ಕರ್ನಾಟಕ

karnataka

ETV Bharat / state

ಶರಾವತಿ ಪಂಪ್ಡ್ ಸ್ಟೋರೇಜ್ ವಿದ್ಯುತ್ ಉತ್ಪಾದನಾ ಯೋಜನೆಗೆ ಷರತ್ತುಬದ್ಧ ಅನುಮೋದನೆ; 9 ಸಾವಿರ ಮರಗಳ ನಾಶ - SHARAVATHI PUMPED STORAGE PROJECT

ಶರಾವತಿ ಪಂಪ್ಡ್ ಸ್ಟೋರೇಜ್ ವಿದ್ಯುತ್ ಉತ್ಪಾದನಾ ಯೋಜನೆಗೆ ಷರತ್ತುಬದ್ಧ ಅನುಮೋದನೆ ಸಿಕ್ಕಿದೆ. ಸಿಎಂ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

State Wildlife Board Meeting
ರಾಜ್ಯ ವನ್ಯಜೀವಿ ಮಂಡಳಿ ಸಭೆ (CM X Post)

By ETV Bharat Karnataka Team

Published : Jan 29, 2025, 7:12 AM IST

ಬೆಂಗಳೂರು:ಗೇರುಸೊಪ್ಪ ಮತ್ತು ಲಿಂಗನಮಕ್ಕಿ ಜಲಾಶಯಗಳ ನಡುವೆ ಶರಾವತಿ ವನ್ಯಜೀವಿಧಾಮ ಅರಣ್ಯ ಪ್ರದೇಶದಲ್ಲಿ ನಡೆಯಲಿರುವ ಶರಾವತಿ ಪಂಪ್ಡ್‌ ಸ್ಟೋರೇಜ್‌ ವಿದ್ಯುತ್ ಉತ್ಪಾದನಾ ಯೋಜನೆ ಕಾಮಗಾರಿಗೆ ಅನುಮೋದನೆ ನೀಡಲಾಗಿದೆ.

ಗೃಹ ಕಚೇರಿ ಕೃಷ್ಣಾದಲ್ಲಿ ಮಂಗಳವಾರ ನಡೆದ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ರಾಜ್ಯ ವನ್ಯಜೀವಿ ಮಂಡಳಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಶರಾವತಿ ಪಂಪ್ಡ್‌ ಸ್ಟೋರೇಜ್‌ ವಿದ್ಯುತ್ ಉತ್ಪಾದನಾ ಯೋಜನೆ ಶರಾವತಿ ವನ್ಯಜೀವಿಧಾಮ ವ್ಯಾಪ್ತಿಯಲ್ಲಿ ಅನುಷ್ಠಾನಗೊಳ್ಳುತ್ತಿದೆ. ಯೋಜನೆಗೆ 125 ಎಕರೆ ಅರಣ್ಯ ಭೂಮಿ ನೀಡುವ ಸಂಬಂಧ ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಯೋಜನೆಗೆ ಅರಣ್ಯ ಪ್ರದೇಶದ ಸುಮಾರು 16 ಸಾವಿರ ಮರಗಳನ್ನು ಕಡಿಯಬೇಕಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದರು.

9 ಸಾವಿರ ಮರ ಕಡಿಯಲು ಸೂಚನೆ, ಸಿಂಗಳಿಕಗಳಿಗೆ ಧಕ್ಕೆಯಾಗದಂತೆ ಯೋಜನೆ: ಬಳಿಕ 16 ಸಾವಿರ ಮರಗಳ ಬದಲಿಗೆ 8ರಿಂದ 9 ಸಾವಿರ ಮರಗಳು ಮಾತ್ರ ಕಡಿಯುವಂತೆ ಸೂಚನೆ ನೀಡಲಾಯಿತು. ಜೊತೆಗೆ, ಶರಾವತಿ ವನ್ಯಜೀವಿಧಾಮ ಅಪರೂಪದ ವನ್ಯಜೀವಿಯಾದ ಸಿಂಹಬಾಲ ಸಿಂಗಳಿಕಗಳ ವಾಸಸ್ಥಾನವಾಗಿದೆ. ಯೋಜನೆ ಕಾಮಗಾರಿಯಿಂದ ಅವುಗಳ ವಾಸಸ್ಥಾನಕ್ಕೆ ಯಾವುದೇ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು ಎಂದು ತಿಳಿಸಲಾಯಿತು. ಕೇವಲ 125 ಎಕರೆ ಅರಣ್ಯ ಪ್ರದೇಶದಲ್ಲಷ್ಟೇ ಕಾಮಗಾರಿ ನಡೆಸಬೇಕು. ಅದನ್ನು ಮೀರಿ ಯೋಜನೆ ಕೈಗೊಳ್ಳಬಾರದೆಂಬ ಷರತ್ತುಗಳನ್ನು ವಿಧಿಸಿ ಅನುಮೋದನೆ ನೀಡಲಾಯಿತು.

ರಾಜ್ಯ ವನ್ಯಜೀವಿ ಮಂಡಳಿ ಸಭೆಯಲ್ಲಿ ನೀಡಲಾಗಿರುವ ಅನುಮೋದನೆಯನ್ನು ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಅನುಮೋದನೆಗೆ ಮಂಡಿಸಲಾಗುವುದು. ಅಲ್ಲಿ ಅನುಮೋದನೆ ದೊರೆತ ನಂತರ ಯೋಜನೆ ಕಾಮಗಾರಿಗೆ ಚಾಲನೆ ದೊರೆಯಲಿದೆ. ಒಟ್ಟು 2 ಸಾವಿರ ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದನೆ ಸಾಮರ್ಥ್ಯದ ಶರಾವತಿ ಪಂಪ್ಡ್‌ ಸ್ಟೋರೇಜ್‌ ವಿದ್ಯುತ್ ಉತ್ಪಾದನಾ ಯೋಜನೆ ಇದಾಗಿದೆ.

2 ಸಾವಿರ ಮೆಗಾ ವ್ಯಾಟ್‌ ವಿದ್ಯುತ್‌ ಉತ್ಪಾದನೆ ಗುರಿ:ಮೊದಲ ಹಂತದಲ್ಲಿ 10 ಘಟಕಗಳಿಂದ ಸದ್ಯ 1 ಸಾವಿರ ಮೆಗಾ ವ್ಯಾಟ್‌ ವಿದ್ಯುತ್‌ ಉತ್ಪಾದಿಸಲಾಗುತ್ತಿದೆ. ಈ ಯೋಜನೆ 66 ಸಾವಿರ ಎಕರೆ ವಿಸ್ತೀರ್ಣದ ಅರಣ್ಯ ಪ್ರದೇಶದಲ್ಲಿ ಅನುಷ್ಠಾನಗೊಳಿಸಲಾಗಿದೆ. ಇದೀಗ ಎರಡನೇ ಹಂತದ ಯೋಜನೆಯು 125 ಎಕರೆ ವಿಸ್ತೀರ್ಣದ ಅರಣ್ಯ ಪ್ರದೇಶದಲ್ಲಿ ಅನುಷ್ಠಾನಗೊಂಡು ಪೂರ್ಣ 2 ಸಾವಿರ ಮೆಗಾ ವ್ಯಾಟ್‌ ವಿದ್ಯುತ್‌ ಉತ್ಪಾದಿಸುವ ಗುರಿ ಹೊಂದಲಾಗಿದೆ. ಗೇರುಸೊಪ್ಪ ಮತ್ತು ಲಿಂಗನಮಕ್ಕಿ ಜಲಾಶಯಗಳಿಂದ ವಿದ್ಯುತ್‌ ಉತ್ಪಾದನಾ ಘಟಕಗಳಿಗೆ ಸುರಂಗ ಮಾರ್ಗ ನಿರ್ಮಿಸಿ ನೀರು ಹಾಯಿಸಲಾಗುತ್ತದೆ.

ಸಭೆಯಲ್ಲಿ ಅರಣ್ಯ ಸಚಿವ ಈಶ್ವರ್‌ ಖಂಡ್ರೆ, ವಿಧಾನಸಭೆ ಆಡಳಿತ ಪಕ್ಷದ ಮುಖ್ಯ ಸಚೇತಕ ಅಶೋಕ್ ಪಟ್ಟಣ್‌, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್‌ ಅಹಮದ್‌, ಶಾಸಕರಾದ ಪೊನ್ನಣ್ಣ, ಗಣೇಶ್‌ ಪ್ರಸಾದ್‌, ಪುಟ್ಟಣ್ಣ, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಎಲ್‌.ಕೆ.ಅತೀಕ್‌ ಅಹಮದ್‌, ವನ್ಯಜೀವಿ ಮಂಡಳಿ ಸದಸ್ಯರು ಇದ್ದರು.

ಇದನ್ನೂ ಓದಿ:ರಾಜ್ಯದ ಜಲಾನಯನ ಅಭಿವೃದ್ಧಿ ಯೋಜನೆಗಳ ಸಾಧನೆಗೆ ಕೇಂದ್ರದ ಮೆಚ್ಚುಗೆ: ₹99 ಕೋಟಿ ಮಂಜೂರು

ABOUT THE AUTHOR

...view details