ಹಾಸನ: "ಒಕ್ಕಲಿಗ ನಾಯಕರನ್ನು ಮುಗಿಸಲು ಹೊರಟಿದ್ದ ದೇವೇಗೌಡರು ಪಾಪದ ಹೊರೆ ಹೊರಬೇಕಾಗುತ್ತದೆ ಎಂದು ಅಂದು ಕೃಷ್ಣಪ್ಪ ಹೇಳಿದ್ದರು. ಈಗ ಅದು ನಿಜವಾಗಿದೆ" ಎಂದು ಸಿಎಂ ಸಿದ್ದರಾಮಯ್ಯ ದೇವೇಗೌಡರ ವಿರುದ್ಧ ಗುಡುಗಿದರು.
ಹಾಸನ ನಗರದಲ್ಲಿ ಆಯೋಜಿಸಿದ್ದ ಬೃಹತ್ ಜನಕಲ್ಯಾಣ ಸಮಾವೇಶದಲ್ಲಿ ಮಾತನಾಡಿದ ಅವರು, "ಡಾ.ರಾಜ್ ಅವರು ಅಭಿಮಾನಿಗಳೇ ದೇವರು ಎಂದು ಹೇಳುತ್ತಿದ್ದರು. ನಮಗೆ ಮತದಾರರ ಬಂಧುಗಳೇ ದೇವರು, ಉಪ ಚುನಾವಣೆಯಲ್ಲಿ ಮೂರಕ್ಕೆ ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಆಶೀರ್ವದಿಸಿದ್ದಕ್ಕೆ ಧನ್ಯವಾದ ಅರ್ಪಿಸುತ್ತೇನೆ. ದೇವೇಗೌಡರು ರಾಜಕೀಯವಾಗಿ ಒಕ್ಕಲಿಗ ನಾಯಕರನ್ನು ನಿರಂತರವಾಗಿ ಮುಗಿಸುತ್ತಿದ್ದಾರೆ. ಬಚ್ಚೇಗೌಡರು, ವೈ.ಕೆ. ರಾಮಯ್ಯ, ಬೈರೇಗೌಡರು, ಕೃಷ್ಣಪ್ಪ, ಚಲುವರಾಯಸ್ವಾಮಿ ಸೇರಿ ಎಷ್ಟು ಮಂದಿ ಒಕ್ಕಲಿಗ ನಾಯಕರನ್ನು ದೇವೇಗೌಡರು ರಾಜಕೀಯವಾಗಿ ಮುಗಿಸಿದರು. ಒಕ್ಕಲಿಗ ನಾಯಕರಾಗಿದ್ದ ಕೃಷ್ಣಪ್ಪ ಅವರು ಆಗಲೇ ಈ ಪಾಪದ ಹೊರೆ ಹೊರಬೇಕಾಗುತ್ತದೆ ಎಂದು ದೇವೇಗೌಡರಿಗೆ ಹೇಳಿದ್ದರು. ಈಗ ಒಕ್ಕಲಿಗ ನಾಯಕ ಕೃಷ್ಣಪ್ಪ ಅವರ ಮಾತು ನಿಜವಾಗಿದೆ" ಎಂದು ಕಿಡಿಕಾರಿದರು.
ಸಿಎಂ ಸಿದ್ದರಾಮಯ್ಯ (ETV Bharat) ನಮ್ಮೆಲ್ಲರ ಪ್ರಯತ್ನದಿಂದ ದೇವೇಗೌಡರು ಸಿಎಂ ಆದರು:"ಜೆಡಿಎಸ್ ಪಕ್ಷವನ್ನು ನಾನಾಗಿಯೇ ಬಿಡಲಿಲ್ಲ. ನನ್ನನ್ನು ಪಕ್ಷದಿಂದ ಉಚ್ಚಾಟಿಸಿದರು. ದೇವೇಗೌಡರು ಮುಖ್ಯಮಂತ್ರಿಯಾಗುತ್ತಿರಲಿಲ್ಲ. ನಾನು ಮತ್ತು ಜಾಲಪ್ಪ ಒಟ್ಟಾಗಿ ರಾಮಕೃಷ್ಣಹೆಗಡೆಯವರ ಬದಲಿಗೆ ದೇವೇಗೌಡರನ್ನು ಮುಖ್ಯಮಂತ್ರಿ ಮಾಡಿದೆವು. ಆದರೇ ಅವರು ನನ್ನನ್ನೇ ಪಕ್ಷದಿಂದ ಉಚ್ಚಾಟಿಸಿದರು" ಎಂದು ಗುಡುಗಿದರು.
"ಹಾಸನದ ಮಹಾನ್ ನಾಯಕರ ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಅವರನ್ನು ಚನ್ನಪಟ್ಟಣದಲ್ಲಿ, ಮಾಜಿ ಮುಖ್ಯಮಂತ್ರಿ ಬಸರವರಾಜ್ ಬೊಮ್ಮಾಯಿ ಅವರ ಮೊಮ್ಮಗನನ್ನು ಶಿಗ್ಗಾಂವಿಯಲ್ಲಿ ಜನ ಸೋಲಿಸಿ ನಮಗೆ ಆಶೀರ್ವದಿಸಿದ್ದಾರೆ. ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಮುಖ್ಯಮಂತ್ರಿ ಆಗುವಷ್ಟು ಬಹುಮತ ಈ ರಾಜ್ಯದ ಜನರು ಯಾವತ್ತೂ ಕೊಟ್ಟಿಲ್ಲ. ಒಮ್ಮೆ ಕಾಂಗ್ರೆಸ್ ಬೆಂಬಲದಲ್ಲಿ ಮತ್ತೊಮ್ಮೆ ಬಿಜೆಪಿ ಬೆಂಬಲದಲ್ಲಿ ಮುಖ್ಯಮಂತ್ರಿ ಆದರು. ಬಳಿಕ ಎರಡೂ ಪಕ್ಷಗಳಿಗೆ ವಂಚಿಸಿದರು".
ಸುಭದ್ರ ಸರ್ಕಾರ, ಕೊಟ್ಟ ಮಾತು ಉಳಿಸಿಕೊಂಡಿದ್ದೇವೆ:"ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲಾ ಸುಭದ್ರ ಸರ್ಕಾರ ಕೊಟ್ಟಿದೆ, ಮಾತ್ರವಲ್ಲ ಕೊಟ್ಟ ಮಾತು ಉಳಿಸಿಕೊಂಡಿದ್ದೇವೆ. 2013ರಲ್ಲಿ ಕೊಟ್ಟ ಮಾತಿನಂತೆ ಹಲವಾರು ಭಾಗ್ಯಗಳನ್ನು ಜಾರಿ ಮಾಡಿದರು. ಈ ಬಾರಿ ಐದಕ್ಕೆ ಐದೂ ಗ್ಯಾರಂಟಿಗಳ ಜೊತೆಗೆ ಪ್ರಣಾಳಿಕೆಯಲ್ಲಿ ಘೋಷಿಸಿದ ಎಲ್ಲಾ ಗ್ಯಾರಂಟಿಗಳನ್ನೂ ಈಡೇರಿಸುತ್ತಿದ್ದೇವೆ. ಬಿಜೆಪಿಯಾಗಲಿ, ಜೆಡಿಎಸ್ ಆಗಲಿ ಕೊಟ್ಟ ಮಾತು ಉಳಿಸಿಕೊಳ್ಳಲಿಲ್ಲ. ಪ್ರಧಾನಿ ಮೋದಿ ಅವರ ಸರ್ಕಾರ ನಾವು ದುಡ್ಡು ಕೊಡುತ್ತೇವೆ ಅಂದರೂ ಕೊಡಲಿಲ್ಲ. ಅಕ್ಕಿ ಕೊಡುತ್ತೇವೆ ಎಂದು ಕೊಡಲಿಲ್ಲ. ಇಂಥಾ ಜನದ್ರೋಹಿ ಸರ್ಕಾರ ಬಿಜೆಪಿಯದ್ದು, ನಾವು ಐದು ಗ್ಯಾರಂಟಿಗಳಿಗಾಗಿ 56 ಸಾವಿರ ಕೋಟಿ ರೂಪಾಯಿಯನ್ನು ರಾಜ್ಯದ ಜನರ ಖಾತೆಗೆ ನೇರವಾಗಿ ಹಾಕುತ್ತಿದ್ದೇವೆ. ಈ ಐದು ಗ್ಯಾರಂಟಿಗಳನ್ನು ಪಡೆಯುತ್ತಿರುವ ಫಲಾನುಭವಿಗಳನ್ನು ಅವಮಾನಿಸುತ್ತಿರುವ ಬಿಜೆಪಿ-ಜೆಡಿಎಸ್ ದೊಡ್ಡ ಜನದ್ರೋಹಿಗಳು".
"ಕೇಂದ್ರದಲ್ಲಿ ಮಂತ್ರಿಯಾಗಿರುವ ಹೆಚ್.ಡಿ. ಕುಮಾರಸ್ವಾಮಿಯವರು ಮೇಕೆದಾಟು ವಿಚಾರದಲ್ಲಿ ಮೌನ ಆಗಿರುವುದು ಏಕೆ? ಬೆಂಗಳೂರಿನ ಜನತೆಗೆ ನೀರು ಬೇಕಾಗಿದೆ. ಅದನ್ನು ಕೊಡಿಸಲಿ. ಮಾಜಿ ಪ್ರಧಾನಿ ದೇವೇಗೌಡರು ನನಗಿಂತ 15 ವರ್ಷ ಹಿರಿಯರು, ಅವರು ಘನತೆಯಿಂದ ಮಾತಾಡಬೇಕಿತ್ತು. ಆದರೇ, ನನಗೆ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರ ಗರ್ವಭಂಗ ಮಾಡುತ್ತೇವೆ ಎಂದಿದ್ದರು. ಆದರೆ ಚುನಾವಣೆ ಫಲಿತಾಂಶ ಏನಾಯ್ತು..?".
ಕೇಂದ್ರ ಸರ್ಕಾರವನ್ನ ಕುಮಾರಸ್ವಾಮಿ ಏಕೆ ಪ್ರಶ್ನಿಸುತ್ತಿಲ್ಲ:"ಹಾಸನದ ಹೆಣ್ಣು ಮಕ್ಕಳು ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾರೆ. ಕೇಂದ್ರ ಸರ್ಕಾರ ರಾಜ್ಯದ ರೈತರ ಪಾಲಿನ ಸಾಲದಲ್ಲಿ ಶೇ.58 ರಷ್ಟನ್ನು ಕಡಿತಗೊಳಿಸಿದೆ. ಇದರಿಂದ ಹಾಸನದ ರೈತರು ಮತ್ತು ರಾಜ್ಯದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತರ ಮಗ ಎಂದುಕೊಂಡಿರುವ ಕುಮಾರಸ್ವಾಮಿಯವರು ಏಕೆ ಕೇಂದ್ರ ಸರ್ಕಾರವನ್ನು ಪ್ರಶ್ನಿಸುತ್ತಿಲ್ಲ. ನಬಾರ್ಡ್ನಿಂದ ಆಗಿರುವ ಅನ್ಯಾಯವನ್ನು ಕುಮಾರಸ್ವಾಮಿ ಸರಿಪಡಿಸುತ್ತಿಲ್ಲ? ಕಳೆದ ಹಣಕಾಸು ವರ್ಷದಲ್ಲಿ ಕೇಂದ್ರದಿಂದ ರಾಜ್ಯಕ್ಕೆ ಆಗಿರುವ 11 ಸಾವಿರ ಕೋಟಿ ರೂಪಾಯಿಯನ್ನು ರಾಜ್ಯಕ್ಕೆ ಕೊಡಿಸಲು ಬಿಜೆಪಿ-ಜೆಡಿಎಸ್ ಯಾಕೆ ಬಾಯಿಬಿಡುತ್ತಿಲ್ಲ".
"ಕಾಂಗ್ರೆಸ್ ಸರ್ಕಾರ ಮಾತ್ರ ಸುಭದ್ರ ಸರ್ಕಾರ ಕೊಡಲು ಸಾಧ್ಯ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಹಾಸನ ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಜಯಭೇರಿಗಳಿಸಲಿದೆ. ಇದು ಶತಸಿದ್ಧ ಎಂದು ಭರವಸೆ ವ್ಯಕ್ತಪಡಿಸಿದರು. ಹಾಸನದಲ್ಲಿ ಈ ಮಟ್ಟದ ದೊಡ್ಡ ಜನ ಕಲ್ಯಾಣ ಕಾಂಗ್ರೆಸ್ ಸಮಾವೇಶ ಹಿಂದೆಂದೂ ಆಗಿರಲಿಲ್ಲ. ಇದರಲ್ಲಿ ಸ್ವಾಭಿಮಾನಿ ಒಕ್ಕೂಟಗಳು, ಕಾಂಗ್ರೆಸ್ಸೇತರ ಸಂಘಟನೆಗಳು ಮತ್ತು ಕಾಂಗ್ರೆಸ್ ಪಕ್ಷ ಒಟ್ಟಾಗಿ ಶ್ರಮಿಸಿದ್ದಾರೆ" ಎಂದು ಸಿಎಂ ಮೆಚ್ಚುಗೆ ಸೂಚಿಸಿದರು.
ಇದನ್ನೂ ಓದಿ:ಹಾಸನದಲ್ಲಿ ಇಂದು ಕಾಂಗ್ರೆಸ್ ಬೃಹತ್ ಜನಕಲ್ಯಾಣ ಸಮಾವೇಶ: 1 ಲಕ್ಷ ಜನ ಸೇರುವ ನಿರೀಕ್ಷೆ, 2 ಸಾವಿರ ಪೊಲೀಸರ ನಿಯೋಜನೆ