ಕರ್ನಾಟಕ

karnataka

ETV Bharat / state

'ದೇಶ ಅಭಿವೃದ್ಧಿ ಮಾಡುವಲ್ಲಿ ಮೋದಿ ಸಂಪೂರ್ಣ ವಿಫಲ': ಸಿಎಂ ಸಿದ್ದರಾಮಯ್ಯ - CM Siddaramaiah - CM SIDDARAMAIAH

ರಾಯಚೂರಿನಲ್ಲಿ ಪ್ರಜಾಧ್ವನಿ ಸಮಾವೇಶ ಭಾನುವಾರ ನಡೆದಿದ್ದು, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ

By ETV Bharat Karnataka Team

Published : Apr 29, 2024, 8:10 AM IST

Updated : Apr 29, 2024, 11:10 AM IST

ಸಿಎಂ ಸಿದ್ದರಾಮಯ್ಯ ಭಾಷಣ

ರಾಯಚೂರು: ಕಳೆದ 10 ವರ್ಷದಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶದ ಅಭಿವೃದ್ಧಿ ಮಾಡುವಲ್ಲಿ ಸಂಪೂರ್ಣ ವಿಫಲವಾಗಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮೋದಿ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ಜಿಲ್ಲೆಯ ಸಿಂಧನೂರು ಪಟ್ಟಣದ ಸರ್ಕಾರಿ ಜ್ಯೂನಿಯರ್​​ ಕಾಲೇಜು ಮೈದಾನದಲ್ಲಿ ಕೊಪ್ಪಳ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಪ್ರಜಾಧ್ವನಿ ಸಮಾವೇಶದಲ್ಲಿ ಭಾನುವಾರ ಭಾಗವಹಿಸಿ ಮಾತನಾಡಿದರು.

ಈ ವೇಳೆ "ಜನರಿಗೆ ನರೇಂದ್ರ ಮೋದಿ‌ ಹೇಳುವುದೆಲ್ಲ ಸುಳ್ಳು ಎನ್ನುವುದು ಗೊತ್ತಾಗಿದೆ. ಅವರು ಹಿಂದುಳಿದವರ ಮೀಸಲಾತಿಯನ್ನು ಕಿತ್ತು ಮುಸ್ಲಿಮರಿಗೆ ಕೊಡುತ್ತಾರೆ ಎಂದು ಹಸಿಸುಳ್ಳು ಹೇಳಿ ಪ್ರಚಾರ ಮಾಡುತ್ತಿದ್ದಾರೆ. ನಾವು ಯಾವತ್ತೂ ಮೀಸಲಾತಿ ಬದಲಾವಣೆ ಮಾಡುವ ಕೆಲಸ ಮಾಡಿಲ್ಲ. ಬಿಜೆಪಿಯು ಹಿಂದುಳಿದವರನ್ನು, ದಲಿತರನ್ನು, ಮುಸ್ಲಿಮರ ಮೇಲೆ ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ. ಮೋದಿ ಅವರಷ್ಟು ಸುಳ್ಳು ಹೇಳುವ ಪ್ರಧಾನಿಯನ್ನು ನನ್ನ ರಾಜಕೀಯ ಜೀವನದಲ್ಲಿ ನೋಡಿಲ್ಲ" ಎಂದು ಹರಿಹಾಯ್ದರು.

"ಬಿಜೆಪಿ-ಜೆಡಿಎಸ್​ ಮೈತ್ರಿ ಮಾಡಿಕೊಂಡು ಸ್ಪರ್ಧೆ ಮಾಡಿದ್ದಾರೆ. ಆದರೆ, ಕಾಂಗ್ರೆಸ್​​ ಏಕಾಂಗಿಯಾಗಿ ಸ್ಪರ್ಧೆ ಮಾಡುತ್ತಿದೆ. ನಾವು ಯಾವುದೇ ಕಾರಣ ಇಲ್ಲದೇ ಸಂಸದ ಕರಡಿ ಸಂಗಣ್ಣಗೆ ಟಿಕೆಟ್ ಕೊಡಲಿಲ್ಲ. ಅವರು ಸಾಕಷ್ಟು ಕೆಲಸ ಮಾಡಿದ್ದಾರೆ. ಬೇಸರಗೊಂಡು ಸಂಗಣ್ಣ ಕಾಂಗ್ರೆಸ್ ಸೇರಿದ್ದಾರೆ. ಇದರಿಂದ ಪಕ್ಷಕ್ಕೆ ಬಲ ಬಂದಿದೆ. ಜಿಲ್ಲೆಯ ಅಭ್ಯರ್ಥಿ ರಾಜಶೇಖರ್​ ಹಿಟ್ನಾಳ್ ಈ ಬಾರಿ ಗೆಲ್ಲುತ್ತಾರೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.

"ಕಳೆದ 10 ವರ್ಷಗಳಿಂದ ಮೋದಿ ಪ್ರಧಾನಿಯಾಗಿದ್ದಾರೆ, ಮತ್ತೆ ಮೂರನೇ ಬಾರಿ ಪ್ರಧಾನಿಯಾಗಲು ಜನರ ಆಶಿರ್ವಾದ ಕೇಳುತ್ತಿದ್ದಾರೆ. ಆದರೆ ಅವರಿಗೆ ಓಟು ಕೇಳುವ ನೈತಿಕತೆಯಿಲ್ಲ. ಭಾವನಾತ್ಮಕ ವಿಚಾರಗಳನ್ನು ಹೇಳಿ ಜನರ ವಿಶ್ವಾಸಗಳಿಸಲು ಸಾಧ್ಯವಿಲ್ಲ. ಅವರು ಆಕ್ಸಿಸ್ ಮೈ ಇಂಡಿಯಾ ಸರ್ವೆ ಮಾಡಿದ್ದಾರೆ. 200 ರಿಂದ 210 ಸೀಟ್​ ಗೆಲ್ಲುತ್ತೇವೆ ಎಂದು ಮೋದಿಗೆ, ಬಿಜೆಪಿಗೆ ಗೊತ್ತಾಗಿದೆ. ಹೀಗಾಗಿ ನೂರಕ್ಕೂ ಹೆಚ್ಚು ಜನರಿಗೆ ಟಿಕೆಟ್​ ಬದಲಾವಣೆ ಮಾಡಿದ್ದು, ರಾಜ್ಯದಲ್ಲಿ 12ಕ್ಕೂ ಹೆಚ್ಚು ಬದಲಾವಣೆ ಮಾಡಿದ್ದಾರೆ. ಅವರಿಗೆ ನಂಬಿಕೆ ಇದ್ದಿದ್ದರೆ ಇಷ್ಟೊಂದು ಸೀಟು ಬದಲಾವಣೆ ಯಾಕೆ ಮಾಡಬೇಕಿತ್ತು".

"ರಾಜ್ಯದಲ್ಲಿ ಇವತ್ತು ನಾಲ್ಕು ಕಡೆ ಮಾತನಾಡಿದ್ದಾರೆ. ಆದರೆ, ಅಲ್ಲಿ ನಾನು ಅಭಿವೃದ್ಧಿ ಮಾಡಿದ್ದೇನೆ ಎನ್ನುತ್ತಾರೆ. ಆದರೆ ಏನು ಅಭಿವೃದ್ಧಿ ಎಂದು ಹೇಳಲ್ಲ. ಕಪ್ಪು ಹಣ ನೂರು ದಿನದಲ್ಲಿ ತಂದು ಎಲ್ಲ ಕುಟುಂಬಗಳಿಗೆ, ಅಕೌಂಟ್‌ಗೆ 15 ಲಕ್ಷ ಹಾಕುತ್ತೇನೆ ಅಂದಿದ್ದರು. ನಿರುದ್ಯೋಗ ಸಮಸ್ಯೆ ಬಗೆಹರಿಸಲು ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇನೆ. 10 ವರ್ಷ ಆಯ್ತು ಈ ವರೆಗೆ 20 ಕೋಟಿ ಉದ್ಯೋಗ ಸೃಷ್ಟಿಸಬೇಕಿತ್ತು, ಅನೇಕ ಯುವಕರು ನಂಬಿದ್ದಾರೆ. ಆದರೆ 20 ಲಕ್ಷ ಉದ್ಯೋಗ ಸೃಷ್ಟಿಸಲು ಆಗಿಲ್ಲ. ಕೆಲಸ ಕೇಳಿದರೆ ಪಕೋಡಾ - ಬೋಂಡಾ ಮಾರಲು ಹೋಗಿ ಅಂತ ಹೇಳುತ್ತಾರೆ. ರೈತರ ಆದಾಯವನ್ನು ದುಪ್ಪಟ್ಟು ಮಾಡುತ್ತೇನೆ ಅಂದರು. ಪಾಪ ರೈತರು ಖಷಿಪಟ್ಟಿದ್ದರು. ಆದರೆ, ರೈತರ ಖರ್ಚು ಜಾಸ್ತಿ ಆಯಿತೆ ಹೊರತು ಆದಾಯ ಹೆಚ್ಚಾಗಲಿಲ್ಲ".

"ಕಿತ್ತೂರು ರಾಣಿ ಚೆನ್ನಮ್ಮ, ಮಹಾರಾಜ್ ಶಿವಾಜಿಗೆ ಕಾಂಗ್ರೆಸ್ ಅವಮಾನ ಮಾಡಿದೆ ಎಂದು ಮೋದಿ ಆರೋಪಿಸಿದ್ದಾರೆ. ನಾವೆಲ್ಲಿ ಅವಮಾನ ಮಾಡಿದ್ದೇವೆ ಹೇಳಿ. ಕಿತ್ತೂರು ರಾಣಿ ಚೆನ್ನಮ್ಮ ಜಯಂತ್ಯುತ್ಸವ ಮಾಡಿದ್ದು ಕಾಂಗ್ರೆಸ್. ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಮಾಡಿದ್ದು ನಮ್ಮ ಸರ್ಕಾರ. ಬಿಜೆಪಿಯವರು ಮಾಡಿಲ್ಲ ಎಂದು" ಸಿಎಂ ಲೇವಡಿ ಮಾಡಿದರು.

"ಪದೇ ಪದೆ ಜನರನ್ನು ದಾರಿ ತಪ್ಪಿಸಲು ಸಾಧ್ಯವಿಲ್ಲ. ನಮ್ಮ ಸಂವಿಧಾನ, ಸಾಮಾಜಿಕ ನ್ಯಾಯ ಬಗ್ಗೆ ಬಿಜೆಪಿಗೆ ಗೌರವವಿಲ್ಲ, ಮಹಿಳೆಯರಿಗೆ ಮೀಸಲಾತಿ, ಹಿಂದುಳಿದವರಿಗೆ, ಮುಸ್ಲಿಂರಿಗೆ ಮೀಸಲಾತಿ ಕೊಟ್ಟಿದ್ದು ಯಾರು?. ಸುಪ್ರೀಂ ಕೋರ್ಟ್​ನಲ್ಲಿ ಪ್ರಶ್ನೆ ಮಾಡಿದ್ದು ಆರ್​ಎಸ್​ಎಸ್​ನ ರಾಮಾ ಜೋಯಿಸ್​. ಸುಪ್ರೀಂ ಕೋರ್ಟ್​ ಅದೃಷ್ಟವಶಾತ್ ತಿರಸ್ಕಾರ ಮಾಡಿತು. ಅಲ್ಪಸಂಖ್ಯಾತರಿಗೆ ಮೀಸಲಾತಿ ಕೊಟ್ಟಿರುವುದನ್ನು ಸುಪ್ರೀಂ ಕೋರ್ಟ್ ಒಪ್ಪಿದೆ. ಇದು ನರೇಂದ್ರ ಮೋದಿಗೆ ಗೊತ್ತಿದೆಯಾ, ಗೊತ್ತಿದ್ದರೆ ಮಾತಾಡುತ್ತಿರಲಿಲ್ಲ. ಸಂವಿಧಾನ ಅವರಿಗೆ ಗೊತ್ತಿಲ್ಲ, ಇಲ್ಲಾ ಗೊತ್ತಿದ್ದರು ಸುಳ್ಳು ಹೇಳುತ್ತಿದ್ದಾರೆ ಎಂದು ವಗ್ದಾಳಿ ನಡೆಸಿದರು.

ಪ್ರಜಾಧ್ವನಿ ಸಮಾವೇಶದಲ್ಲಿ ಸಚಿವರಾದ ಸುರೇಶ ಭೈರತಿ, ಶಿವರಾಜ್ ತಂಗಡಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಇದನ್ನೂ ಓದಿ: ಗ್ಯಾರಂಟಿ ಯೋಜನೆ ನಿಲ್ಲಿಸಲ್ಲ, ಅದಕ್ಕಾಗಿ 1.24 ಲಕ್ಷ ಕೋಟಿ ಅನುದಾನ ಮೀಸಲಿಟ್ಟಿದ್ದೇವೆ: ಸಿಎಂ ಸಿದ್ದರಾಮಯ್ಯ - Lok Sabha Election 2024

Last Updated : Apr 29, 2024, 11:10 AM IST

ABOUT THE AUTHOR

...view details