ಕರ್ನಾಟಕ

karnataka

ETV Bharat / state

ಚನ್ನಪಟ್ಟಣ ಉಪ ಚುನಾವಣೆ: ಮೈತ್ರಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ ಸಿಎಂ ಸಿದ್ದರಾಮಯ್ಯ

ಜೆಡಿಎಸ್ ಮತ್ತು ಬಿಜೆಪಿ ನಾಯಕರು ನನ್ನ ಮೇಲೆ ಸುಳ್ಳು ಆರೋಪ ಮಾಡಿ ನನ್ನ ಹೆಸರಿಗೆ ಮಸಿ ಬಳಿದು, ನನ್ನನ್ನು ಅಧಿಕಾರದಿಂದ ಕೆಳಗಿಳಸಬೇಕೆಂಬ ದುಷ್ಟ ಪ್ರಯತ್ನದಲ್ಲಿ ಯಶಸ್ಸು ಕಾಣಲು ಸಾಧ್ಯವಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಸಿಎಂ ಸಿದ್ದರಾಮಯ್ಯ, ಸಿ.ಪಿ ಯೋಗೇಶ್ವರ್​
ಸಿಎಂ ಸಿದ್ದರಾಮಯ್ಯ, ಸಿ.ಪಿ ಯೋಗೇಶ್ವರ್​ (ETV Bharat)

By ETV Bharat Karnataka Team

Published : Nov 6, 2024, 10:56 PM IST

ರಾಮನಗರ:ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆ ಬೇವೂರಿನಲ್ಲಿ ಆಯೋಜಿಸಿದ್ದ ಪ್ರಚಾರ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಮೈತ್ರಿ ನಾಯಕರ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ.

ಜೆಡಿಎಸ್ ಮತ್ತು ಬಿಜೆಪಿ ನಾಯಕರು ನನ್ನ ಮೇಲೆ ಸುಳ್ಳು ಆರೋಪ ಮಾಡಿ ನನ್ನ ಹೆಸರಿಗೆ ಮಸಿ ಬಳಿದು, ನನ್ನನ್ನು ಅಧಿಕಾರದಿಂದ ಕೆಳಗಿಳಸಬೇಕೆಂಬ ದುಷ್ಟ ಪ್ರಯತ್ನದಲ್ಲಿ ಯಶಸ್ಸು ಕಾಣಲು ಸಾಧ್ಯವಿಲ್ಲ. ಬಿಜೆಪಿ ಅವರು ಎಷ್ಟೇ ಆರೋಪ ಮಾಡಿದರು ಸತ್ಯ ನಮ್ಮ ಪರವಾಗಿ ಇದೆ. ನಾನು ಮಂತ್ರಿಯಾಗಿ 40 ವರ್ಷ ಆಯಿತು. 2 ಬಾರಿ ಮುಖ್ಯಮಂತ್ರಿ, 2 ಬಾರಿ ಉಪ ಮುಖ್ಯಮಂತ್ರಿ, 2 ಬಾರಿ ವಿರೋಧ ಪಕ್ಷದ ನಾಯಕನಾಗಿದ್ದೇನೆ. ಇಷ್ಟು ವರ್ಷ ಕಾಲ ನಾನು ಅಧಿಕಾರದಲ್ಲಿದ್ದರೂ ಕೂಡ ನನ್ನ ಮೇಲೆ ಯಾವುದೇ ಕಪ್ಪು ಚುಕ್ಕಿ ಇಲ್ಲ ಎಂದರು.

ಕಾಂಗ್ರೆಸ್​ ಪ್ರಚಾರ ಸಭೆ (ETV Bharat)

2018ರಲ್ಲಿ ಬಿಜೆಪಿಯವರು 600 ಭರವಸೆಗಳನ್ನು ಕೊಟ್ಟಿದ್ದರು. ಅವುಗಳಲ್ಲಿ ಶೇ.10 ರಷ್ಟು ಭರವಸೆಗಳನ್ನು ಕೂಡ ಈಡೇರಿಸಲಿಲ್ಲ. ನಾವು ಅಧಿಕಾರಕ್ಕೆ ಬಂದ ತಕ್ಷಣ ಮೊದಲ ಕಾಬಿನೆಟ್​ನಲ್ಲಿ ರೈತರ ಸಾಲ ಮನ್ನಾ ಮಾಡುತ್ತೇವೆ ಎಂದು ಪ್ರಣಾಳಿಕೆಯಲ್ಲಿ ಹೇಳಿದ್ದರು. ಜೆಡಿಎಸ್ ಮತ್ತು ಬಿಜೆಪಿಯವರು ಸುಳ್ಳು ಹೇಳುವುದರಲ್ಲಿ ಮತ್ತು ಜನರನ್ನು ಮರುಳು ಮಾಡುವುದರಲ್ಲಿ ನಿಸ್ಸಿಮರು ಎಂದು ಟೀಕಿಸಿದರು.

ಕಾಂಗ್ರೆಸ್​ ಪ್ರಚಾರ ಸಭೆ (ETV Bharat)

ನಿನ್ನೆ ದೇವೇಗೌಡ ಅವರು ಮೊಮ್ಮಗನ ಪರವಾಗಿ ಮತ ಕೇಳಲು ಬಂದಿದ್ದರು. ಈ ವೇಳೆ, ಸಿದ್ದರಾಮಯ್ಯ ಅವರಿಗೆ ಗರ್ವ, ಈ ಗರ್ವ ಮುರಿಬೇಕು ಎಂದರು. ಪಾಪ ವಯಸ್ಸಾಗಿದೆ ಅಂತ ನಾನು ಈ ಬಗ್ಗೆ ಮಾತನಾಡಲು ಹೋಗಲ್ಲ. ಯಾಕೆಂದರೆ ಅವರಿಗೆ ನೀವು ಉತ್ತರ ಕೊಡಬೇಕು. ನಾನು ಯಾವತ್ತೂ ಅಧಿಕಾರಕ್ಕೆ ಬಂದ ನಂತರ ಗರ್ವಪಟ್ಟಿಲ್ಲ. ಅಧಿಕಾರ ಇದ್ದಾಗಲೂ ಒಂದೇ ತರ ಇರ್ತೀನಿ. ಅಧಿಕಾರ ಹೋದಾಗಲೂ ಒಂದೇ ತರ ಇರ್ತೇನೆ. ಇವರ ರೀತಿಯಲ್ಲಿಅಳೋಕೆ ಹೋಗಲ್ಲ. ದೇವೇಗೌಡರು, ಅವರ ಮಗ ಕುಮಾರಸ್ವಾಮಿ ಆಯ್ತು. ಈಗ ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಅವರು ಕೂಡ ಅಳೋದನ್ನು ಕಲಿತು ಬಿಟ್ಟಿದ್ದಾರೆ ಎಂದು ಲೇವಡಿ ಮಾಡಿದರು.

ಹಾಸನದಲ್ಲಿ ಲೈಂಗಿಕ ಶೋಷಣೆಯಾಗಿದೆ ಅಲ್ವಾ ಆಗ ಅಳು ಬರ್ಲಿಲ್ಲವೇ ಇವರಿಗೆ. ಬಹಳ ಜನಕ್ಕೆ ಲೈಂಗಿಕ ಕಿರುಕುಳ, ಲೈಂಗಿಕ ಶೋಷಣೆ ಆಯ್ತಲ್ವಾ ದೇವೇಗೌಡ್ರು, ನಿಖಿಲ್ ಮತ್ತು ಕುಮಾರಸ್ವಾಮಿ ಹೋಗಿ ಅಳಲೇ ಇಲ್ಲ. ದಯಮಾಡಿ ಇವರನ್ನು ನಂಬಲು ಹೋಗಬೇಡಿ, ಇದು ನಾಟಕ. ಜನರಿಗೆ ಆರ್ಥಿಕವಾಗಿ, ಸಾಮಾಜಿಕವಾಗಿ ಶಕ್ತಿಯನ್ನು ತುಂಬಿ. ಅದನ್ನು ಬಿಟ್ಟು ಅಳೋದ್ರಿಂದ ಜನರ ಸಮಸ್ಯೆಗಳು ಬಗೆಹರಿಸಲು ಸಾಧ್ಯವಾಗಲ್ಲ. ಬಿಜೆಪಿಯವರ ಅಪಪ್ರಚಾರ, ಜೆಡಿಎಸ್ ನಾಯಕರ ಕಣ್ಣೀರಿಗೆ ಮರುಳಾಗದೇ ನಮ್ಮ ಅಭ್ಯರ್ಥಿ ಯೋಗೇಶ್ವರ್​ಗೆ ಮತನೀಡಿ ಎಂದು ಮನವಿ ಮಾಡಿದರು.

ಈ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಯೋಗೇಶ್ವರ್ ಗೆದ್ದರೆ ನಮ್ಮ​ ಶಾಸಕರ ಸಂಖ್ಯೆ 136 ರಿಂದ 137 ಆಗುತ್ತದೆ. ನಮ್ಮ ಸರ್ಕಾರದ ಬಲ ಹೆಚ್ಚಾಗುತ್ತದೆ. ನೀವು ಯೋಗೇಶ್ವರ್‌ ಅವರಿಗೆ ಮತ ನೀಡುವುದು ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಯಾವೆಲ್ಲಾ ಜನಪರ ಕಾರ್ಯಕ್ರಮಗಳನ್ನು ಮಾಡಿದ್ದೇವೆಯೋ ಅದಕ್ಕೆ ಶಕ್ತಿ ಕೊಟ್ಟ ಹಾಗೆ ಆಗುತ್ತದೆ. ನಾವು ಇನ್ನೂ ಮೂರುವರೆ ವರ್ಷ ಅಧಿಕಾರದಲ್ಲಿ ಇರುತ್ತೇವೆ ಎಂದರು.

ಇದನ್ನೂ ಓದಿ:ಬಿಜೆಪಿ ಅಭ್ಯರ್ಥಿ ಭರತ್​ ಬೊಮ್ಮಾಯಿ ಪರ ವಿಜಯೇಂದ್ರ ಪ್ರಚಾರ: ಗೆಲ್ಲಿಸಲು ಮತದಾರರಲ್ಲಿ ಮನವಿ

ABOUT THE AUTHOR

...view details