ಚಾಮರಾಜನಗರ : ಆರ್ ಧ್ರುವನಾರಾಯಣ ಅವರು ಮಾದರಿ ಜನ ನಾಯಕರಾಗಿದ್ದರು. ಕಾಲಾನಂತರವೂ ಅವರ ಜನಪ್ರಿಯತೆ ಬೆಳೆಯುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಸ್ಮರಿಸಿದರು. ಚಾಮರಾಜನಗರ ತಾಲೂಕಿನ ಹೆಗ್ಗವಾಡಿ ಗ್ರಾಮದಲ್ಲಿ ಆಯೋಜಿಸಿದ್ದ ದಿ. ಧ್ರುವನಾರಾಯಣ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕ್ಷೇತ್ರದ ಅಭಿವೃದ್ಧಿ ಮತ್ತು ಚಾಮರಾಜನಗರ ಜಿಲ್ಲೆಯ ಪ್ರಗತಿಗೆ ನಿರಂತರ ಪ್ರಯತ್ನ ಮಾಡಿದ್ದ ಧ್ರುವನಾರಾಯಣ ಅವರು ಜನರ ಮಧ್ಯೆ ಓಡಾಡದ ದಿನವೇ ಇಲ್ಲ. ಇವರದ್ದು, ಜನಪರ ರಾಜಕಾರಣಕ್ಕೆ ಮಾದರಿ ವ್ಯಕ್ತಿತ್ವ ಎಂದರು.
ಕಾಂಗ್ರೆಸ್ ಸಿದ್ಧಾಂತ ಮತ್ತು ಕಾಂಗ್ರೆಸ್ ಪಕ್ಷದ ಆಸ್ತಿಯಾಗಿದ್ದ ಧ್ರುವನಾರಾಯಣ ಅವರು ವಿದ್ಯಾರ್ಥಿ ಅವಧಿಯಿಂದ ಕಾಂಗ್ರೆಸ್ ಪಕ್ಷದ ಕಾರ್ಯಾಧ್ಯಕ್ಷರಾಗುವವರೆಗೂ ಬೆಳೆದರು. ಶಾಸಕರಾಗಿ, ಸಂಸದರಾಗಿ ಕ್ಷೇತ್ರದ ಅಭಿವೃದ್ಧಿಗೆ ನಿರಂತರ ಶ್ರಮಿಸಿದವರು. ಹೀಗಾಗಿ ಇವರ ಅಗಲಿಕೆ ಕೇವಲ ಕಾಂಗ್ರೆಸ್ ಪಕ್ಷಕ್ಕೆ ಮಾತ್ರವಲ್ಲ, ಕನ್ನಡ ನಾಡಿಗೆ ತುಂಬಲಾರದ ನಷ್ಟ ಆಗಿದೆ ಎಂದರು.
ಧ್ರುವನಾರಾಯಣ ಅವರು ಅಜಾತಶತ್ರುವಾಗಿದ್ದರು. ಅವರ ವ್ಯಕ್ತಿತ್ವವನ್ನೇ ಅವರ ಪುತ್ರ ಶಾಸಕ ದರ್ಶನ್ ಧ್ರುವನಾರಾಯಣ ಅವರೂ ಹೊಂದಿದ್ದು, ಜನಪರತೆ ಬೆಳೆಸಿಕೊಂಡಿದ್ದಾರೆ. ಇವರಿಗೆ ನಾನು ಸಂಪೂರ್ಣ, ಸಹಕಾರ, ಬೆಂಬಲ ನೀಡುತ್ತೇನೆ. ಅವರು ಅವರ ತಂದೆ ಸ್ಥಾನ ತುಂಬಲಿದ್ದಾರೆ ಎಂದರು.