ ದೇವೇಗೌಡರು ತಮ್ಮ ಕುಟುಂಬಕ್ಕೆ 48 ನಿವೇಶನಗಳ ಹಂಚಿಕೆ ಮಾಡಿರುವುದನ್ನು ಪ್ರಸ್ತಾಪಿಸಿದ್ದಾರೆ. ಅವರ ಅಷ್ಟು ಆರೋಪಗಳು ವಿಧಾನ ಪರಿಷತ್ತಿನ ನಡವಳಿಕೆಗಳಲ್ಲಿ ದಾಖಲಾಗಿರುತ್ತದೆ'' ಎಂದು ಹೇಳಿದರು.

''ಈ ಆರೋಪದಲ್ಲಿ ಹೆಚ್.ಡಿ.ಕುಮಾರಸ್ವಾಮಿರವರಿಗೆ 300x200 ಚ.ಅಡಿ ಅಳತೆಯ (ಸುಮಾರು 60,000 ಚ.ಅಡಿ) ನಿವೇಶನ ಸಂಖ್ಯೆ17 (ಬಿ) ಹಂಚಿಕೆಯಾಗಿರುವುದಾಗಿ ಹೇಳಿದ್ದಾರೆ. ಅದೇ ರೀತಿ ಅವರ ಕುಟುಂಬದ ಸವಿತಾ ಕೋಂ ಬೀರೇಗೌಡ ಎಂಬುವರಿಗೆ 130x110 ಅಡಿ (ಸುಮಾರು 14,300 ಅಡಿ) ಅಕ್ರಮ ಹಂಚಿಕೆಯ ಕುರಿತು ಆರೋಪ ಮಾಡಿದ್ದಾರೆ. ಇದರ ಬಗ್ಗೆ ಸಿಬಿಐ ತನಿಖೆಗೆ ಬಿಜೆಪಿ ಒತ್ತಾಯಿಸುವುದೇ?'' ಎಂದು ಪ್ರಶ್ನಿಸಿದ್ದಾರೆ.

''ಅಂದಿನ ಬಿಜೆಪಿ ಮುಖ್ಯಮಂತ್ರಿ ಯಡಿಯೂರಪ್ಪನವರು ಸದನದಲ್ಲಿ ಮುಡಾ ಅಕ್ರಮ ನಿವೇಶನ ಹಂಚಿಕೆ ಕುರಿತು ದೇವೇಗೌಡರ ಕುಟುಂಬದ ಮೇಲೆ ಮಾಡಿರುವ ಗಂಭೀರ ಆರೋಪದ ಮೇಲೆ ತನಿಖೆಗೆ ಒತ್ತಾಯಿಸುವ ತಾಕತ್ತು ಬಿಜೆಪಿ ನಾಯಕರಿಗೆ ಇದೆಯೇ?, ಯಡಿಯೂರಪ್ಪನವರು ದಾಖಲೆಗಳನ್ನು ಸಭಾಪತಿಗಳಿಗೆ ಮಂಡಿಸಿದರೂ ಇಲ್ಲಿಯವರೆಗೆ ಬಿಜೆಪಿ ಯಾವ ಕಾರಣಕ್ಕೆ ಮೌನವಾಯಿತು'' ಎಂದು ಪ್ರಶ್ನಿಸಿದರು.

''ಅವಕಾಶವಾದದ ರಾಜಕಾರಣ ಮತ್ತು ಅನುಕೂಲ ಸಿಂಧು ರಾಜಕಾರಣಕ್ಕೆ ಶರಣಾಗಿರುವ ಬಿಜೆಪಿ, ಮುಡಾ ಹಗರಣದಲ್ಲಿ ಯಾವ ಯಾವ ಬಿಜೆಪಿ ನಾಯಕರು ಎಷ್ಟು ಎಷ್ಟು ನಿವೇಶನಗಳನ್ನು ಪಡೆದುಕೊಂಡಿದ್ದಾರೆ ಎಂಬುದನ್ನು ಬಹಿರಂಗಗೊಳಿಸಲಿ. ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗಲೇ ಮೈಸೂರಿನ ಮುಡಾದಲ್ಲಿ ಹೆಚ್ಚು ಹಗರಣಗಳು ನಡೆದಿರುತ್ತವೆ'' ಎಂದು ಆರೋಪಿಸಿದ್ದಾರೆ.

''ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಪರಿಹಾರ ರೂಪದಲ್ಲಿ ಭೂ ಮಾಲೀಕರಿಗೆ ನಿವೇಶನ ನೀಡಿರುವುದನ್ನು ಬಿಜೆಪಿ ರಾಜಕೀಯ ಕಾರಣಕ್ಕಾಗಿ ಆರೋಪ ಮಾಡುತ್ತಿದೆ. ಆದರೆ ಯಾವುದೇ ಭೂಮಿಯನ್ನು ಕಳೆದುಕೊಳ್ಳದೆ ತಮ್ಮ ರಾಜಕೀಯ ಪ್ರಭಾವದ ಮೂಲಕ ಒಂದೇ ಕುಟುಂಬ 48 ನಿವೇಶನಗಳನ್ನು ಪಡೆದುಕೊಂಡ ಅಕ್ರಮ ಕುರಿತು ಬಿಜೆಪಿ ಚಕಾರ ಎತ್ತುವುದಿಲ್ಲ. ಅದೇ ರೀತಿ ಒಬ್ಬನೇ ವ್ಯಕ್ತಿಗೆ ಯಾವ ಆಧಾರದ ಮೇಲೆ 60 ಸಾವಿರ ಅಡಿ ಅಳತೆಯ ನಿವೇಶನ ಮಂಜೂರಾಗಿತ್ತು?. ಸದನದ ಒಳಗೆ ದಾಖಲೆಯಿಟ್ಟು ಮಾತನಾಡಿದ ಯಡಿಯೂರಪ್ಪನವರಿಗೆ ಸಾರ್ವಜನಿಕವಾಗಿ ಮಾತನಾಡಲು ಸಾಧ್ಯವಾಗುತ್ತಿಲ್ಲ ಏಕೆ'' ಎಂದು ಪ್ರಶ್ನಿಸಿದರು.

ಬೊಮ್ಮಾಯಿ, ಶ್ರೀರಾಮುಲು ಮೇಲೂ ಕೇಸ್ ಹಾಕಬೇಕು: ''ಅರಸು ಟ್ರಕ್ ಟರ್ಮಿನಲ್ ಅಕ್ರಮ ಪ್ರಕರಣದಲ್ಲಿ ಹಿಂದಿನ ಎಂಡಿ, ಟರ್ಮಿನಲ್​ನ ಮಾಜಿ ಅಧ್ಯಕ್ಷ, ಮಾಜಿ ಎಂಎಲ್​​ಸಿ ಡಿ.ಎಸ್.ವೀರಯ್ಯ ಅವರನ್ನು ಬಂಧಿಸಲಾಗಿದೆ‌. 50 ಕೋಟಿ ಅವ್ಯವಹಾರ ಆರೋಪದಲ್ಲಿ ಈ ಬಂಧನವಾಗಿದೆ. ಅಂದು ಬೊಮ್ಮಾಯಿ ಸಿಎಂ ಆಗಿದ್ದರು. ಶ್ರೀರಾಮುಲು ಅಂದು ಸಾರಿಗೆ ಸಚಿವರಾಗಿದ್ದರು. ಇದೇ ವೇಳೆಯೇ ಈ ಅಕ್ರಮದ ಆರೋಪ ಬಂದಿದೆ. ಅವ್ಯವಹಾರದ ಬಗ್ಗೆ ಎಂಡಿ ಪತ್ರ ಬರೆಯುತ್ತಾರೆ. ಪತ್ರವನ್ನು ಶ್ರೀರಾಮುಲು ಗಮನಹರಿಸಲ್ಲ. ಬೊಮ್ಮಾಯಿ ಮೌಖಿಕ ಆದೇಶ ನೀಡ್ತಾರಷ್ಟೇ. ಹೀಗಾಗಿ ಅಕ್ರಮದ ಬಗ್ಗೆ ಯಾವುದೇ ಕ್ರಮ ಆಗಿಲ್ಲ'' ಎಂದು ಆರೋಪಿಸಿದರು.

''ನಮ್ಮ ಸರ್ಕಾರ ಬಂದ ನಂತರ ಪ್ರಕರಣ ದಾಖಲಾಗಿದೆ. ಸರ್ಕಾರ ಸಿಐಡಿಗೆ ಕೇಸ್ ಕೊಟ್ಟಿದೆ. ಸಿಐಡಿಗೆ ಕೊಟ್ಟ ನಂತರ ಎಂಡಿ ಬಂಧಿಸಲಾಗಿದೆ. ಡಿ.ಎಸ್.ವೀರಯ್ಯ ಅವರನ್ನೂ ಬಂಧಿಸಲಾಗಿದೆ. ವೀರಯ್ಯ ಮೂರು ತಿಂಗಳು ತಲೆಮರೆಸಿಕೊಂಡಿದ್ದರು. ವೀರಯ್ಯ ಅವರಿಗೆ ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ರಕ್ಷಣೆ ಕೊಟ್ಟಿದ್ದರು.‌ ಅಲ್ಲಿಂದಲೇ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಆದರೆ ಅರ್ಜಿಯನ್ನ ಕೋರ್ಟ್ ಮಾನ್ಯ ಮಾಡಿಲ್ಲ. ಹೀಗಾಗಿ ಸಿಐಡಿ ಪೊಲೀಸರು ಬಂಧಿಸಿದ್ದಾರೆ'' ಎಂದು ಮಾಹಿತಿ ನೀಡಿದರು.

''ಈ ಪ್ರಕರಣದಲ್ಲಿ ಕೇವಲ 50 ಕೋಟಿ ರೂ. ಅಕ್ರಮವಲ್ಲ. ಅದಕ್ಕಿಂತ ಹೆಚ್ಚು ಹಣ ಅವ್ಯವಹಾರವಾಗಿದೆ. ಅಂದಿನ ಎಂಡಿ, ಅಧ್ಯಕ್ಷರು ಇದರಲ್ಲಿ ಭಾಗಿಯಾಗಿದ್ದಾರೆ. ಸರ್ಕಾರ ಇದರ ಬಗ್ಗೆ ಗಂಭೀರವಾಗಿ ಪರಿಣಗಣಿಸಬೇಕು. ಬೊಮ್ಮಾಯಿ, ಶ್ರೀರಾಮುಲು ಮೇಲೂ ಕೇಸ್ ಹಾಕಬೇಕು'' ಎಂದು ಒತ್ತಾಯಿಸಿದರು.

ಇದನ್ನೂ ಓದಿ:ಸಿಎಂ ಪತ್ನಿ ಪರಿಹಾರ ಪಡೆದಿರುವ ಜಮೀನು ಮುಡಾಗೆ ಸೇರಿದ್ದು: ಕುಮಾರಸ್ವಾಮಿ

Last Updated : Jul 13, 2024, 7:23 PM IST

ABOUT THE AUTHOR

...view details