ಬೆಂಗಳೂರು: ಬೆಂಗಳೂರಿಗೆ ಹೊಸ ರೂಪ ನೀಡುವ 2024ನೇ ಸಾಲಿನ ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕದ ಕುರಿತು ಸಮಗ್ರವಾಗಿ ಚರ್ಚಿಸಲು ಸದನ ಸಮಿತಿ ರಚನೆ ಮಾಡುವುದಾಗಿ ಡಿಸಿಎಂ ಡಿ.ಕೆ.ಶಿವಕುಮಾರ್ ವಿಧಾನಸಭೆಯಲ್ಲಿ ತಿಳಿಸಿದರು.
ಶಾಸನ ರಚನಾ ಕಲಾಪದಲ್ಲಿ ವಿಧೇಯಕವನ್ನು ಪರ್ಯಾಲೋಚನೆಗಾಗಿ ಮಂಡಿಸಿದ ಡಿಸಿಎಂ ಶಿವಕುಮಾರ್, "ಬೆಂಗಳೂರಿಗೆ ಹೊಸ ರೂಪ ನೀಡುವ ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ ಇದಾಗಿದೆ. ಬೆಂಗಳೂರಿನ ಜನಸಂಖ್ಯೆ 1 ಕೋಟಿ 40 ಲಕ್ಷದಷ್ಟಿದೆ. ದೊಡ್ಡ ಸಮಸ್ಯೆಗಳಿವೆ. ಆಡಳಿತದಲ್ಲಿ ಸುಧಾರಣೆ ತರಬೇಕು. ನಾಗರಿಕರಿಗೆ ಹೆಚ್ಚು ಸೌಲಭ್ಯ ಕಲ್ಪಿಸಬೇಕು. ಆಡಳಿತ ನಿಯಂತ್ರಣ ನೀಡಬೇಕು, ಆರ್ಥಿಕ ಶಕ್ತಿ ತುಂಬಬೇಕು. ಇದು ಮಹತ್ವದ ವಿಧೇಯಕವಾಗಿದ್ದು, ಒಪ್ಪಿಗೆ ನೀಡಬೇಕು" ಎಂದು ಕೋರಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಪಕ್ಷದ ನಾಯಕ ಆರ್. ಅಶೋಕ್ ಅವರು, "ವಿಧೇಯಕವನ್ನು ಬಾಕಿ ಉಳಿಸಬೇಕು. ಇದರ ಬಗ್ಗೆ ಸಮಗ್ರ ಚರ್ಚೆಯಾಗಬೇಕಾಗಿದ್ದು, ವಿಧಾನಸಭೆ ಮತ್ತು ವಿಧಾನಪರಿಷತ್ನ ಸದಸ್ಯರನ್ನೊಳಗೊಂಡ ಸದನ ಸಮಿತಿ ರಚಿಸಬೇಕು" ಎಂದು ಸಲಹೆ ನೀಡಿದರು.