ನೆಲಮಂಗಲ: ರಾಜ್ಯ ಸರಕಾರದ ಮಹತ್ವಾಕಾಂಕ್ಷೆಯ ಬಯಲು ಸೀಮೆ ಜಿಲ್ಲೆಗಳ ಅಂತರ್ಜಲ ಅಭಿವೃದ್ದಿಗಾಗಿ ಕೈಗೊಂಡಿರುವ ವೃಷಭಾವತಿ ಯೋಜನೆ ಹಾಗೂ ಸುಮಾರು 869 ಕೋಟಿ ರೂ ವೆಚ್ಚದ ವಿವಿಧ ಕಾಮಗಾರಿಗಳಿಗೆ ಸೋಮವಾರ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಶಂಕುಸ್ಥಾಪನೆ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ, ಸಚಿವರಾದ ಕೆ.ಹೆಚ್.ಮುನಿಯಪ್ಪ, ಭೋಸರಾಜು, ಜಮೀರ್ ಅಹ್ಮದ್, ಶಾಸಕರಾದ ಎನ್.ಶ್ರೀನಿವಾಸ್, ಶರತ್ ಬಚ್ಚೇಗೌಡ, ಶಿವಣ್ಣ, ಪರಿಷತ್ ಸದಸ್ಯ ಎಸ್.ರವಿ, ಎಸ್.ಟಿ.ಸೋಮಶೇಖರ್ ಭಾಗಿಯಾಗಿದ್ದರು.
ವೇದಿಕೆಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, "ವೃಷಭಾವತಿ ಏತ ನೀರಾವರಿ ಯೋಜನೆಯ ಕೆರೆ ತುಂಬಿಸುವ ಕೆಲಸಕ್ಕೆ ಮುಂದಾಗಿದ್ದೇವೆ. ಮೊದಲನೇ ಹಂತದಲ್ಲಿ ಒಂದು ಸಾವಿರ ಕೋಟಿಗೂ ಹೆಚ್ಚು ವೆಚ್ಚದಲ್ಲಿ 70 ಕೆರೆಗಳನ್ನು ತುಂಬಿಸುವ ಕಾರ್ಯ ನಡೆಯುತ್ತದೆ. ತ್ಯಾಜ್ಯ ನೀರನ್ನು ಸಂಸ್ಕರಿಸಿ ಕೆರೆಗಳನ್ನು ತುಂಬಿಸುವ ಮೂಲಕ ಚಿಕ್ಕಬಳ್ಳಾಪುರ, ತುಮಕೂರು, ಬೆಂಗಳೂರು ಗ್ರಾಮಾಂತರಕ್ಕೆ ಯೋಜನೆಯ ಪ್ರಯೋಜನ ಸಿಗಲಿದೆ" ಎಂದರು.
"ಕೆಸಿ ವ್ಯಾಲಿ, ಎಚ್.ಎನ್ ವ್ಯಾಲಿ ಯೋಜನೆಗೆ 3,000 ಕೋಟಿ ಖರ್ಚು ಮಾಡಲಾಗಿದೆ. ಇದೇ ಮಾದರಿಯಲ್ಲಿ 2,240 ಕೋಟಿ ರೂ.ಗಳನ್ನು ವೃಷಭಾವತಿ ಯೋಜನೆಗೆ ವ್ಯಯಿಸಲು ತೀರ್ಮಾನಿಸಲಾಗಿದೆ. ತ್ಯಾಜ್ಯ ನೀರನ್ನು ಪರಿಷ್ಕರಣೆ ಮಾಡಿ ಶುದ್ಧೀಕರಿಸಲಾಗುತ್ತಿದೆ. ರೈತರಿಗೆ ಆರ್ಥಿಕ ಸಮಾಜಿಕ ಶಕ್ತಿ ನೀಡಲು ಯೋಜನೆ ಸಹಕಾರಿ" ಎಂದು ಹೇಳಿದರು.