ಬೆಂಗಳೂರು:14 ಬಾರಿ ಬಜೆಟ್ ಮಂಡಿಸಿ ದಾಖಲೆ ಬರೆದಿರುವಸಿಎಂ ಸಿದ್ದರಾಮಯ್ಯ ಇಂದು ತಮ್ಮ 15ನೇ ಆಯವ್ಯಯ ಮಂಡಿಸಲಿದ್ದಾರೆ. ಗ್ಯಾರಂಟಿ ಯೋಜನೆಗೆ ಅನುದಾನ ಹೊಂದಿಸಿ, ಅಭಿವೃದ್ಧಿಗೂ ಹಣಕಾಸು ಕೊರತೆಯಾಗದ ರೀತಿ ಹೊರೆ ಇಲ್ಲದ ಉಳಿತಾಯ ಲೆಕ್ಕ ಪತ್ರ ಮಂಡನೆ ಮಾಡಲು ಸಜ್ಜಾಗಿದ್ದಾರೆ.
2024-25 ಸಾಲಿನ ಬಜೆಟ್ ಮಂಡನೆಗೆ ಕ್ಷಣಗಣನೆ ಆರಂಭವಾಗಿದೆ. ಇಂದು ಬೆಳಗ್ಗೆ 10.15ಕ್ಕೆ ಸಿಎಂ ಸಿದ್ದರಾಮಯ್ಯ ತಮ್ಮ 15ನೇ ಬಜೆಟ್ ಮಂಡನೆ ಮಾಡಲಿದ್ದಾರೆ. ಅಂದಾಜು 3.80 ಲಕ್ಷ ಕೋಟಿ ರೂ. ಗಾತ್ರದ ಬಜೆಟ್ ಮಂಡನೆಯ ನಿರೀಕ್ಷೆ ಇದೆ. ಪ್ರಮುಖವಾಗಿ ಪಂಚ ಗ್ಯಾರಂಟಿಗಳಿಗೆ ಅನುದಾನ ಒದಗಿಸುವ ಜೊತೆಗೆ ಆದಾಯ ಸಂಗ್ರಹದ ಪರ್ಯಾಯ ಮಾರ್ಗೋಪಾಯಗಳೊಂದಿಗೂ ಮುಂಗಡ ಪತ್ರವನ್ನು ಮಂಡಿಸಲಿದ್ದಾರೆ. ಲೋಕಸಭೆ ಚುನಾವಣೆ ಹಿನ್ನೆಲೆ ಈ ಬಾರಿ ರಾಜ್ಯದ ಜನರಿಗೆ ತೆರಿಗೆ ಹೊರೆ ಇಲ್ಲದ, ಅಭಿವೃದ್ಧಿಗೂ ಒತ್ತು ನೀಡುವ ಸಮತೋಲಿತ ಬಜೆಟ್ ಮಂಡನೆಯಾಗಲಿದೆ ಎಂದು ಹೇಳಲಾಗಿದೆ.
ಪಂಚ ಗ್ಯಾರಂಟಿಗಳಿಗೆ ಅನುದಾನ ಮೀಸಲು:ಪಂಚ ಗ್ಯಾರಂಟಿಗಳಿಗೆ ಬಜೆಟ್ನಲ್ಲಿ ಸಂಪೂರ್ಣ ಅನುದಾನ ಎತ್ತಿಡಲಾಗುವುದು. ಐದೂ ಗ್ಯಾರಂಟಿಗಳ ಅನುಷ್ಠಾನಕ್ಕಾಗಿ ಸುಮಾರು 55,000-60000 ಕೋಟಿ ರೂ. ಅನುದಾನ ಮೀಸಲಿಡುವ ಸಾಧ್ಯತೆ ಇದೆ. 2023-24 ಸಾಲಿನಲ್ಲಿನಲ್ಲಿ ಪಂಚ ಗ್ಯಾರಂಟಿಗಳಿಗಾಗಿ ರಾಜ್ಯ ಸರ್ಕಾರ ಸುಮಾರು 40,000 ಕೋಟಿ ರೂ. ಅನುದಾನ ಹಂಚಿಕೆ ಮಾಡಲಾಗಿತ್ತು. 2024-25 ಸಾಲಿನಲ್ಲಿ ಪಂಚ ಗ್ಯಾರಂಟಿಗೆ ಸಂಪೂರ್ಣ ಅನುದಾನ ಮೀಸಲಿಡುವ ಅನಿವಾರ್ಯತೆ ಇದೆ. ಗೃಹ ಲಕ್ಷ್ಮಿಗೆ ಸುಮಾರು 31,900 ಕೋಟಿ ರೂ. ಬೇಡಿಕೆ ಇಡಲಾಗಿದೆ. ಉಳಿದಂತೆ ಯುವನಿಧಿಗೆ 2,500 ಕೋಟಿ ರೂ., ಶಕ್ತಿ ಯೋಜನೆಗೆ ಸುಮಾರು 6,500 ಕೋಟಿ ರೂ., ಗೃಹ ಜ್ಯೋತಿಗೆ ಸುಮಾರು 12,000 ಕೋಟಿ ರೂ. ಮೀಸಲಿಡುವ ಸಾಧ್ಯತೆ ಇದೆ. ಒಟ್ಟಿನಲ್ಲಿ ಬಜೆಟ್ ಗಾತ್ರ ಹಿಗ್ಗಿದರೂ ಅದರಲ್ಲಿ ಬಹುಪಾಲು ಪಂಚ ಗ್ಯಾರಂಟಿಗೆ ಹೋಗುವುದಂತೂ ಖಚಿತ.
ಉಳಿತಾಯದ ಬಜೆಟ್ ಮಂಡನೆ?:ಈ ಬಾರಿ ಸಿಎಂ ಸಿದ್ದರಾಮಯ್ಯ ಅವರು ಉಳಿತಾಯದ ಬಜೆಟ್ ಮಂಡಿಸುವ ಸಾಧ್ಯತೆ ಇದೆ. ಕಳೆದ ಬಾರಿ ಕೊರತೆಯ ಬಜೆಟ್ ಮಂಡಿಸಲಾಗಿತ್ತು. ಎರಡು ಲಕ್ಷಕ್ಕೂ ಅಧಿಕ ತೆರಿಗೆ ಆದಾಯ ಸಂಗ್ರಹದ ಗುರಿಯನ್ನು ಅಂದಾಜಿಸಲಾಗಿದೆ. ಇದಕ್ಕೆ ಪೂರಕವಾಗಿ ತೆರಿಗೇತರ ಆದಾಯ ಸಂಗ್ರಹಕ್ಕೆ ಹೆಚ್ಚಿನ ಒತ್ತು ಕೊಡಲು ಸಿಎಂ ಮುಂದಾಗಿದ್ದಾರೆ. ಈಗಾಗಲೇ ಆಸ್ತಿ ಮಾರ್ಗಸೂಚಿ ದರ, ಬಿಯರ್ ದರ ಹೆಚ್ಚಿಸಲಾಗಿದೆ. ಉಳಿದಂತೆ ಈ ಬಾರಿ ಗಣಿಗಾರಿಕೆ ರಾಯಧನ ಹೆಚ್ಚಿಸುವ ಸಾಧ್ಯತೆ ಇದೆ. ಉಳಿದಂತೆ ಇತರ ತೆರಿಗೇತರ ಆದಾಯಗಳನ್ನು ಹೆಚ್ಚಿಗೆ ಸಂಗ್ರಹಿಸುವ ಗುರಿಯೊಂದಿಗೆ ಉಳಿತಾಯ ಬಜೆಟ್ ಮಂಡನೆಗೆ ಸಜ್ಜಾಗಿದ್ದಾರೆ ಎಂದು ಹೇಳಲಾಗಿದೆ.
ಅಭಿವೃದ್ಧಿಗೆ ಹೆಚ್ಚಿನ ಹಣ, ತೆರಿಗೆ ಹೊರೆ ಇಲ್ಲದ ಬಜೆಟ್ ನಿರೀಕ್ಷೆ:ಈ ಬಾರಿ ಅಭಿವೃದ್ಧಿಗಾಗಿ ಹೆಚ್ಚಿನ ಹಣ ಇಡಲಿದ್ದಾರೆ. ಅಭಿವೃದ್ಧಿಗಾಗಿನ ಬಂಡವಾಳ ವೆಚ್ಚಕ್ಕೆ ಹೆಚ್ಚಿನ ಒತ್ತು ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇನ್ನು ಲೋಕಸಭೆ ಚುನಾವಣೆ ಹಿನ್ನೆಲೆ ತೆರಿಗೆ ಹೊರೆ ಇಲ್ಲದ ಬಜೆಟ್ ಮಂಡನೆ ಸಾಧ್ಯತೆ ಇದೆ. ಅಬಕಾರಿ ಸುಂಕ ಹೆಚ್ಚಿಸುವ ಸಾಧ್ಯತೆ ಇದೆ. ಉಳಿದಂತೆ ಇತರ ಯಾವುದೇ ತೆರಿಗೆ ಹೆಚ್ಚಿಸುವ ಇರಾದೆಯನ್ನು ಸಿಎಂ ಹೊಂದಿಲ್ಲ ಎನ್ನಲಾಗಿದೆ.
1 ಲಕ್ಷ ಕೋಟಿ ರೂ. ಆಸುಪಾಸು ಸಾಲದ ಮೊರೆ?:ಈ ಬಾರಿ ಸಿಎಂ ಸಿದ್ದರಾಮಯ್ಯ ಅವರು ಅಂದಾಜು 1 ಲಕ್ಷ ಕೋಟಿ ರೂ. ಆಸುಪಾಸು ಸಾಲದ ಮೊರೆ ಹೋಗುವ ಸಾಧ್ಯತೆ ಹೆಚ್ಚಿದೆ. ಪ್ರಸಕ್ತ ವಿತ್ತೀಯ ಸ್ಥಿತಿಗತಿ, ಗರಿಷ್ಠ ರಾಜಸ್ವ ವೆಚ್ಚದ ಪ್ರಮಾಣ, ಬೃಹತ್ ಪಂಚ ಗ್ಯಾರಂಟಿ ಹೊರೆಯ ಹಿನ್ನೆಲೆ ಇನ್ನಷ್ಟು ಸಾಲದ ಮೊರೆ ಹೋಗುವ ಸಾಧ್ಯತೆ ಹೆಚ್ಚಿದೆ. ಮೂಲಗಳ ಪ್ರಕಾರ 2024-25 ಸಾಲಿನಲ್ಲಿ ಸಿಎಂ ಸಿದ್ದರಾಮಯ್ಯ ಅಂದಾಜು 1 ಲಕ್ಷ ಕೋಟಿ ರೂ. ಆಸುಪಾಸು ಸಾಲದ ಮೊರೆ ಹೋಗುವುದು ಬಹುತೇಕ ಖಚಿತವಾಗಿದೆ.