ಬೆಳಗಾವಿ :ಸಂಗೊಳ್ಳಿ ರಾಯಣ್ಣನನ್ನು ನಮ್ಮ ಕಡೆಯವರೇ ಬ್ರಿಟಿಷರಿಗೆ ಹಿಡಿದುಕೊಡುತ್ತಾರೆ. ಅದೇ ರೀತಿ ಹಿಂದುಳಿದ ವರ್ಗದ ನಾನು ಮುಖ್ಯಮಂತ್ರಿ ಆಗಿರೋದು ವಿರೋಧಿಗಳಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ ಎಂದು ಸಿಎಂ ಸಿದ್ದರಾಮಯ್ಯ ತಮ್ಮ ವಿರೋಧಿಗಳ ವಿರುದ್ಧ ಗುಡುಗಿದರು.
ಬೆಳಗಾವಿ ಜಿಲ್ಲೆಯ ಕೌಜಲಗಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಕಂಚಿನ ಪ್ರತಿಮೆ ಹಾಗೂ ಕಲ್ಲಿನ ಕಿರು ಕೋಟೆಯನ್ನು ಅನಾವರಣಗೊಳಿಸಿ ಅವರು ಮಾತನಾಡಿದರು. ವೇದಿಕೆ ಮೇಲಿದ್ದ ಬಾಲಚಂದ್ರ ಜಾರಕಿಹೊಳಿ ಹೆಸರು ಪ್ರಸ್ತಾಪಿಸಿದ ಸಿಎಂ ಸಿದ್ದರಾಮಯ್ಯ, ಬಾಲಚಂದ್ರ ಯಾವಾಗಲೂ ನಮ್ಮ ಪರ. ಆದರೆ, ಅವರ ಸಹಪಾಠಿಗಳು ನನ್ನ ವಿರುದ್ಧ. ಹೇಗಾದರೂ ಮಾಡಿ ಸಿದ್ದರಾಮಯ್ಯನನ್ನು ಅಧಿಕಾರದಿಂದ ಕೆಳಗಿಳಿಸಬೇಕು ಎಂದು ಪ್ರಯತ್ನಿಸುತ್ತಿದ್ದಾರೆ ಎಂದರು.
ಆದರೆ, ಅದು ಎಂದಿಗೂ ಸಾಧ್ಯವಿಲ್ಲ. ನಾನು ಯಾವ ತಪ್ಪೂ ಮಾಡಿಲ್ಲ. ಎಲ್ಲಿಯವರೆಗೆ ನಿಮ್ಮ ಆಶೀರ್ವಾದ ಇರುತ್ತದೆಯೋ, ಅಲ್ಲಿಯವರೆಗೂ ನನ್ನ ಅಧಿಕಾರದಿಂದ ಕೆಳಗಿಸಲು ಯಾರ ಕೈಯಿಂದಲೂ ಸಾಧ್ಯವಿಲ್ಲ. ಒಬ್ಬ ಹಿಂದುಳಿದವ ಮುಖ್ಯಮಂತ್ರಿ ಆಗಿದ್ದಾನೆ ಎನ್ನುವುದನ್ನು ಇವರಿಗೆ ತಡೆದುಕೊಳ್ಳಲು ಆಗುತ್ತಿಲ್ಲ. ಅದೇ ರೀತಿ ರಾಯಣ್ಣನನ್ನು ಮೋಸದಿಂದ ಹಿಡಿದಿದ್ದರು ಎಂದು ತಮ್ಮ ರಾಜಕೀಯ ವಿರೋಧಿಗಳಿಗೆ ತಿರುಗೇಟು ಕೊಟ್ಟರು.
ವಿವಿಧ ಗ್ರಾಮಗಳಲ್ಲಿ ಏಕಕಾಲಕ್ಕೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಾಲ್ಕು ಪ್ರತಿಮೆಗಳನ್ನು ಅನಾವರಣಗೊಳಿಸುತ್ತಿರುವುದು ನನಗೆ ಹೆಮ್ಮೆಯ ಸಂಗತಿಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದ ಸಿದ್ದರಾಮಯ್ಯ, ಸಂಗೊಳ್ಳಿ ರಾಯಣ್ಣ ಕಿತ್ತೂರು ಸಂಸ್ಥಾನದಲ್ಲಿ ಸೈನಿಕನಾಗಿ, ರಾಣಿ ಚನ್ನಮ್ಮನ ಬಲಗೈ ಬಂಟನಾಗಿ ಕಿತ್ತೂರು ಸಂಸ್ಥಾನದ ಉಳಿವಿಗೆ ಬ್ರಿಟಿಷರ ವಿರುದ್ಧ ಹೋರಾಡಿದ ಮಹಾನ್ ಚೇತನ. ಅತ್ಯಂತ ಪರಾಕ್ರಮಿ ಮತ್ತು ಧೈರ್ಯಶಾಲಿ ಯೋಧನಾಗಿದ್ದ ಎಂದು ಬಣ್ಣಿಸಿದರು.
ಕಿತ್ತೂರು ಸಂಸ್ಥಾನ ಬ್ರಿಟಿಷರ ವಿರುದ್ಧ ಮೊದಲ ಯುದ್ಧದಲ್ಲಿ ಜಯ ಗಳಿಸಿತ್ತು. ಬಳಿಕ ನಮ್ಮವರ ಕುತಂತ್ರದಿಂದ ಎರಡನೇ ಬಾರಿ ಕಿತ್ತೂರಿಗೆ ಸೋಲಾಗುತ್ತದೆ. ಸೋಲಿನ ಬಳಿಕ ರಾಣಿ ಚನ್ನಮ್ಮ ಅವರನ್ನು ಬ್ರಿಟಿಷರು ಸೆರೆವಾಸದಲ್ಲಿ ಇಡುತ್ತಾರೆ. ಆದರೆ ಅದಕ್ಕೆ ಬಗ್ಗದೆ ಸಂಗೊಳ್ಳಿ ರಾಯಣ್ಣ ಬ್ರಿಟಿಷರ ವಿರುದ್ಧ ಏಕಾಂಗಿ ಹೋರಾಟವನ್ನು ಮುಂದುವರೆಸುತ್ತಾರೆ. ಗೆರಿಲ್ಲಾ ಯುದ್ಧ ತಂತ್ರದ ಮೂಲಕ ಹೋರಾಡುತ್ತಾರೆ. ರಾಯಣ್ಣ ಮಹಾನ್ ದೇಶಪ್ರೇಮಿ. ಆತನ ದೇಶಪ್ರೇಮ ನಮ್ಮೆಲ್ಲರಿಗೂ ಪ್ರೇರಣಾದಾಯಕ ಎಂದು ಸಿಎಂ ಹೇಳಿದರು.