ಮೈಸೂರು: ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಕುಟುಂಬದ ವಿರುದ್ಧ ಸುಳ್ಳು ಸುದ್ದಿಗಳನ್ನು ಹರಡುತ್ತಿರುವ ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಅವರನ್ನು ಬಂಧಿಸುವಂತೆ ಮೈಸೂರು ಜಿಲ್ಲಾ ಕಾಂಗ್ರೆಸ್ ಮುಖಂಡರು ಮಂಗಳವಾರ ದೇವರಾಜ ಪೊಲೀಸ್ ಠಾಣೆಗೆ ದೂರು ನೀಡಿದರು.
ಸ್ನೇಹಮಯಿ ಕೃಷ್ಣ ಅವರು ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಕುಟುಂಬ ಹಾಗೂ ಮುಖ್ಯಮಂತ್ರಿಗಳ ವಿರುದ್ಧ ವ್ಯವಸ್ಥಿತವಾಗಿ ಸಾಮಾಜಿಕ ಜಾಲತಾಣಗಳು ಹಾಗೂ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದಾರೆ. ಈ ಕೂಡಲೇ ಅವರನ್ನು ಬಂಧಿಸಬೇಕು ಹಾಗೂ ಸಿಎಂ ಪತ್ನಿ ಶ್ರೀಮತಿ ಪಾರ್ವತಿ ಸಿದ್ದರಾಮಯ್ಯ ನಿವೇಶನ ನೋಂದಣಿ ಮುದ್ರಾಂಕ ಶುಲ್ಕವನ್ನು ಮುಡಾದ ವಿಶೇಷ ತಹಶೀಲ್ದಾರ್ ಪಾವತಿಸಿದ್ದಾರೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ, ಅವರ ನಿವೇಶನಕ್ಕೆ ಅವರೇ 550 ರೂಪಾಯಿ ಶುಲ್ಕ ಪಾವತಿಸಿದ್ದಾರೆ. ಅದರೂ, ಈ ವಿಚಾರದಲ್ಲಿ ಸ್ನೇಹಮಯಿ ಕೃಷ್ಣ ಸಿಎಂ ಹಾಗೂ ಕುಟುಂಬದ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.