ಮೈಸೂರು :ನಮ್ಮ ಸಂವಿಧಾನ ಬದಲಾವಣೆಗೆ ಮುಂದಾದರೆ ಪರಿಸ್ಥಿತಿ ನೆಟ್ಟಗಿರಲ್ಲ. ನಮ್ಮ ಸಂವಿಧಾನದ ಸ್ವರೂಪ ಬದಲಾಯಿಸಿ ದೇಶದ ದುಡಿಯುವ ವರ್ಗಗಳಿಗೆ ವಂಚಿಸಿದರೆ ದೇಶದ ಪರಿಸ್ಥಿತಿ ಬಿಗಡಾಯಿಸುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿಗೆ ನೇರ ಎಚ್ಚರಿಕೆ ನೀಡಿದರು.
ಮಂಗಳವಾರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ 45 ಕ್ಕೂ ಹೆಚ್ಚು ಮಂದಿ ಹೋಬಳಿ ಮಟ್ಟದ ಮುಖಂಡರುಗಳನ್ನು ಹಾಗೂ ಮಾಜಿ ಕೇಂದ್ರ ಸಚಿವ ಶ್ರೀನಿವಾಸ್ ಪ್ರಸಾದ್ ಅವರ ಆತ್ಮೀಯರು ಮತ್ತು ಸಂಬಂಧಿಗಳನ್ನು ಕಾಂಗ್ರೆಸ್ ಪಕ್ಷಕ್ಕೆ ಬರಮಾಡಿಕೊಂಡ ಬಳಿಕ ಸಿಎಂ ಮಾತನಾಡಿದರು. ನಾನು ಮುಖ್ಯಮಂತ್ರಿ ಆಗಿರುವುದಕ್ಕೆ, ನರೇಂದ್ರ ಮೋದಿ ಪ್ರಧಾನಮಂತ್ರಿ ಆಗಿರುವುದಕ್ಕೆ ಸಂವಿಧಾನ ಕಾರಣ ಎಂದು ಸಿದ್ದರಾಮಯ್ಯ ಪ್ರತಿಪಾದಿಸಿದರು.
ಬಿಜೆಪಿ ನಮ್ಮ ಈ ಸಂವಿಧಾನ ಬದಲಾವಣೆಯ ಅಜೆಂಡಾ ಇಟ್ಟುಕೊಂಡಿದೆ. ಈ ಸಂವಿಧಾನ ಬದಲಾದರೆ ದೇಶದ ದಲಿತರು, ಶೂದ್ರರು, ಮಹಿಳೆಯರು ಮತ್ತು ಶ್ರಮಿಕ ವರ್ಗಗಳಿಗೆ ಉಳಿಗಾಲವಿಲ್ಲ. ಆದ್ದರಿಂದ ನಾವೆಲ್ಲ ಉಳಿಯಬೇಕಾದರೆ ಸಂವಿಧಾನ ಉಳಿಯಬೇಕು. ಸಂವಿಧಾನ ಉಳಿಯಬೇಕು ಎಂದರೆ ಬಿಜೆಪಿ ಸೋಲಬೇಕು ಎನ್ನುವ ಪಣ ತೊಡಬೇಕು. ಮೋದಿ ಅವರ ಅವಧಿಯಲ್ಲಿ ಇಡೀ ದೇಶದಲ್ಲಿ ಸ್ಕಾಲರ್ ಶಿಪ್ಗೆ ಯಾವ ಗತಿ ಆಯ್ತು ಅಂತ ನೋಡಿದ್ದೀರಲ್ಲಾ? ಮತ್ತೇಕೆ ಬಿಜೆಪಿ ಕಡೆ ಮುಖ ಮಾಡಬೇಕು ಎಂದು ಪ್ರಶ್ನಿಸಿದರು.
ಶೂದ್ರರಿಗೆ ಬಿಜೆಪಿ- ಆರ್ಎಸ್ಎಸ್ ನ ಗರ್ಭಗುಡಿಯೊಳಗೆ ಪ್ರವೇಶವೇ ಇಲ್ಲ :ಶೂದ್ರರಿಗೆ ಬಿಜೆಪಿ ಮತ್ತು ಆರ್ಎಸ್ಎಸ್ ನ ಗರ್ಭಗುಡಿಯೊಳಗೆ ಪ್ರವೇಶವೇ ಇಲ್ಲ. ಶೂದ್ರರು, ದಲಿತರನ್ನು ಕೇವಲ ಬಳಸಿಕೊಳ್ಳುತ್ತಾರೆ. ಆದರೆ, RSSನ ಒಳಗೆ ಪ್ರವೇಶ ಕೊಡುವುದಿಲ್ಲ. ಆದ್ದರಿಂದ ಆರ್ಎಸ್ಎಸ್ ಕಡೆಗೆ ತಲೆ ಕೂಡ ಹಾಕಬೇಡಿ. ದಲಿತರು, ಶೂದ್ರರು, ಹಿಂದುಳಿದವರ ವಿರೋಧಿಯಾದ ಬಿಜೆಪಿ ಮತ್ತು ಆರ್ಎಸ್ಎಸ್ ಮೀಸಲಾತಿಯನ್ನೂ ವಿರೋಧಿಸುತ್ತದೆ.