ಕರ್ನಾಟಕ

karnataka

ETV Bharat / state

ಕುಡಿವ ನೀರಿಗೆ ಸಮಸ್ಯೆ ಆಗದಂತೆ ಕ್ರಮ ವಹಿಸಲು ಡಿಸಿಗಳಿಗೆ ಸ್ಪಷ್ಟ ಸೂಚನೆ: ಸಿಎಂ ಸಿದ್ದರಾಮಯ್ಯ - Water supply by tanker

ಯಾವುದೇ ಕಾರಣಕ್ಕೂ ಕುಡಿಯುವ ನೀರಿಗೆ ಸಮಸ್ಯೆ ಆಗಬಾರದು ಎಂದು ಮುಖ್ಯ ಕಾರ್ಯದರ್ಶಿಗಳಿಗೆ, ಡಿಸಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ

By ETV Bharat Karnataka Team

Published : Mar 5, 2024, 5:24 PM IST

ಬೆಂಗಳೂರು : ಸರ್ಕಾರ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಏನೆಲ್ಲಾ ಕ್ರಮ ತೆಗೆದುಕೊಳ್ಳಬೇಕೋ ಅದನ್ನು ಕೈಗೊಳ್ಳಲು ಸ್ಪಷ್ಟ ಸೂಚನೆಯನ್ನು ಅಧಿಕಾರಿಗಳಿಗೆ ನೀಡಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಅವರು ತಿಳಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ರಾಜ್ಯದ ಬರ ಪರಿಸ್ಥಿತಿ ಕುರಿತಂತೆ ಜಿಲ್ಲಾ ಉಸ್ತುವಾರಿ ಸಚಿವರು, ಕಾರ್ಯದರ್ಶಿಗಳು, ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿದರು.

ನೀರಿನ ಸಮಸ್ಯೆ ಆಗದಂತೆ ನೋಡಿಕೊಳ್ಳಿ ಅಂತಾ ಅಧಿಕಾರಿಗಳಿಗೆ ಸೂಚನೆ:ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ವಿಡಿಯೋ ಕಾನ್ಫರೆನ್ಸ್ ಮೂಲಕ ಎಲ್ಲಾ ಜಿಲ್ಲೆಗಳ ಡಿಸಿ, ಸಿಇಒಗಳ ಜೊತೆ ಸಭೆ ನಡೆಸಿದ್ದೇವೆ. ಉಸ್ತುವಾರಿ ಸಚಿವರುಗಳು ಪಾಲ್ಗೊಂಡಿದ್ದರು. ರಾಜ್ಯದಲ್ಲಿ ಈ ಬಾರಿ ಬರಗಾಲ ಇದೆ. 223 ತಾಲೂಕುಗಳಲ್ಲಿ ಬರಗಾಲ ಇದೆ. ನೀರಿನ ಕೊರತೆ, ಸಮಸ್ಯೆಗಳ ಬಗ್ಗೆ ವರದಿಯಾಗುತ್ತಿದೆ. ಯಾವುದೇ ಕಾರಣಕ್ಕೂ ಕುಡಿಯುವ ನೀರಿಗೆ ಸಮಸ್ಯೆ ಆಗಬಾರದು ಎಂದು ಸ್ಪಷ್ಟವಾಗಿ ಸೂಚನೆ ನೀಡಿದ್ದೇನೆ ಎಂದರು.

ಅದಕ್ಕಾಗಿ ಬೇಕಾದ ಹಣವನ್ನು ಕೊಡುತ್ತೇವೆ. ಡಿಸಿಗಳ ಪಿಡಿ ಖಾತೆಯಲ್ಲಿ 854 ಕೋಟಿ ರೂ. ಹಣ ಇದೆ. 130 ಕೋಟಿ ರೂ.‌ ತಹಶೀಲ್ದಾರ್ ಖಾತೆಯಲ್ಲಿ ಇದೆ. ಪ್ರತಿ ತಾಲೂಕಿನಲ್ಲಿ ಟಾಸ್ಕ್ ಫೋರ್ಸ್ ರಚನೆ ಮಾಡಲಾಗಿದೆ. ಟಾಸ್ಕ್ ಫೋರ್ಸ್ ಆಗಿದ್ದಾಂಗೆ ಸಭೆ ನಡೆಸಿ ಮೇವು, ಕುಡಿಯುವ ನೀರಿನ ಬಗ್ಗೆ ತೀರ್ಮಾನ ಕೈಗೊಳ್ಳಬೇಕು. 307 ಜಿಲ್ಲಾ ಮಟ್ಟದ ಸಭೆ ಮಾಡಲಾಗಿದೆ. ಯಾವ ಜಿಲ್ಲೆಗಳಲ್ಲಿ, ಗ್ರಾಮಗಳಲ್ಲಿ, ವಾರ್ಡ್​ಗಳಲ್ಲಿ ಸಮಸ್ಯೆ ಇದೆ ಅದಕ್ಕೆ ಬೇಕಾದ ಪ್ಲಾನ್ ರೂಪಿಸಬೇಕು ಎಂದು ಸೂಚಿಸಿದ್ದೇವೆ ಎಂದರು.

98 ತಾಲೂಕುಗಳು, 412 ಪಂಚಾಯತಿಗಳಲ್ಲಿ ಕುಡಿಯುವ ನೀರಿನ‌ ಸಮಸ್ಯೆ ಇದೆ. 175 ಗ್ರಾಮಗಳಲ್ಲಿ 204 ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. 500 ಗ್ರಾಮಗಳಲ್ಲಿ 596 ಖಾಸಗಿ ಬೋರ್​ವೆಲ್​ನಿಂದ ನೀರು ಪೂರೈಸಲಾಗುತ್ತಿದೆ. 646 ಟಾಸ್ಕ್ ಫೋರ್ಸ್ ಸಭೆಗಳನ್ನು ಮಾಡಲಾಗಿದೆ. ಬಿಬಿಎಂಪಿಯಲ್ಲಿ 120 ಹಾಗೂ ಜಲಮಂಡಳಿಯಿಂದ 232 ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲು ಕ್ರಮ ವಹಿಸಲಾಗಿದೆ ಎಂದು ತಿಳಿಸಿದರು.

20 ನಗರ ಪ್ರದೇಶಗಳಲ್ಲಿ 96 ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಸರ್ಕಾರ ಕೊಳವೆ ಬಾವಿಯನ್ನು ಆಳ ಮಾಡುವುದು, ಮೆಷಿನ್ ಅಳವಡಿಕೆ ಮಾಡುವುದು ಮಾಡಬೇಕು. ಖಾಸಗಿ ಕೊಳವೆ ಬಾವಿ ಜೊತೆಗೆ ಒಪ್ಪಂದ ಮಾಡಿ ಅವರಿಗೆ ಹಣ ಕೊಟ್ಟು ನೀರು ಸರಬರಾಜು ಮಾಡಬೇಕು. ಅನಿವಾರ್ಯವಾದಲ್ಲಿ ಕೊಳವೆ ಬಾವಿ ತೋಡಿಸಲು ಡಿಸಿಗಳಿಗೆ, ಸಿಇಒಗಳಿಗೆ ಅಧಿಕಾರ ನೀಡಲಾಗಿದೆ. ಇದಕ್ಕಾಗಿ 70 ಕೋಟಿ ರೂ. ಹಣ ಬಿಡುಗಡೆ ಮಾಡಲಾಗಿದೆ ಎಂದರು‌.

ವಿಪಕ್ಷಗಳಿಂದ ಸುಮ್ಮನೇ ಟೀಕೆ:ವಿಪಕ್ಷದವರು ಸುಮ್ಮನೆ ಟೀಕೆ ಮಾಡುತ್ತಾರೆ. 33.25 ಲಕ್ಷ ರೈತರಿಗೆ 631 ಕೋಟಿ ರೂ.ಗೂ ಅಧಿಕ ಹಣವನ್ನು 2,000 ರೂ.‌ನಂತೆ ತಾತ್ಕಾಲಿಕ ಪರಿಹಾರ ನೀಡಿದ್ದೇವೆ. ಇದರ ಜೊತೆಗೆ ಬೆಳೆ ವಿಮೆಯಾಗಿ 600 ಕೋಟಿ ರೂ ಪಾವತಿಯಾಗಿದೆ. ಇನ್ನೂ 800 ಕೋಟಿ ರೂ. ಪಾವತಿ ಮಾಡಲಾಗುತ್ತದೆ. ಮೇವಿಗೆ ಇಲ್ಲಿಯವರೆಗೆ ಸಮಸ್ಯೆ ಇಲ್ಲ. 40 ಕೋಟಿ ರೂ. ಇದಕ್ಕಾಗಿ ಕೃಷಿ, ಪಶುಸಂಗೋಪನೆ ಇಲಾಖೆಗೆ ಹಣ ನೀಡಿದ್ದೇವೆ.‌ ಮೇವು ಹಾಕಲು ಹಣ ನೀಡಿದ್ದೇವೆ. 8 ಲಕ್ಷ ಹೆಕ್ಟೇರ್ ನಲ್ಲಿ ಮೇವು ಬೆಳೆಯಲು ಕ್ರಮ ವಹಿಸಲಾಗಿದೆ. ಗ್ಯಾರಂಟಿಗಳಿಂದ ಗುಳೆ ಹೋಗುವುದಾಗಲಿ, ಬರದ ತೀವ್ರತೆ ಹೆಚ್ಚಾಗಿ ಕಾಣುತ್ತಿಲ್ಲ ಎಂದು ಹೇಳಿದರು.

ಮುಂದೆ 7400 ಹಳ್ಳಿಯಲ್ಲಿ ನೀರಿನ ತೊಂದರೆ ಆಗಬಹುದು ಹಾಗೂ 1115 ವಾರ್ಡ್​ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗಬಹುದು ಎಂಬ ಬಗ್ಗೆ ಅಂದಾಜಿಸಲಾಗಿದ್ದು, ಅಲ್ಲಿ ಎಲ್ಲಾ ಪೂರ್ವ ತಯಾರಿ ಮಾಡಲಾಗಿದೆ. ನರೇಗಾದಡಿ 100 ದಿನ ಮಾನವ ದಿನ ಇದ್ದು, 150 ಮಾನವ ದಿನ ಹೆಚ್ಚಿಗೆ ಮಾಡಬೇಕು. ಕೇಂದ್ರಕ್ಕೆ ಪತ್ರ ಬರೆದು ನಾಲ್ಕು ತಿಂಗಳು ಆದರೂ ಈವರೆಗೆ ಮಾನವ ದಿನ ಹೆಚ್ಚಿಗೆ ಮಾಡಿಲ್ಲ. ವೇತನ ಪಾವತಿ ಕೂಡ ಮಾಡಿಲ್ಲ. ಸುಮಾರು 1,700 ಕೋಟಿ ರೂ. ಬಾಕಿ ಇದೆ. ಕೇಂದ್ರ ಸರ್ಕಾರ ಪರಿಹಾರ ಕೊಟ್ಟಿಲ್ಲ ಎಂದರೆ ಬಿಜೆಪಿಯವರು ಜಗಳಕ್ಕೆ ಬರುತ್ತಾರೆ ಎಂದು ತಿಳಿಸಿದರು.

ಕಂಟ್ರೋಲ್ ರೂಂ ಸ್ಥಾಪನೆ : ಬಿಜೆಪಿಯವರು ನಾವು ಕೇಳುವ ರೀತಿ ಸರಿ ಇಲ್ಲ ಅಂತಾರೆ. ಅದಕ್ಕೆ ಬಿಜೆಪಿಯವರ ನಾಯಕತ್ವದಲ್ಲಿ ಹೋಗಿ ಕೇಂದ್ರದ ಬಳಿ ನೆರವು ಕೇಳೋಣ ಅಂತ ಹೇಳಿದ್ದೇನೆ. ಆದರೆ ಅದಕ್ಕೆ ಯಾವುದೇ ಸ್ಪಂದನೆ ಇಲ್ಲ. ಪರಿಹಾರ ಕೊಟ್ಟಿಲ್ಲ ಅನ್ನಲೂ ನಮಗೆ ಅಧಿಕಾರ ಇಲ್ಲವಾ?. ನೀವು ಕೇಳುವ ಅಪ್ರೋಚ್ ಸರಿ ಇಲ್ಲ ಅಂತಾರೆ. ಇದ್ದಿದ್ದು ಇದ್ದಂಗೆ ಹೇಳಿದರೆ ಎದೆಗೆ ಬಂದು ಹೊಡೆದರು ಅಂದ ಹಾಗೆ ಆಯಿತು. ಜಿಲ್ಲಾ ಮಟ್ಟದಲ್ಲಿ ಹಾಗೂ ತಾಲೂಕು ಮಟ್ಟದಲ್ಲಿ ಕಂಟ್ರೋಲ್‌ ರೂಮ್ ಮಾಡಲು ಸೂಚನೆ, ಸಹಾಯವಾಣಿ ಮಾಡಲು ಸೂಚನೆ ನೀಡಲಾಗಿದೆ. ಟ್ಯಾಂಕರ್​ನವರು ಪರಿಸ್ಥಿತಿ ದುರುಪಯೋಗ ಮಾಡಬಾರದು. ನೀರು ಸರ್ಕಾರದ್ದು ಎಂದರು.

ಇದನ್ನೂ ಓದಿ :ಬೆಂಗಳೂರಿನ ಕೊಳವೆ ಬಾವಿಯಿಂದ ನೀರು ಪೂರೈಸುವ ಟ್ಯಾಂಕರ್​ಗಳು ಸರ್ಕಾರದ ಸುಪರ್ದಿಗೆ: ಡಿಸಿಎಂ ಡಿ.ಕೆ. ಶಿವಕುಮಾರ್

ABOUT THE AUTHOR

...view details