ಮೈಸೂರು : ಸಾಂಪ್ರದಾಯಿಕ ಉಡುಗೆ-ತೊಡುಗೆಗಳನ್ನು ಧರಿಸಿ ನಾನಾ ಕಾಲೇಜಿನ ವಿದ್ಯಾರ್ಥಿನಿಯರು ಫ್ಯಾಷನ್ ಶೋನಲ್ಲಿ ಹೆಜ್ಜೆಹಾಕುವ ಮೂಲಕ ಮಿಂಚಿದರು.
ಮಹಿಳಾ ಮತ್ತು ಮಕ್ಕಳ ದಸರಾ ಉಪಸಮಿತಿ ವತಿಯಿಂದ ಭಾನುವಾರ ಜೆ. ಕೆ ಮೈದಾನದಲ್ಲಿರುವ ಸಭಾಂಗಣದಲ್ಲಿ ಆಯೋಜಿಸಿದ್ದ ಫ್ಯಾಷನ್ ಶೋನಲ್ಲಿ ದೇಶಿಯ ಸಾಂಪ್ರದಾಯಿಕ ಬಟ್ಟೆ ಧರಿಸಿ, ಕ್ಯಾಟ್ ವಾಕ್ ಮೂಲಕ ವೇದಿಕೆ ಮೇಲೆ ವಿದ್ಯಾರ್ಥಿನಿಯರು ಹೆಜ್ಜೆ ಹಾಕಿದರು.
ಮಹಾರಾಣಿ ಕಾಲೇಜು, ಜೆಎಸ್ಎಸ್ ಮಹಿಳಾ ಕಾಲೇಜು, ಎಂಐಎಫ್ಟಿ, ಡ್ರೀಮ್ ಜೋನ್ ಕಾಲೇಜಿನ ವಿದ್ಯಾರ್ಥಿನಿಯರು, ಫ್ಯಾಷನ್ ಶೋನಲ್ಲಿ ಹೆಜ್ಜೆ ಹಾಕಿ, ಸಭಿಕರನ್ನು ರಂಜಿಸಿದರು. ಫ್ಯಾಷನ್ ಷೋನಲ್ಲಿ ಡ್ರೀಮ್ ಜೋನ್ ಕಾಲೇಜಿನ ವಿದ್ಯಾರ್ಥಿನಿಯರು ಪ್ರಥಮ ಸ್ಥಾನ, ಎಂಐಎಫ್ಟಿ ಕಾಲೇಜು ದ್ವಿತೀಯ ಸ್ಥಾನಗಳಿಸಿತು. ಪಿರಿಯಾಪಟ್ಟಣ ತಾಲೂಕಿನ ಮಹಿಳೆಯರು, ಕಾಡಿನ ಸಾಂಪ್ರದಾಯಿಕ ನೃತ್ಯ ಪ್ರದರ್ಶನ ಮಾಡಿದರು.
ಇದಕ್ಕೂ ಮುನ್ನ ಮಹಿಳಾ ಉದ್ಯಮಿ ಛಾಯಾ ನಂಜಪ್ಪ ಅವರು, ಗ್ರಾಮೀಣ ಭಾಗದಲ್ಲಿ ಉತ್ಪನ್ನಗಳನ್ನು ತಯಾರಿಸಿ ಉದ್ಯಮಿಯಾಗುವ ಬಗ್ಗೆ ಮಹಿಳೆಯರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ, ಜೀವನದಲ್ಲಿ ಕಷ್ಟ ಎಂದು ಕುಗ್ಗ ಬೇಡಿ. ಸವಾಲುಗಳನ್ನು ಎದುರಿಸಿದರೆ ಸುಂದರ ಜೀವನ ಕಟ್ಟಿಕೊಳ್ಳಬಹುದು ಎಂದು ತಮ್ಮ ಕಷ್ಟದ ಜೀವನವನ್ನ ನೆನಪಿಸಿಕೊಂಡರು.