ಶಿವಮೊಗ್ಗ:ರಷ್ಯಾದಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಗೆ ಬದ್ಧ ಎಂದು ಅನಿವಾಸಿ ಭಾರತೀಯ ಸಮಿತಿಯ ಉಪಾಧ್ಯಕ್ಷರಾದ ಆರತಿ ಕೃಷ್ಣ ತಿಳಿಸಿದ್ದಾರೆ. ಈ ಕುರಿತು ಈಟಿವಿ ಭಾರತ ಜೊತೆ ಮಾತನಾಡಿದ ಅವರು, ಕಲಬುರಗಿ ಜಿಲ್ಲೆಯ ಮೂವರು ರಷ್ಯಾ ದೇಶದಲ್ಲಿ ಸಿಲುಕಿಕೊಂಡಿರುವುದರ ಬಗ್ಗೆ ಮಾಧ್ಯಮಗಳಲ್ಲಿ ನೋಡಿದ್ದೇವೆ. ಅಲ್ಲಿ ರಷ್ಯಾ ದೇಶದ ಪರವಾಗಿ ಯುದ್ದ ಮಾಡಬೇಕಾದ ಅನಿವಾರ್ಯತೆ ಸಂತ್ರಸ್ತರಿಗೆ ಎದುರಾಗಿರುವುದರ ಬಗ್ಗೆ ತಿಳಿದಿರುವುದಾಗಿ ಹೇಳಿದರು.
ರಷ್ಯಾ ದೇಶದಲ್ಲಿ ಸಿಲುಕಿಕೊಂಡಿರುವ ಕುಟುಂಬದವರು ಇನ್ನೂ ನಮ್ಮನ್ನಾಗಲಿ ಅಥವಾ ನಮ್ಮ ಇಲಾಖೆಯನ್ನಾಗಲಿ ಸಂಪರ್ಕ ಮಾಡಿಲ್ಲ. ಒಂದು ವೇಳೆ ಕುಟುಂಬದವರು ನಮ್ಮನ್ನು ಸಂಪರ್ಕ ಮಾಡಿದರೆ, ಕೇಂದ್ರದ ವಿದೇಶಾಂಗ ಇಲಾಖೆ ಜೊತೆ ಸಂಪರ್ಕ ಮಾಡಿ ರಷ್ಯಾದಲ್ಲಿ ಇರುವ ಕನ್ನಡಿಗರನ್ನು ನಾವು ರಕ್ಷಣೆ ಮಾಡುತ್ತೇವೆ. ಈಗಾಗಲೇ ಸಂತ್ರಸ್ತರ ಕುಟುಂಬಸ್ಥರು ವಿದೇಶಾಂಗ ಸಚಿವಾಲಯವನ್ನು ಸಂಪರ್ಕಿಸಿರಬಹುದು. ಸಂತ್ರಸ್ತ ಕುಟುಂಬದವರು ನಮ್ಮನ್ನು ಸಂಪರ್ಕಿಸಿದರೆ ನಾವು ಸಹ ಅವರಿಗೆ ಸಹಾಯ ಮಾಡುತ್ತೇವೆ. ಒಟ್ಟಿನಲ್ಲಿ ನಾವು ಸಹ ನಮ್ಮ ಕನ್ನಡಿಗರ ರಕ್ಷಣೆಗೆ ಬದ್ಧರಾಗಿದ್ದೇವೆ ಎಂದರು.
ಖರ್ಗೆ ಮನವಿಗೆ ಸ್ಪಂದಿಸಿದ ಕೇಂದ್ರ ಸಚಿವ ಜೈಶಂಕರ್:ಕಲಬುರಗಿಜಿಲ್ಲೆಯ ಮೂಲದ ಮೂವರು ಹಾಗೂ ತೆಲಂಗಾಣದ ಯುವಕನೊಬ್ಬನನ್ನು ರಷ್ಯಾ ಸೈನ್ಯಕ್ಕೆ ನಿಯೋಜನೆ ಮಾಡಿ ಯುದ್ಧಪೀಡಿತ ಉಕ್ರೇನ್ ಗಡಿಗೆ ಕಳುಹಿಸಿರುವ ಹಿನ್ನೆಲೆ ಅವರ ಬಿಡುಗಡೆಗೆ ಆಗ್ರಹಿಸಿ ರಾಜ್ಯಸಭೆ ವಿರೋಧಪಕ್ಷದ ನಾಯಕ ಹಾಗೂ ಎಐಸಿಸಿ ಅಧ್ಯಕ್ಷರಾದ ಡಾ ಮಲ್ಲಿಕಾರ್ಜುನ ಖರ್ಗೆ ಅವರು ಬರೆದ ಪತ್ರಕ್ಕೆ ಸಚಿವ ಜೈಶಂಕರ್ ಉತ್ತರ ನೀಡಿದ್ದರು. ಯುವಕರ ರಕ್ಷಣೆ ಹಾಗೂ ತಕ್ಷಣ ವಾಪಸಾತಿಗೆ ರಷ್ಯಾದ ಮಾಸ್ಕೋದಲ್ಲಿರುವ ಭಾರತೀಯ ರಾಯಭಾರಿಯನ್ನು ಸಂಪರ್ಕಿಸಲಾಗಿದ್ದು, ಬಿಡುಗಡೆಗೆ ಕ್ರಮ ವಹಿಸಲಾಗಿದೆ ಎಂದು ಹೇಳಿದ್ದರು.