ಹುಬ್ಬಳ್ಳಿ:ಕಾಂಗ್ರೆಸ್ಸಿಗರು ಭಯೋತ್ಪಾದಕರ ಬೆಂಬಲಿಗರು ಎಂದು ಹೇಳಿರುವ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಯವರೇ ಭಯೋತ್ಪಾದಕರು. ಬಿಜೆಪಿಯವರು ಎಲ್ಲಾ ಸುಳ್ಳು ವಿಚಾರಗಳ ಮೇಲೆಯೇ ಪ್ರತಿಭಟನೆ ಮಾಡುವುದು. ಅವರು ಸಹ ಅನೇಕ ಕೇಸ್‌ಗಳನ್ನು ವಿತ್ ಡ್ರಾ ಮಾಡಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಟೀಕಿಸಿದರು.
ನಗರದ ವಿಮಾನ ನಿಲ್ದಾಣದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಳೇಹುಬ್ಬಳ್ಳಿ ಗಲಭೆ ಪ್ರಕರಣ ಸೇರಿದಂತೆ 42 ಪ್ರಕರಣಗಳನ್ನು ವಾಪಸ್ ಪಡೆದ ವಿಚಾರಕ್ಕೆ ಉತ್ತರಿಸಿ, ಇದಕ್ಕಾಗಿಯೇ ಸಚಿವ ಸಂಪುಟ ಉಪ ಸಮಿತಿ ರಚನೆ ಮಾಡಲಾಗಿತ್ತು. ಅದು ಸಲ್ಲಿಸಿದ ವರದಿ ಆಧರಿಸಿ ನಾವು 42 ಪ್ರಕರಣಗಳನ್ನು ವಾಪಸ್ ಪಡೆದುಕೊಂಡಿದ್ದೇವೆ ಎಂದರು.
ಈ ಎಲ್ಲಾ ಪ್ರಕರಣಗಳು ಕೋರ್ಟ್ಗೆ ಹೋಗುತ್ತವೆ. ಅಲ್ಲಿ ಅನುಮತಿ ಬಂದ ನಂತರ ವಾಪಸ್ ಪಡೆಯಲು ಸಾಧ್ಯ. ಇಲ್ಲದೇ ಹೋದಲ್ಲಿ ವಾಪಸ್ ಪಡೆಯಲು ಆಗುವುದಿಲ್ಲ. ಹಳೇಹುಬ್ಬಳ್ಳಿ ಗಲಭೆ ಕೇಸ್ ಜೊತೆಗೆ ಇದೇ ತರಹದ ವಿವಿಧ ಪ್ರಕರಣಗಳನ್ನು ಸಹ ವಾಪಸ್ ಪಡೆದಿದ್ದೇವೆ ಎಂದು ಸಿಎಂ ತಿಳಿಸಿದರು.