ಕರ್ನಾಟಕ

karnataka

ETV Bharat / state

ಹೊಟ್ಟೆ ತುಂಬ ಹಿಟ್ಟು - ಬಾಯಿ ತುಂಬ ಅನ್ನ: ಅಮ್ಮನ ಮಾತು ಸ್ಮರಿಸಿದ ಸಿಎಂ ಸಿದ್ದರಾಮಯ್ಯ - CM Siddaramaiah - CM SIDDARAMAIAH

ಸಿಎಂ ಸಿದ್ದರಾಮಯ್ಯ ಅನ್ನಭಾಗ್ಯ ಯೋಜನೆ ಜಾರಿಯ ಕುರಿತು ಮಾತನಾಡಿದರು. ನಾನು ಅನ್ನಭಾಗ್ಯ ಜಾರಿಗೆ ತರಲು ಅನ್ನಕ್ಕಾಗಿ ಕಾದು ನಿಂತ ಪರಿಸ್ಥಿತಿಯೇ ಕಾರಣ ಎಂದು ಹೇಳಿದರು.

cm-siddaramaiah
ಸಿ ಎಂ ಸಿದ್ದರಾಮಯ್ಯ (ETV Bharat)

By ETV Bharat Karnataka Team

Published : Sep 28, 2024, 5:43 PM IST

Updated : Sep 28, 2024, 6:25 PM IST

ಮೈಸೂರು : ಹೊಟ್ಟೆ ತುಂಬ ಹಿಟ್ಟು- ಬಾಯಿ ತುಂಬ ಅನ್ನ ಎಂದು ನನ್ನಮ್ಮ ಹೇಳುತ್ತಿದ್ದರು. ನಾನು ಅನ್ನ ಭಾಗ್ಯ ಜಾರಿಗೆ ತರಲು ಅನ್ನಕ್ಕಾಗಿ ಕಾದು ನಿಂತ ಪರಿಸ್ಥಿತಿಯೇ ಕಾರಣ ಎಂದು ಸಿಎಂ ಸಿದ್ದರಾಮಯ್ಯ ತಮ್ಮ ಬಾಲ್ಯದ ದಿನಗಳನ್ನು ಸ್ಮರಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರು ವಿಶ್ವವಿದ್ಯಾನಿಲಯ ಮಾನಸಗಂಗೋತ್ರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ "ಗ್ಯಾರಂಟಿ ಯೋಜನೆಗಳು : ಬಡವರ ಸುರಕ್ಷತೆ ಮತ್ತು ಕಲ್ಯಾಣ" ಕೃತಿ ಬಿಡುಗಡೆ ಮಾಡಿ, ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಿಎಂ ಸಿದ್ದರಾಮಯ್ಯ (ETV Bharat)

ಅವಕಾಶಗಳಿಂದ ವಂಚಿತರಾದವರಿಗೆ ಸಮಾನ ಅವಕಾಶ:1949 ನವೆಂಬರ್ 25 ರಂದು ಸಂವಿಧಾನ ಜಾರಿ ಸಭೆಯಲ್ಲಿ ಮಾಡಿದ ಭಾಷಣ ನನ್ನ ಗ್ಯಾರಂಟಿಗಳಿಗೆ ಸ್ಫೂರ್ತಿ.‌ ಅವಕಾಶಗಳಿಂದ ವಂಚಿತರಾಗಿರುವವರಿಗೆ ಸಮಾನ ಅವಕಾಶಗಳು ಸಿಕ್ಕಾಗ ಸಮ ಸಮಾಜ ನಿರ್ಮಾಣ ಸಾಧ್ಯ. ಬಸವಾದಿ ಶರಣರು, ಬುದ್ದ ಕೂಡ ಸಮ ಸಮಾಜದ ಬಗ್ಗೆ ಹೇಳಿದ್ದಾರೆ. ಕೇವಲ ಭಾಷಣಗಳಿಂದ ಸಮ ಸಮಾಜದ ಆಶಯ ಈಡೇರಲ್ಲ. ಈ ಕಾರಣಕ್ಕೇ ಮೊದಲ ಬಾರಿ ಮುಖ್ಯಮಂತ್ರಿ ಆದಾಗಲೂ ಹಲವು ಭಾಗ್ಯಗಳನ್ನು ಜಾರಿ ಮಾಡಿದೆ ಎನ್ನುತ್ತಾ ತಮ್ಮ ಬಾಲ್ಯದ ಬಡತನದ ದಿನಗಳನ್ನು ಸ್ಮರಿಸಿದರು.

ಸಿಎಂ ಸಿದ್ದರಾಮಯ್ಯ (ETV Bharat)

ಹಬ್ಬ ಬಂದಾಗ ಮಾತ್ರ ನಮ್ಮ ಮನೆಯಲ್ಲಿ ಅನ್ನ ಮಾಡ್ತಿದ್ರು. ಅಕ್ಕ ಪಕ್ಕದವರ ಮನೆಯಲ್ಲಿ ಯಾರಿಗಾದ್ರೂ ಹುಷಾರು ತಪ್ಪಿದರೆ ಅವರಿಗೆ ಅನ್ನ ಮಾಡ್ತಿದ್ರು. ಅವರ ಮನೆ ಬಾಗಿಲಲ್ಲಿ ಒಂದು ತುತ್ತು ಅನ್ನಕ್ಕಾಗಿ ಕಾದು ನಿಂತಿದ್ದ ದಿನಗಳು ಇದ್ದವು‌. ಹೀಗೆ ಅನ್ನಕ್ಕೆ ಯಾರೂ ಕಾದು ನಿಲ್ಲಬಾರದು ಎನ್ನುವ ಕಾರಣಕ್ಕೆ ಅನ್ನಭಾಗ್ಯ ಜಾರಿಗೆ ತಂದದ್ದನ್ನು ವಿವರಿಸಿದರು.

ಅಸಮಾನತೆ ಹೋಗಲಾಡಿಸಲು ಈ ಯೋಜನೆ ಜಾರಿಗೆ ತಂದೆವು:ಜಾತಿ ಕಾರಣಕ್ಕಾಗಿ ಸಮಾಜದಲ್ಲಿ ಆರ್ಥಿಕ‌ ಅಸಮಾನತೆ ಸೃಷ್ಟಿ ಆಯಿತು. ಆದ್ದರಿಂದ ಎಲ್ಲರಿಗೂ ಆರ್ಥಿಕ ಶಕ್ತಿ ಕೊಡುವ ಕಾರಣಕ್ಕೆ 2013-18 ರ ವರೆಗೆ ಹಲವು ಕಾರ್ಯಕ್ರಮಗಳನ್ನು ಜಾರಿ ಮಾಡಿದೆವು. ಹಾಗೆಯೇ ಎರಡನೇ ಬಾರಿ ಮುಖ್ಯಮಂತ್ರಿ ಆದಾಗಲೂ ಗ್ಯಾರಂಟಿಗಳ ಮೂಲಕ ಆರ್ಥಿಕ ಶಕ್ತಿ ನೀಡಿದೆವು ಎಂದರು.

ನಮ್ಮ ಭಾಗ್ಯಗಳನ್ನು, ಗ್ಯಾರಂಟಿಗಳನ್ನು ವಿರೋಧಿಗಳು ಆಡಿಕೊಂಡರು. ಈಗಲೂ ಅಪ ಪ್ರಚಾರ ಮಾಡುತ್ತಿದ್ದಾರೆ. ಆದರೆ, ನಾನು ಹೋದಲ್ಲಿ ಬಂದಲ್ಲಿ ಗ್ಯಾರಂಟಿಗಳ ಫಲಾನುಭವಿಗಳು ಕಾಂಗ್ರೆಸ್ ಸರ್ಕಾರಕ್ಕೆ ಧನ್ಯತೆ ಅರ್ಪಿಸುತ್ತಿದ್ದಾರೆ ಎನ್ನುತ್ತಾ ಉಚಿತ ಯೋಜನೆಗಳ ಫಲಾನುಭವಿಗಳು ಗೃಹಲಕ್ಷ್ಮಿ ಹಣದಲ್ಲಿ ಮಾಡಿದ ಸಾಧನೆಗಳನ್ನು ವಿವರಿಸಿದರು.

ಸಿಎಂ ಸಿದ್ದರಾಮಯ್ಯ (ETV Bharat)

ನರೇಗಾ ಮತ್ತು ಅನ್ನಭಾಗ್ಯ ಯೋಜನೆಗಳು ಕೊರೊನಾ ಸಂದರ್ಭದಲ್ಲಿ ಬಡವರನ್ನು, ಕೆಳ ಮಧ್ಯಮ ವರ್ಗದವರನ್ನು ಬದುಕಿಸಿತು. ಹೀಗಾಗಿ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳು ಹೆಚ್ಚೆಚ್ಚು ಮಾತಾಡಬೇಕು ಎಂದರು. ಅನ್ನಭಾಗ್ಯದ ಮೇಲೆ "ಅನ್ನ" ಅಂತಲೇ ಸಿನಿಮಾ ಬಂದಿದೆ. ನಾನೂ ಸಿನಿಮಾ ನೋಡಿದೆ ಎಂದರು.

"ಗ್ಯಾರಂಟಿ ಯೋಜನೆಗಳು : ಬಡವರ ಸುರಕ್ಷತೆ ಮತ್ತು ಕಲ್ಯಾಣ" ಕೃತಿ ಬಿಡುಗಡೆ (ETV Bharat)

ಡಾ. ಡಿ ಶ್ರೀನಿವಾಸ ಮಣಗಳ್ಳಿ ಅವರ ಸಂಪಾದನಾ ಕೃತಿ ಬಿಡುಗಡೆಯ ಈ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಹೆಚ್. ಸಿ ಮಹದೇವಪ್ಪ, ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಹೆಚ್. ಎಂ ರೇವಣ್ಣ, ಉಪಾಧ್ಯಕ್ಷೆ ಪುಷ್ಪಾ ಅಮರನಾಥ್, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಪುರುಷೋತ್ತಮ ಬಿಳಿಮಲೆ, ವಿಧಾನ ಪರಿಷತ್ ಸದಸ್ಯರಾದ ಡಾ. ತಿಮ್ಮಯ್ಯ, ನಾಟಕಕಾರರಾದ ಕೆ. ವೈ ನಾರಾಯಣಸ್ವಾಮಿ, ರಾಜ್ಯ ಉನ್ನತ ಶಿಕ್ಷಣ ಅಕಾಡೆಮಿ ನಿರ್ದೇಶಕರಾದ ಪ್ರೊ. ಎಂ. ಚಂದ್ರ ಪೂಜಾರಿ, ಕುಲಪತಿಗಳಾದ ಪ್ರೊ. ಎನ್. ಕೆ ಲೋಕನಾಥ್, ಸಾಮಾಜಿಕ ಕಾರ್ಯಕರ್ತರಾದ ಅಹಿಂದ ಜವರಪ್ಪ ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು.

ಇದನ್ನೂ ಓದಿ :ಉದ್ಯಮಶೀಲತೆ, ಸುಸ್ಥಿರ ಅಭಿವೃದ್ಧಿಯ ವಾತಾವರಣ ಕಲ್ಪಿಸಲು ನಮ್ಮ ಸರ್ಕಾರ ಬದ್ಧ: ಸಿಎಂ ಸಿದ್ದರಾಮಯ್ಯ - CM Siddaramaiah

Last Updated : Sep 28, 2024, 6:25 PM IST

ABOUT THE AUTHOR

...view details