ಬೆಂಗಳೂರು: ನನಗೆ ರಾಜಕೀಯ ತೇಜೋವಧೆ ಆಗುತ್ತಿರುವುದನ್ನು ಮನಗಂಡು ಪತ್ನಿ ಸ್ವತಂತ್ರವಾಗಿ ಮುಡಾ ನಿವೇಶನ ವಾಪಸ್ ಮಾಡುವ ಬಗ್ಗೆ ತೀರ್ಮಾನ ತೆಗೆದುಕೊಂಡಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ರವೀಂದ್ರ ಕಲಾಕ್ಷೇತ್ರದಲ್ಲಿ ಇಂದು ಆಯೋಜಿಸಲಾಗಿದ್ದ 'ವಿಶ್ವ ಹಿರಿಯ ನಾಗರಿಕರ ದಿನಾಚರಣೆ-202' ಕಾರ್ಯಕ್ರಮ ಮುಗಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಪತ್ನಿ ನನ್ನ ಜೊತೆಗೆ ಚರ್ಚೆ ಮಾಡಿಲ್ಲ. ಸ್ವತಂತ್ರವಾಗಿ ತೀರ್ಮಾನ ಕೈಗೊಂಡಿದ್ದಾರೆ. ಅವರ ಸಹೋದರ ದಾನವಾಗಿ ನೀಡಿದ ಜಮೀನು ಅದು. ಮುಡಾದವರು ಆ ಜಮೀನನ್ನು ಸ್ವಾಧೀನಕ್ಕೆ ಪಡೆದುಕೊಂಡು ನಿವೇಶನ ಮಾಡಿ ಬೇರೆಯವರಿಗೆ ಹಂಚಿಕೆ ಮಾಡಿದ್ದರು. ಬದಲಿ ನಿವೇಶನವಾಗಿ ವಿಜಯನಗರದಲ್ಲಿ ನೀಡಿದ್ದರು. ಮುಡಾಗೆ ನಾವೇನು ಅಲ್ಲೇ ಕೊಡಿ ಎಂದು ಕೇಳಿರಲಿಲ್ಲ. ಅವರೇ ವಿಜಯನಗರದಲ್ಲಿ ನಿವೇಶನ ಕೊಟ್ಟಿದ್ದರು. ಆದರೆ ಈಗ ವಿವಾದದಿಂದ ಬೇಸರಗೊಂಡು ನನ್ನ ಪತಿಗೆ ರಾಜಕೀಯ ತೇಜೋವಧೆ ಆಗುತ್ತಿದೆ, ಹಾಗಾಗಿ ಸೈಟ್ ಬೇಡವೇ ಬೇಡ ಎಂದು ವಾಪಸ್ ಕೊಟ್ಟಿದ್ದಾರೆ ಎಂದು ಹೇಳಿದರು.
'ಹಣಕಾಸು ವರ್ಗಾವಣೆ ಆಗಿಲ್ಲ': ಮುಡಾ ಪ್ರಕರಣದಲ್ಲಿ ಇ.ಡಿ. ತನಿಖೆಯ ಕುರಿತು ಪ್ರತಿಕ್ರಿಯಿಸಿ, ಕಾನೂನು ಏನಾದರೂ ಕ್ರಮ ಕೈಗೊಳ್ಳಲಿ. ಯಾವ ಆಧಾರದಲ್ಲಿ ಪ್ರಕರಣ ದಾಖಲು ಮಾಡಿದ್ದಾರೋ ಗೊತ್ತಿಲ್ಲ. ಈ ಪ್ರಕರಣದಲ್ಲಿ ಹಣಕಾಸು ವರ್ಗಾವಣೆ ಆಗಿಲ್ಲ. ನನ್ನ ಪಾತ್ರ ಈ ಪ್ರಕರಣದಲ್ಲಿ ಏನೂ ಇಲ್ಲ ಎಂದರು.