ಬೆಂಗಳೂರು : ನಾನು ಜಾತಿ ವ್ಯವಸ್ಥೆಯ ವಿರುದ್ಧವಾಗಿರುವ ವ್ಯಕ್ತಿ. ಅದಕ್ಕಾಗಿನೇ ನನಗೆ ಮಸಿ ಬಳಿಯಬೇಕು ಎಂದು ಯತ್ನ ಮಾಡುತ್ತಿದ್ದಾರೆ. ಅದು ಮುಂದೆ ನೋಡೋಣ ಏನಾಗುತ್ತೆ ಅಂತ. ಆದರೆ ಪ್ರಯತ್ನ ಅಂತೂ ನಡೆಯುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಭಾನುವಾರ ನಡೆದ ಮಾಜಿ ಸಂಸದರಾದ ವಿ. ಎಸ್ ಉಗ್ರಪ್ಪ ಅವರ ಬದುಕು, ಹೋರಾಟವನ್ನು ಕಟ್ಟಿಕೊಟ್ಟಿರುವ ಸಮರ್ಥ ಜನ ನಾಯಕ ಕೃತಿಯನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ಉಗ್ರಪ್ಪ ಮತ್ತು ನಾನು ಸಾಮಾಜಿಕ ನ್ಯಾಯದ ವಿಚಾರದಲ್ಲಿ ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಂಡವರಲ್ಲ. ಈ ಕಾರಣಕ್ಕೇ ನನಗೆ ಮಸಿ ಬಳಿಯಲು ಕೆಲವರು ಯತ್ನಿಸುತ್ತಿದ್ದಾರೆ. ಅವರ ಈ ಪ್ರಯತ್ನಗಳು ಹೇಗೆ ಯಶಸ್ವಿ ಆಗುತ್ತವೆ ನಾನೂ ನೋಡ್ತೀನಿ ಎಂದು ಇದೇ ಸಂದರ್ಭದಲ್ಲಿ ಸವಾಲು ಹಾಕಿದರು.
ಉಗ್ರಪ್ಪ ಬಹಳ ನಿಷ್ಠುರವಾದಿ. ಸಾರ್ವಜನಿಕ ಜೀವನದಲ್ಲಿ ಮೌಲ್ಯಗಳ ವಿಚಾರದಲ್ಲಿ ಯಾರ ಜೊತೆಗೂ ರಾಜಿ ಮಾಡಿಕೊಳ್ಳುವುದಿಲ್ಲ. ರಾಜಕೀಯ ಹೋರಾಟದಲ್ಲಿ ಉಗ್ರರಾಗಿದ್ದರೂ ಮನೆಯಲ್ಲಿ ಮಾತ್ರ ಸೌಮ್ಯವಾದಿ. ಸಂವಿಧಾನದ ಆಚೆಗೆ ಯೋಚಿಸುವವರಲ್ಲ. ವಕೀಲರಾಗಿ ಹಲವಾರು ವರ್ಷ ಸಂವಿಧಾನದ ಪಾಠ ಮಾಡಿ ಈಗ ಸಂವಿಧಾನ ನಾಲಿಗೆ ತುದಿಯಲ್ಲೇ ಇದೆ. ತಪ್ಪುಗಳನ್ನು ಹುಡುಕುವುದರಲ್ಲಿ ಉಗ್ರಪ್ಪರು ನಿಸ್ಸೀಮರು ಎಂದು ಮೆಚ್ಚುಗೆ ಸೂಚಿಸಿದರು.
ಸಿದ್ಧಾಂತ ಹಾಗೂ ಮೌಲ್ಯಗಳಲ್ಲಿ ರಾಜಿ ಮಾಡಿಕೊಳ್ಳಲಿಲ್ಲ:ಕಾನೂನುಗಳನ್ನು ಚೆನ್ನಾಗಿ ಅರಿತಿರುವ ಉಗ್ರಪ್ಪ ಅವರ ಅನುಭವ, ತಿಳುವಳಿಕೆ ಪಕ್ಷ ಸಂಘಟನೆಗೆ ಬಹಳ ನೆರವು ನೀಡಿದೆ. ರಾಜಕಾರಣದ ಕೆಲವು ಹಂತಗಳಲ್ಲಿ ಉಗ್ರಪ್ಪ ಅವರಿಗೆ ನೆರವಾಗಲು ಸಾಧ್ಯವಾಗಿದೆ. ಉಳಿದ ಸಂದರ್ಭಗಳಲ್ಲಿ ಸಾಧ್ಯವಾಗಿಲ್ಲ. ಆದರೆ, ಎಲ್ಲಾ ಏರಿಳಿತಗಳಲ್ಲೂ ಉಗ್ರಪ್ಪ ಅವರು ತಮ್ಮ ಸಿದ್ಧಾಂತ ಹಾಗೂ ಮೌಲ್ಯಗಳಲ್ಲಿ ರಾಜಿ ಮಾಡಿಕೊಳ್ಳಲಿಲ್ಲ ಎಂದು ಸಿಎಂ ಮೆಚ್ಚುಗೆ ಸೂಚಿಸಿದರು.
ಉಗ್ರಪ್ಪ ಅವರಿಗೆ ಇನ್ನೂ ಹೆಚ್ಚಿನ ಸ್ಥಾನಮಾನ ಸಿಗಬೇಕಿತ್ತು. ಸಿಕ್ಕಿಲ್ಲ ಎನ್ನುವ ಬೇಸರ ನನಗೂ ಇದೆ. ಮುಂದೆ ಅವಕಾಶ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.
ನಾನು ಬಳ್ಳಾರಿ ಪಾದಯಾತ್ರೆ ಮಾಡುವುದಕ್ಕೂ ಮೊದಲೇ ಉಗ್ರಪ್ಪ ಗಣಿ ಹಗರಣ ಮತ್ತು ರೆಡ್ಡಿ ಬ್ರದರ್ಸ್ ವಿಚಾರದ ಬಗ್ಗೆ ಸತ್ಯ ಶೋಧನಾ ವರದಿ ನೀಡಿದ್ದರು. ಈ ವರದಿಯಿಂದ ಬಳ್ಳಾರಿ ಪಾದಯಾತ್ರೆಗೆ ನಾನು ತೋಳು ತಟ್ಟುವಂತಾಯಿತು. ಪಾದಯಾತ್ರೆ ಯಶಸ್ಸಿಗೆ ಉಗ್ರಪ್ಪ ಅವರ ಪಾತ್ರ ಕೂಡ ಪ್ರಮುಖವಾದದ್ದು. ಉಗ್ರಪ್ಪ ಮತ್ತು ಪಿ.ಜಿ.ಆರ್ ಸಿಂಧ್ಯಾ ಇಬ್ಬರೂ RSS ನಲ್ಲಿದ್ದವರು. ಇಬ್ಬರಿಗೂ RSS ನ ದ್ವೇಷದ, ತಾರತಮ್ಯದ, ಜಾತಿವಾದದ ಸತ್ಯ ಗೊತ್ತಾಗಿ RSS ನಿಂದ ಹೊರಗೆ ಬಂದು ಸಾಮಾಜಿಕ ನ್ಯಾಯದ ಪರವಾಗಿ ನಿಂತಿದ್ದು, ಪ್ರಬುದ್ಧ ಜನಪರ ರಾಜಕಾರಣಿ ಆದರು ಎಂದರು.
ಸಿದ್ದರಾಮಯ್ಯ ಹಿಂದೆ ಪಿತೂರಿ ನಡೆಯುತ್ತಿದೆ :ಇದೇ ವೇಳೆ ಮಾತನಾಡಿದ ಪಿ.ಜಿ.ಆರ್ ಸಿಂಧ್ಯಾ, ಸಿಎಂ ಸಿದ್ದರಾಮಯ್ಯರ ಬಗ್ಗೆ ಈಗ ಅನೇಕ ವಿಚಾರ ಪ್ರಸ್ತಾಪ ಆಗುತ್ತಿದೆ. ಇದರ ಹಿಂದೆ ಬಹಳ ದೊಡ್ಡ ಪಿತೂರಿ ನಡೆಯುತ್ತಿದೆ. ದೇವರಾಜ್ ಅರಸು ಅವರು ಇಂದಿರಾ ಗಾಂಧಿಯನ್ನು ಗೆಲ್ಲಿಸಿದ್ದರು. ಕರ್ನಾಟಕದ ನಾಯಕರೇ ಇಂದಿರಾ ಗಾಂಧಿಯವರ ಕಿವಿ ಚುಚ್ಚಿದ್ದರು ಎಂದು ಹೇಳಿದರು.
ದೇವರಾಜು ಅರಸು ಮೇಲೆ, ಬಂಗಾರಪ್ಪ ಮೇಲೆ, ಗುಂಡೂರಾವ್ ಮೇಲೆ ಆಪಾದನೆಗಳು ಬಂದಿದ್ದವು. ಆಪಾದನೆ ಮಾಡುವುದೇ ಅವರ ಕಸುಬಾಗಿದೆ. ಇದಕ್ಕೆ ತಲೆಕೆಡಿಸಿಕೊಳ್ಳಬೇಡಿ. ಸಿದ್ದರಾಮಯ್ಯ ಹಿಂದೆ ಕಾಂಗ್ರೆಸ್ ಪಕ್ಷ ಇದೆ. ಡಿಸಿಎಂ ಡಿಕೆಶಿ ಇದ್ದಾರೆ. ಡಿಸಿಎಂ ಡಿಕೆಶಿ ನಿಜವಾಗಿಯೂ ಕಲ್ಲು ಬಂಡೆ. ಕಲ್ಲು ಬಂಡೆ ತರ ನಿಮ್ಮ ಹಿಂದೆ ಇದ್ದಾರೆ. ಅಧೈರ್ಯದ ಮಾತು ಆಡಬೇಡಿ. ನಿಮ್ಮ ಮೇಲೆ ಆರೋಪ ಮಾಡುತ್ತಿರುವವರೆಲ್ಲರೂ ಇನ್ನೂ ಕಣ್ಣು ಬಿಟ್ಟಿಲ್ಲ ಎಂದು ಸಿಂಧ್ಯಾ ಸಿಎಂ ಪರ ಬ್ಯಾಟ್ ಬೀಸಿದರು.
ತಾಳ್ಮೆ ಮೀರಿ ಮಾತನಾಡುತ್ತಿದ್ದಾರೆ. ನೀವು ಎರಡನೇ ಬಾರಿ ಸಿಎಂ ಆಗಿದ್ದೀರಿ. ಇವರೆಲ್ಲ ಗಾಜಿನ ಮನೆಯಲ್ಲಿ ಕೂತವರು. ಅದು ಅವರ ತಲೆ ಮೇಲೆ ಬೀಳುತ್ತೆ. ನೀವು ಧೈರ್ಯವಾಗಿ ಮುನ್ನುಗ್ಗಿ, ನೀವು ಏನೂ ತಪ್ಪು ಮಾಡಿಲ್ಲ. ಸಿದ್ದರಾಮಯ್ಯ ಅವರ ಬಗ್ಗೆ ಲೇವಡಿ ಮಾಡುತ್ತಿದ್ದಾರೆ. ಇದನ್ನು ನಾವು ಸಹಿಸಲ್ಲ. ಡಿ. ಕೆ ಶಿವಕುಮಾರ್ರನ್ನು ನೀವು ಬೆಳೆಸಬೇಕು. ಅವರಿಗೆ ಮುಂದೆ 25 ವರ್ಷದ ರಾಜಕಾರಣ ಇದೆ ಎಂದು ತಿಳಿಸಿದರು.
ಸಮಾಜದ ವ್ಯವಸ್ಥೆ ನೋಡಿದರೆ ನನಗೆ ನೋವಾಗುತ್ತಿತ್ತು:ಈ ಸಂದರ್ಭ ಮಾತನಾಡಿದ ವಿ. ಎಸ್ ಉಗ್ರಪ್ಪ, ನಾನು ಸಿದ್ದಗಂಗಾ ಮಠದ ವಿದ್ಯಾರ್ಥಿಯಾಗದೇ ಇದ್ದಿದ್ದರೆ ಅಥವಾ ವಕೀಲನಾಗದೇ ಇದ್ದಿದ್ದರೆ ನಾನೊಬ್ಬ ನಕ್ಸಲೈಟ್ ಆಗುತ್ತಿದ್ದೆ. ಸಮಾಜದ ವ್ಯವಸ್ಥೆ ನೋಡಿದರೆ ನನಗೆ ನೋವಾಗುತ್ತಿತ್ತು. ನನ್ನ ರಾಜಕೀಯ ಬದುಕಿಗೆ ಪ್ರೇರಣೆಯಾದವರು ಜಯಪ್ರಕಾಶ್ ನಾರಾಯಣ್ ಅವರು. ತುರ್ತು ಪರಿಸ್ಥಿತಿ ಘೋಷಣೆಯಾದ ದಿನ ನಾನು ಸೆರೆಮನೆ ವಾಸದಲ್ಲಿದ್ದಾಗ ನನಗೆ ಸಿಕ್ಕ ತರಬೇತಿ ಎಂದರು.
ಇದನ್ನೂ ಓದಿ:ಸಿಎಂ ಬದಲಾವಣೆ ವಿಚಾರ ಬರೀ ಊಹಾಪೋಹ: ಸಿದ್ದರಾಮಯ್ಯ - Siddaramaiah Clarifies