ಬೆಂಗಳೂರು :ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮುಂಜಾಗ್ರತ ಕ್ರಮವಾಗಿ ಶಸ್ತ್ರಾಸ್ತ್ರ ಹೊಂದಿರುವ ನಾಗರಿಕರಿಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಠೇವಣಿ ಇರಿಸಲು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಆದೇಶಿಸಿದ್ದಾರೆ.
ಚುನಾವಣಾ ನೀತಿ ಸಂಹಿತೆ ಜಾರಿಯಾಗಿದ್ದು, ತಮ್ಮ ಬಳಿ ಯಾವುದೇ ರೀತಿಯ ಶಸ್ತ್ರಾಸ್ತ್ರ ಅಥವಾ ಆಯುಧಗಳನ್ನು ಪೊಲೀಸ್ ಠಾಣೆಗೆ ಒಪ್ಪಿಸಬೇಕೆಂದು ಸಾರ್ವಜನಿಕರಿಗೆ ಆಯುಕ್ತರು ಸೂಚಿಸಿದ್ದಾರೆ. ಸಾರ್ವಜನಿಕ ಶಾಂತಿ - ಸುವ್ಯವಸ್ಥೆ ಹಾಗೂ ಭದ್ರತೆ ಕಾಪಾಡುವ ಉದ್ದೇಶದಿಂದ ಶಸ್ತ್ರಾಸ್ತ್ರ ಇಟ್ಟುಕೊಳ್ಳಲು ಅನುಮತಿ ಹಾಗೂ ಒಯ್ಯುವುದನ್ನು ನಿರ್ಬಂಧಿಸಲಾಗಿದೆ.
ಇವರಿಗೆ ಅನ್ವಯಿಸುವುದಿಲ್ಲ :ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಇಲಾಖೆಗಳು, ಸಾರ್ವಜನಿಕ ಹಾಗೂ ಖಾಸಗಿ ವಲಯದ (ಬ್ಯಾಂಕ್, ಸೆಕ್ಯೂರಿಟಿ ಏಜೆನ್ಸಿಗಳು) ಸಂಸ್ಥೆಗಳು ತಮ್ಮ ಭದ್ರತೆಗಾಗಿ ಶಸ್ತ್ರ ಪರವಾನಗಿ ಪಡೆದುಕೊಂಡಿರುವವರು, ಕಮೀಷನರೇಟ್ ವ್ಯಾಪ್ತಿಯ ನ್ಯಾಷನಲ್ ರೈಫಲ್ ಆಸೋಸಿಯೇಷನ್ ಸದಸ್ಯರಿಗೆ ಹಾಗೂ ಕೊಡವ ಸಮಾಜದ ಶಸ್ತ್ರ ಪರವಾನಗಿ ಪಡೆದುಕೊಂಡಿರುವವರಿಗೆ ವಿನಾಯಿತಿ ನೀಡಲಾಗಿದೆ. ಶಸ್ತ್ರ ಪರವಾನಗಿ ವಿನಾಯಿತಿ ಬಯಸುವವರು ಆಯಾ ಡಿಸಿಪಿಗಳಿಗೆ ಮಾರ್ಚ್ 25 ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ. ಠೇವಣಿಯಿಟ್ಟ ಶಸ್ತ್ರಾಸ್ತ್ರಗಳನ್ನು ಜೂನ್ 11 ರ ಬಳಿಕ ಹಿಂಪಡೆಯಬಹುದಾಗಿದೆ. ನಗರದ 102 ಕಡೆಗಳಲ್ಲಿ ನಾಕಾಬಂದಿ ಹಾಕಿರುವುದಾಗಿ ಇದೇ ವೇಳೆ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ಕೇಂದ್ರ ವಿಭಾಗ-16, ಪೂರ್ವ ವಿಭಾಗ - 10, ಉತ್ತರ ವಿಭಾಗ- 27, ಈಶಾನ್ಯ ವಿಭಾಗ -12, ದಕ್ಷಿಣ ವಿಭಾಗ -8, ಆಗ್ನೇಯ ವಿಭಾಗ - 10, ಪಶ್ಚಿಮ ವಿಭಾಗ - 12 ಹಾಗೂ ವೈಟ್ ಫೀಲ್ಡ್ ವಿಭಾಗ 7 ಸೇರಿದಂತೆ 102 ಕಡೆ ನಾಕಾಬಂದಿ ಹಾಕಲಾಗಿದೆ.
ಇದನ್ನೂ ಓದಿ :ಆಡಳಿತಾತ್ಮಕವಾಗಿ ಬೆಳಗಾವಿ ನಗರ ಪೊಲೀಸ್ ಇಲಾಖೆಯಲ್ಲಿ ಸುಧಾರಣೆ ತರುವೆ: ಯಡಾ ಮಾರ್ಟಿನ್ ಮಾರ್ಬನ್ಯಾಂಗ್