ಬೆಳಗಾವಿ: ಮತ್ತೊಂದು ಚಳಿಗಾಲದ ಅಧಿವೇಶನಕ್ಕೆ ಸುವರ್ಣ ವಿಧಾನಸೌಧ ಸಾಕ್ಷಿಯಾಗುತ್ತಿದೆ. ಅಧಿವೇಶನಕ್ಕೆ ಬರುವ ಮುನ್ನ ಆಳುವ ಸರ್ಕಾರ ಬೆಳಗಾವಿಯನ್ನು ಅಧಿಕೃತವಾಗಿ ಎರಡನೇ ರಾಜಧಾನಿ ಎಂದು ಘೋಷಿಸಲಿ. ಸೌಧಕ್ಕೆ ರಾಜ್ಯ ಮಟ್ಟದ ಕಚೇರಿಗಳನ್ನು ಸ್ಥಳಾಂತರಿಸಲು ಆದೇಶ ಹೊರಡಿಸಿ ಬರಲಿ ಎನ್ನುತ್ತಿದ್ದಾರೆ ಈ ಭಾಗದ ಹೋರಾಟಗಾರರು.
ಉತ್ತರ ಕರ್ನಾಟಕ - ದಕ್ಷಿಣ ಕರ್ನಾಟಕ ಎಂಬ ಭೇದ ಭಾವ ತೊಲಗಿಸಬೇಕು. ಉತ್ತರ ಕರ್ನಾಟಕದ ಜನರ ಹತ್ತಿರವೂ ಸರ್ಕಾರವನ್ನು ಕೊಂಡೊಯ್ಯಬೇಕು. ಈ ಭಾಗದ ಸಮಸ್ಯೆಗಳಿಗೆ ಧ್ವನಿಯಾಗಬೇಕು ಎಂದು 2006ರಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮೊದಲ ಬಾರಿಗೆ ಬೆಂಗಳೂರು ಬಿಟ್ಟು ಬೆಳಗಾವಿಯಲ್ಲಿ ಅಧಿವೇಶನ ನಡೆಸಿದರು. ಈ ಮೂಲಕ ಉ.ಕ. ಭಾಗದ ಅಭಿವೃದ್ಧಿಗೆ ಮುನ್ನುಡಿ ಬರೆದರು.
ಅದಾದ ಬಳಿಕ ಅಧಿಕಾರಕ್ಕೆ ಬಂದ ಯಡಿಯೂರಪ್ಪ ಸರ್ಕಾರ 2012ರಲ್ಲಿ ಬೆಳಗಾವಿಯಲ್ಲಿ ಸುಂದರ ಸುವರ್ಣ ವಿಧಾನಸೌಧ ನಿರ್ಮಿಸಿದರು. ಅಂದಿನಿಂದ ಪ್ರತೀ ವರ್ಷ ಇಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಾ ಬಂದಿದೆ. ಆದರೆ, ಸೌಧ ನಿರ್ಮಾಣದ ಹಿಂದಿನ ಉದ್ದೇಶ ಮಾತ್ರ ಈಡೇರಿಲ್ಲ. ಪ್ರತಿಯೊಂದು ಕೆಲಸಕ್ಕೂ ಬೆಂಗಳೂರಿಗೆ ಅಲೆಯುವುದು ತಪ್ಪಿಲ್ಲ. ಐದುನೂರು ಕೋಟಿ ರೂ. ಖರ್ಚು ಮಾಡಿ ಕಟ್ಟಿದ ಸೌಧ ಬಿಳಿ ಆನೆಯಂತಾಗಿದೆ. ಪ್ರತಿ ವರ್ಷ 5 ಕೋಟಿಗೂ ಹೆಚ್ಚು ಹಣ ನಿರ್ವಹಣೆಗೆ ವ್ಯಯಿಸಲಾಗುತ್ತಿದೆ. ಆದರೆ, ಇದು ಉತ್ತರ ಕರ್ನಾಟಕಕ್ಕೆ ನ್ಯಾಯ ಒದಗಿಸಲು ವಿಫಲವಾಗಿದೆ ಎಂಬುದು ಹೋರಾಟಗಾರರ ಆರೋಪ.
ಈ ಕುರಿತು ಈಟಿವಿ ಭಾರತ ಜೊತೆಗೆ ಮಾತನಾಡಿದ, ಹಿರಿಯ ವಕೀಲ ಬಿ.ಡಿ.ಹಿರೇಮಠ, "ಉತ್ತರಕರ್ನಾಟಕ ಜನರ ನ್ಯಾಯಯುತ ಬೇಡಿಕೆಗಳ ಬಗ್ಗೆ ಕೇವಲ ಚರ್ಚೆ ಆಗದೇ, ಅವು ಕಾರ್ಯರೂಪಕ್ಕೆ ಬರಬೇಕು. ಆ ನಿಟ್ಟಿನಲ್ಲಿ ಈ ಭಾಗದ ಜನಪ್ರತಿನಿಧಿಗಳು ಇಚ್ಛಾಶಕ್ತಿ ಪ್ರದರ್ಶಿಸಬೇಕಿದೆ. ಇನ್ನು ಸುವರ್ಣ ವಿಧಾನಸೌಧ ನಿರ್ಮಾಣವಾದ ಬಳಿಕ ಇನ್ನೇನು ನಾವು ಬೆಂಗಳೂರಿಗೆ ಹೋಗುವುದು ತಪ್ಪಿತು ಅಂತಾ ಈ ಭಾಗದ ಜನರು ಅಂದುಕೊಂಡಿದ್ದರು. ಆದರೆ, ಅದು ಹುಸಿಯಾಗಿದೆ. 12 ವರ್ಷಗಳಿಂದ ಹೋರಾಟ ಮಾಡುತ್ತಿದ್ದು, ಈವರೆಗೂ ಸೌಧಕ್ಕೆ ರಾಜ್ಯ ಮಟ್ಟದ ಕಚೇರಿಗಳನ್ನು ಸ್ಥಳಾಂತರಿಸಿಲ್ಲ. ಆ ಕೆಲಸ ಕೂಡಲೇ ಆಗಬೇಕು. ಅದೇ ರೀತಿ ಬೆಳಗಾವಿಯನ್ನು 2ನೇ ರಾಜಧಾನಿ ಮಾಡಬೇಕು" ಎಂದು ಒತ್ತಾಯಿಸಿದರು.