ಕರ್ನಾಟಕ

karnataka

ETV Bharat / state

ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ಜೈಲಿಗೆ: ಸಂಸದ ಜಗದೀಶ ಶೆಟ್ಟರ್ ಭವಿಷ್ಯ - MUDA Scam - MUDA SCAM

ಸಿದ್ದರಾಮಯ್ಯ ಮುಡಾ ಪ್ರಕರಣದಲ್ಲಿ ತಪ್ಪು ಮಾಡಿದ್ದಾರೆ. 50:50 ಅನುಪಾತದಲ್ಲಿ ಭೂಮಿ ಹಂಚಿಕೆ ವಿಚಾರದಲ್ಲಿ ಖರೀದಿಸಿದ ಭೂಮಿಯಲ್ಲಿ ಹಂಚಿಕೆ ಮಾಡಬೇಕಿತ್ತು. ಕಾನೂನು ಉಲ್ಲಂಘನೆ ಮಾಡಿ 14 ಕಡೆ ಜಾಗ ತೆಗೆದುಕೊಂಡಿದ್ದಾರೆ. ಮುಂದೆ ಜೈಲಿಗೆ ಹೋಗುವ ಪರಿಸ್ಥಿತಿ ಬರಲಿದೆ ಎಂದು ಸಂಸದ ಜಗದೀಶ ಶೆಟ್ಟರ್‌ ಭವಿಷ್ಯ ನುಡಿದರು.

ಸಂಸದ ಜಗದೀಶ ಶೆಟ್ಟರ್‌
ಸಂಸದ ಜಗದೀಶ ಶೆಟ್ಟರ್‌ (JAGADISH SHETTAR REACTS ON CM)

By ETV Bharat Karnataka Team

Published : Aug 19, 2024, 4:06 PM IST

Updated : Aug 19, 2024, 4:17 PM IST

ಸಂಸದ ಜಗದೀಶ ಶೆಟ್ಟರ್‌ (ETV Bharat)

ಬೆಳಗಾವಿ: ಮುಡಾ ಪ್ರಕರಣದ ಎಲ್ಲ ದಾಖಲೆಗಳನ್ನು ನೋಡಿದ್ದೇನೆ. ಇದರಲ್ಲಿ ನಿಯಮ ಉಲ್ಲಂಘಿಸಿರುವುದು ಮತ್ತು ಸಿದ್ದರಾಮಯ್ಯನವರೇ ಅಕ್ರಮದಲ್ಲಿ ಭಾಗಿಯಾಗಿರುವುದು ಮೇಲ್ನೋಟಕ್ಕೆ ಸ್ಪಷ್ಟ. ನಾನು ಒಬ್ಬ ವಕೀಲನಾಗಿ ಹೇಳುತ್ತಿದ್ದೇನೆ, ಸಿದ್ದರಾಮಯ್ಯ ಜೈಲಿಗೆ ಹೋಗುವ ಪರಿಸ್ಥಿತಿ ಬರಲಿದೆ. ಅವರಿಗೆ ಶಿಕ್ಷೆಯಾಗಲಿದೆ ಎಂದು ಸಂಸದ ಜಗದೀಶ ಶೆಟ್ಟರ್‌ ಭವಿಷ್ಯ ನುಡಿದರು.

ಬೆಳಗಾವಿಯ ಶಿವಬಸವ ನಗರದಲ್ಲಿಂದು ಬಿಜೆಪಿ ಬೆಳಗಾವಿ ಗ್ರಾಮೀಣ ಘಟಕದ ಕಚೇರಿ ಉದ್ಘಾಟಿಸಿ ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು.

ಸಿಎಂ ಸಿದ್ದರಾಮಯ್ಯ ಬೆಂಬಲಿಸಿ ರಾಜ್ಯಾದ್ಯಂತ ಪ್ರತಿಭಟನೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಶೆಟ್ಟರ್, ಕಾನೂನು ರೀತಿ ಹೋರಾಟ ಮಾಡುತ್ತೇವೆ ಎಂದಿದ್ದರು. ರಾಜ್ಯಪಾಲರು ತನಿಖೆಗೆ ಆದೇಶ ಕೊಟ್ಟಿದ್ದಾರೆ. ತನಿಖೆ ಎದುರಿಸಿ ನಾನು ಸಾಚಾ ಎಂದು ಸಾಬೀತು ಮಾಡಬೇಕು. ರಾಜ್ಯಪಾಲರನ್ನು ಅಪಮಾನ ಮಾಡುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ. ಸಾಂವಿಧಾನಿಕ ಹುದ್ದೆಗೆ ಕುಂದು ತರುವ ರೀತಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ವರ್ತಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ಕಾನೂನು ತಜ್ಞರ ಸಲಹೆ ಪಡೆದು ರಾಜ್ಯಪಾಲರು ನಿರ್ಧಾರ ಮಾಡಿದ್ದಾರೆ. ರಾಜ್ಯಪಾಲರ ನಿರ್ಣಯಗಳನ್ನು ಅನೇಕರು ಪ್ರಶ್ನೆ ಸಹ ಮಾಡಿದ್ದಾರೆ. ಸುಪ್ರೀಂ ಕೋರ್ಟ್ ಹಿರಿಯ ವಕೀಲರು ಬೆಂಗಳೂರಿಗೆ ಬಂದಿದ್ದಾರೆ. ರಾಜ್ಯಪಾಲರ ವಿರುದ್ಧ ಕೆಟ್ಟದಾಗಿ ನಡೆದುಕೊಳ್ಳುವುದು ಸರಿಯಲ್ಲ. ದಲಿತ ಸಮಾಜದ ವ್ಯಕ್ತಿ ಅಪಮಾನ ‌ಮಾಡೋ ಕೆಲಸ ಮಾಡಬಾರದು. ಸಂವಿಧಾನದ ಹುದ್ದೆಯಲ್ಲಿರೋ ವ್ಯಕ್ತಿಗೆ ಕಾಂಗ್ರೆಸ್ ಅಪಮಾನ ಮಾಡುತ್ತಿದೆ. ಶಾಂತಿಯಿಂದ ಕಾನೂನು ಹೋರಾಟ ಮಾಡಿ ಯಾರು ಬೇಡ ಎನ್ನಲ್ಲ.

ಬೀದಿಗೆ ಇಳಿದು ಹೋರಾಟ ಮಾಡುವುದು ಸರಿಯಲ್ಲ. ತಕ್ಷಣ ರಾಜೀನಾಮೆ ಕೊಟ್ಟು ತನಿಖೆ ಎದುರಿಸಬೇಕಿತ್ತು. ಸಿಎಂ ಸಿದ್ದರಾಮಯ್ಯ ಈವರೆಗೆ ರಾಜೀನಾಮೆ ನೀಡುತ್ತಿಲ್ಲ. ಸಿಎಂ ಹುದ್ದೆಯಲ್ಲಿ ಇರಲು ಸಿದ್ದರಾಮಯ್ಯ ಅವರು ಅನರ್ಹ. ರಾಜ್ಯಪಾಲರ ನಿರ್ಧಾರಗಳು ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್​ನಲ್ಲಿ ಅಂಗೀಕಾರವಾಗಿವೆ ಎಂದು ಶೆಟ್ಟರ್ ಸಮರ್ಥಿಸಿಕೊಂಡರು.

ನಿರಾಣಿ, ಜೊಲ್ಲೆ ಯಾವುದೇ ಅಧಿಕಾರದಲ್ಲಿ ಇಲ್ಲ. ಈಗ ಹೆಚ್.ಡಿ.ಕುಮಾರಸ್ವಾಮಿ ಕೇಂದ್ರ ಸಚಿವರಾಗಿದ್ದಾರೆ. ವಿಧಾನಸಭೆಯಲ್ಲಿ ಅಂದಿನ ವಿರೋಧ ಪಕ್ಷದ ನಾಯಕರು ಯಾಕೆ ಮಾತನಾಡಲಿಲ್ಲ. ಮುಡಾ ಕೇಸಿನ ಎಲ್ಲಾ ಫೈಲ್ ನೋಡಿದ್ದೇನೆ. ಕೃಷಿ ಭೂಮಿ ಎಂದು ತೋರಿಸಿದ್ದಾರೆ. ಚುನಾವಣೆ ಅಫಡಿವೀಟ್​​ನಲ್ಲಿ ಕಡಿಮೆ ಹಣ ತೋರಿಸಿದ್ದಾರೆ. ಸಿದ್ದರಾಮಯ್ಯ ಮುಡಾ ಪ್ರಕರಣದಲ್ಲಿ ತಪ್ಪು ಮಾಡಿದ್ದಾರೆ. 50:50 ಅನುಪಾತದಲ್ಲಿ ಭೂಮಿ ಹಂಚಿಕೆ ವಿಚಾರದಲ್ಲಿ ಖರೀದಿಸಿದ ಭೂಮಿಯಲ್ಲಿ ಹಂಚಿಕೆ ಮಾಡಬೇಕಿತ್ತು. ಕಾನೂನು ಉಲ್ಲಂಘನೆ ಮಾಡಿ ಬೇರೆ ಕಡೆ 14 ಕಡೆ ಜಾಗ ತೆಗೆದುಕೊಂಡಿದ್ದಾರೆ. ಮುಂದೆ ಜೈಲಿಗೆ ಹೋಗುವ ಪರಿಸ್ಥಿತಿ ಸಿದ್ದರಾಮಯ್ಯಗೆ ಬರಲಿದೆ. ಮುಡಾ ಅಧಿಕಾರಗಳು ರಾಜ್ಯ ಸರ್ಕಾರ ಅನುಮತಿ ಇಲ್ಲದೇ ತಾವೇ ಹಂಚಿಕೆ ಮಾಡಿದ್ದಾರೆ.‌ ಆಗ ಬಿಜೆಪಿ ಸರ್ಕಾರದ ಸಚಿವರು ಏನಾದ್ರು ಅನುಮತಿ ಕೊಟ್ಟಿದ್ದರೆ ಅದು ಕಾನೂನುಬಾಹಿರ ಆಗುತ್ತಿತ್ತು ಎಂದು ಜಗದೀಶ ಶೆಟ್ಟರ್ ಹೇಳಿದರು.

ಬಾಂಗ್ಲಾದೇಶ ಮಾದರಿಯಲ್ಲಿ ರಾಜಭವನದ ಮೇಲೆ ದಾಳಿ ಬಗ್ಗೆ ಐವಾನ್ ಡಿಸೋಜಾ ಹೇಳಿಕೆಗೆ ಕಾಂಗ್ರೆಸ್ ಮನಸ್ಥಿತಿ ಮತ್ತು ಸಂಸ್ಕೃತಿ ಯಾವ ರೀತಿ ಇದೆ ಅನೋದಕ್ಕೆ ಇವರ ಹೇಳಿಕೆಯೇ ಸಾಕ್ಷಿ. ಇವರು ಎಲ್ಲದಕ್ಕೂ ತಯಾರಿದ್ದು, ತಪ್ಪು ಮಾಡಿದ್ದಾರೆ. ಅಪರಾಧಿ ಸ್ಥಾನದಲ್ಲಿದ್ದಾರೆ. ಅದನ್ನು ಮುಚ್ಚಿಹಾಕಲು ಎಲ್ಲ ರೀತಿಯಲ್ಲೂ ದಂಗೆ ಮಾಡಲು ತಯಾರಿದ್ದಾರೆ. ಕೋರ್ಟ್, ಕಚೇರಿ ಮೇಲೆ ನಿಮಗೆ ನಂಬಿಕೆ ಇದೆಯೋ ಇಲ್ವೋ ಎಂದು ಪ್ರಶ್ನಿಸಿದ ಶೆಟ್ಟರ್, ಬಾಂಗ್ಲಾದ ಬಗ್ಗೆ ಏಕೆ ಮಾತನಾಡುತ್ತೀರಿ, ಬಾಂಗ್ಲಾದ ಬಗ್ಗೆ ಮಾತನಾಡೋದು ತಪ್ಪು, ಅಲ್ಲಿ ಆಗಿರೋದು ತಪ್ಪು. ಇದೇ ರೀತಿ ಮಾಡಿದ್ರೆ ಜನರೆ ತಕ್ಕ ಪಾಠ ಕಲಿಸುತ್ತಾರೆ. ಕಾಂಗ್ರೆಸ್​ನವರನ್ನು ಮನೆಗೆ ಓಡಿಸುವ ಪರಿಸ್ಥಿತಿ ಬರುತ್ತದೆ ಎಂದು ವಾಗ್ದಾಳಿ ಮಾಡಿದರು.

ಪ್ರಾಸಿಕ್ಯೂಷನ್​ಗೆ ಅನುಮತಿ ಕೊಟ್ಟಿದಕ್ಕೆ ಬಹಳಷ್ಟು ಖುಷಿ ಪಡೋರು ಕಾಂಗ್ರೆಸ್ ನಾಯಕರೇ ಹೆಚ್ಚು. ನಾವು ಸಿದ್ದರಾಮಯ್ಯ ಹಿಂದೆ ಇದ್ದೇವೆ, ಅವರ ಹೋರಾಟಕ್ಕೆ ಬೆಂಬಲಿಸುತ್ತೇವೆ ಎನ್ನುವವರು, ಒಳಗೊಳಗೆ ಖುಷಿ ಪಡೋರು ಕಾಂಗ್ರೆಸ್ ನಾಯಕರು. ಅದರ ಪರಿಣಾಮ ಸ್ವಲ್ಪದರಲ್ಲೇ ಗೊತ್ತಾಗುತ್ತದೆ ಎಂದು ಟೀಕಿಸಿದ ಶೆಟ್ಟರ್, ಅಕ್ಕಪಕ್ಕದವರೆ ದಾಖಲೆ ಬಿಡುಗಡೆ ಮಾಡಿದ್ರಾ ಎಂಬ ಮಾಧ್ಯಮಗಳ ಪ್ರಶ್ನೆಗೆ, ಅವರು ಕೊಟ್ಟಿದ್ದಾರೋ, ಬಿಟ್ಟಿದ್ದಾರೋ ಅನ್ನೋದನ್ನು ನಾನೇಕೆ ಹೇಳಲಿ. ಅದು ಈಗ ಹೊರಗಡೆಗೆ ಬಂದಿದೆ, ಖುಷಿ ಪಡೋರು ಜಾಸ್ತಿ ಇದ್ದಾರೆ ಎಂದು ಕುಟುಕಿದರು.

ಇದನ್ನೂ ಓದಿ:ಸಿದ್ದರಾಮಯ್ಯನವರ ಸಮಾಜವಾದದ ಮುಖವಾಡ ಕಳಚಿ ಬಿದ್ದಿದೆ, ರಾಜೀನಾಮೆ ಕೊಟ್ಟು ಮನೆಗೆ ತೊಲಗಲಿ: ವಿಜಯೇಂದ್ರ - BJP JDS Protest

Last Updated : Aug 19, 2024, 4:17 PM IST

ABOUT THE AUTHOR

...view details