ಹುಬ್ಬಳ್ಳಿ:"ಬಳ್ಳಾರಿಯಲ್ಲಿ ಬಾಣಂತಿಯರ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಸಭೆ ಮಾಡಿ ಕಳಪೆ ಔಷಧ ಕೊಟ್ಟಿರುವವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಅವರನ್ನು ಬ್ಲ್ಯಾಕ್ ಲಿಸ್ಟ್ಗೆ ಹಾಕಿ ವಿಚಾರಣೆ ನಡೆಸಲು ಹೇಳಿದ್ದೇನೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ನಗರದಲ್ಲಿಂದು ಮಾಧ್ಯಮದವರ ಜೊತೆಗೆ ಮಾತನಾಡಿದ ಅವರು, "ಡ್ರಗ್ ಕಂಟ್ರೋಲರ್ ಅವರನ್ನು ಅಮಾನತು ಮಾಡಲಾಗಿದೆ. ಇದರ ಜೊತೆಗೆ ಒಂದು ಕಮಿಟಿ ರಚಿಸಲಾಗಿದೆ. ಆ ಕಮಿಟಿ ವರದಿ ನೀಡಿದ ಮೇಲೆ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ" ಎಂದರು.
ಸಿಎಂ ಸಿದ್ದರಾಮಯ್ಯ ಹೇಳಿಕೆ (ETV Bharat) "ಸಾವನ್ನಪ್ಪಿರುವ ಬಾಣಂತಿಯರ ಕುಟುಂಬಕ್ಕೆ ಐದು ಲಕ್ಷ ಪರಿಹಾರ ನೀಡಲಾಗುವುದು. ಕಳಪೆ ಗುಣಮಟ್ಟದ ಔಷಧ ಖರೀದಿಗೆ ನಾನೇನು ಆದೇಶ ಮಾಡಿದ್ದೆನಾ? ಬಿಜೆಪಿಯವರು ಕೋವಿಡ್ ಹಗರಣದಲ್ಲಿ ಕಳಪೆ ಔಷಧ ಖರೀದಿಸಿದ್ದಾರೆ. ಅಲ್ಲದೆ ಒಂದಕ್ಕೆ ಹತ್ತು ಪಟ್ಟು ದುಡ್ಡು ಕೊಟ್ಟು, ಟೆಂಡರ್ ಕರೆಯದೆ ಖರೀದಿ ಮಾಡಿದ್ದಾರೆ. ಅಂದಿನ ಸಿಎಂ ಮತ್ತು ಆರೋಗ್ಯ ಸಚಿವರು ಅದಕ್ಕೆ ಹೊಣೆ" ಎಂದು ಹೇಳಿದರು.
ಇನ್ನು, ಅಧಿವೇಶನದಲ್ಲಿ ಪಂಚಮಸಾಲಿ ಮೀಸಲಾತಿಗಾಗಿ ಹೋರಾಟದ ವಿಚಾರಕ್ಕೆ ಪ್ರತಿಕ್ರಿಯಿಸಿ, "ಪ್ರಜಾಪ್ರಭುತ್ವದಲ್ಲಿ ಹೋರಾಟ ಮಾಡಲು ಎಲ್ಲರಿಗೂ ಅವಕಾಶವಿದೆ. ಅದಕ್ಕೆ ನನ್ನ ವಿರೋಧ ಇಲ್ಲ. ನಮ್ಮ ಜೊತೆಗೆ ಮಾತನಾಡಿದ್ರೆ ಅದಕ್ಕೆ ಸಮಂಜಸ ಉತ್ತರ ನೀಡುತ್ತೇವೆ" ಎಂದು ತಿಳಿಸಿದರು.
"ನಾಳೆಯಿಂದ ಬೆಳಗಾವಿ ಅಧಿವೇಶನ ಆರಂಭವಾಲಿದೆ. ವಿರೋಧ ಪಕ್ಷದವರು ಯಾವೆಲ್ಲ ವಿಷಯಗಳನ್ನು ಚರ್ಚೆ ಮಾಡುತ್ತಾರೋ ನೋಡೋಣ. ನಮ್ಮ ಸರ್ಕಾರದಲ್ಲಿ ಯಾವುದೇ ಆರ್ಥಿಕ ಸಂಕಷ್ಟ ಇಲ್ಲ. ಬಿಜೆಪಿಯವರು ಸುಳ್ಳು ಹೇಳುತ್ತಿದ್ದಾರೆ" ಎಂದರು.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿಕೆಗೆ ತಿರುಗೇಟು ನೀಡಿದ ಸಿಎಂ, "ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳನ್ನು ವಿರೋಧ ಮಾಡುತ್ತಿರುವ ಬಿಜೆಪಿಯವರು ಬೇರೆ ರಾಜ್ಯಗಳಲ್ಲಿ ಅವರೇ ಗ್ಯಾರೆಂಟಿ ಯೋಜನೆಗಳನ್ನು ಘೋಷಣೆ ಮಾಡ್ತಾರೆ. ಇದು ಇಬ್ಬದಿತನ ಅಲ್ಲವಾ? ಬಿಜೆಪಿಯವರಿಗೆ ಸ್ಪಷ್ಟವಾದ ನಿಲುವು ಇಲ್ಲ. ನಮ್ಮ ಸರ್ಕಾರ ಬಜೆಟ್ನಲ್ಲಿ ಘೋಷಣೆ ಮಾಡಿದ ಯಾವ ಕೆಲಸಗಳು ಸ್ಥಗಿತವಾಗಿವೆ ಹೇಳಿ?" ಎಂದು ಪ್ರಶ್ನಿಸಿದರು.
ಇದನ್ನೂ ಓದಿ:ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಬಾಣಂತಿಯರ ಕುಟುಂಬಗಳಿಗೆ ₹5 ಲಕ್ಷ ಪರಿಹಾರ: ಸಿಎಂ ಘೋಷಣೆ