ಬೆಂಗಳೂರು:ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಗೃಹ ಕಚೇರಿ ಕೃಷ್ಣದಲ್ಲಿ ಇಂದು ತೆರಿಗೆ ಸಂಗ್ರಹಣಾ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ನಡೆಯಿತು.
ವಿವಿಧ ಇಲಾಖೆಗಳ ಪ್ರಗತಿಯ ಮುಖ್ಯಾಂಶಗಳು:
ವಾಣಿಜ್ಯ ತೆರಿಗೆ ಇಲಾಖೆ:
- 2024 ನವೆಂಬರ್ ಅಂತ್ಯದವರೆಗಿನ ಒಟ್ಟು ವಾಣಿಜ್ಯ ತೆರಿಗೆ ಸಂಗ್ರಹಣೆ ಗುರಿ 56,317 ಕೋಟಿ ರೂ. ಇದ್ದು ಇದುವರೆಗೆ 53,103 ಕೋಟಿ ರೂ. ತೆರಿಗೆ ಸಂಗ್ರಹ ಮಾಡಲಾಗಿದ್ದು, ಶೇ.94 ರಷ್ಟು ಸಾಧಿಸಲಾಗಿದೆ. 2024-25ರ ಹಣಕಾಸು ಸಾಲಿನ ಒಟ್ಟು ವಾಣಿಜ್ಯ ತೆರಿಗೆ ಸಂಗ್ರಹ ಗುರಿ 84,475 ಕೋಟಿ ರೂ. ಇದೆ.
- ಮಲೆನಾಡು ಮತ್ತು ಮೈಸೂರು ವಿಭಾಗದಲ್ಲಿ ತೆರಿಗೆ ಸಂಗ್ರಹ ನಿಗದಿತ ಗುರಿಗಿಂತ ಕಡಿಮೆಯಿದೆ. ಎಲ್ಲಾ ವಿಭಾಗಗಳು ಮುಂದಿನ ನಾಲ್ಕು ತಿಂಗಳಲ್ಲಿ ಗುರಿಯನ್ನು ಕಡ್ಡಾಯವಾಗಿ ಸಾಧಿಸಬೇಕಿದೆ. 2023-24ರ ಒಟ್ಟು ತೆರಿಗೆ ಸಂಗ್ರಹಣೆ 70,575 ಕೋಟಿ ರೂ. ಇತ್ತು.
- ವಿಜಿಲೆನ್ಸ್ ಹೆಚ್ಚಿಸಿ, ತೆರಿಗೆ ಸೋರಿಕೆಯನ್ನು ಪತ್ತೆ ಹಚ್ಚಿ ತೆರಿಗೆ ಸಂಗ್ರಹವನ್ನು ಹೆಚ್ಚಿಸಬೇಕು. ಬೆಂಗಳೂರು ವಿಭಾಗದಲ್ಲಿ ಹೆಚ್ಚಿನ ನಿಗಾ ವಹಿಸಬೇಕು. ವಿಶೇಷ ಅಭಿಯಾನ ಕೈಗೊಂಡು ಮುಂದಿನ ನಾಲ್ಕು ತಿಂಗಳ ಅವಧಿಯಲ್ಲಿ ತೆರಿಗೆ ಸಂಗ್ರಹವನ್ನು ಹೆಚ್ಚಿಸಿ ಶೇ.100ರಷ್ಟು ಬಜೆಟ್ ಗುರಿ ಸಾಧಿಸಬೇಕಿದೆ.
- ಜಿಎಸ್ಟಿ ಸಂಗ್ರಹ ಹೆಚ್ಚಿಸಬೇಕು. ಲೆಕ್ಕಪರಿಶೋಧನೆ ಮತ್ತು ನ್ಯಾಯನಿರ್ಣಯದಿಂದ ಪ್ರಸ್ತುತ ಹಣಕಾಸು ಸಾಲಿನಲ್ಲಿ 4,671 ಕೋಟಿ ರೂ. ತೆರಿಗೆ ಸಂಗ್ರಹ ಗುರಿಯಿದ್ದು, ನವೆಂಬರ್ ಅಂತ್ಯದವರೆಗೆ 3,076.86 ಕೋಟಿ ರೂ. ತೆರಿಗೆ ಸಂಗ್ರಹಿಸಲಾಗಿದೆ.
- ಸರಕು ಮತ್ತು ಸೇವಾ ತೆರಿಗೆ ಕಾಯ್ದೆಯಡಿಯಲ್ಲಿ ಸ್ವೀಕರಿಸಿದ ಮನವಿಗಳನ್ನು ವಿಲೇವಾರಿ ಮಾಡಿ ತೆರಿಗೆ ಸಂಗ್ರಹ ಕೈಗೊಳ್ಳಬೇಕು.
- ರಾಜ್ಯ ಜಿಎಸ್ಟಿ ಸಂಗ್ರಹದಲ್ಲಿ ಶೇ.15ರ ಬೆಳವಣಿಗೆ ದರ ಸಾಧಿಸಿದೆ. ರಾಜ್ಯದಲ್ಲಿ ನವೆಂಬರ್ ಅಂತ್ಯದವರೆಗೆ 13,722 ಕೋಟಿ ರೂ. ಜಿಎಸ್ಟಿ ಸಂಗ್ರಹಿಸಲಾಗಿದ್ದು, ದೇಶದಲ್ಲೇ ಎರಡನೇ ಸ್ಥಾನದಲ್ಲಿದೆ.
ಅಬಕಾರಿ ಇಲಾಖೆ:
- 2024-25ನೇ ಸಾಲಿನಲ್ಲಿ ರೂ. 38,525 ಕೋಟಿ ಅಬಕಾರಿ ರಾಜಸ್ವ ಸಂಗ್ರಹ ಗುರಿಯಿದ್ದು, ನವೆಂಬರ್ ಅಂತ್ಯದವರೆಗೆ 23,600 ಕೋಟಿ ರೂ. ಸಂಗ್ರಹಿಸಲಾಗಿದ್ದು, ಶೇ.61.26 ಗುರಿ ಸಾಧಿಸಲಾಗಿದೆ.
- ಕಳೆದ ವರ್ಷಕ್ಕೆ ಹೋಲಿಸಿದರೆ ಈ ಅವಧಿಯಲ್ಲಿ 1432.23 ಕೋಟಿ ರೂ. ರಾಜಸ್ವ ಸಂಗ್ರಹದಲ್ಲಿ ಹೆಚ್ಚಳವಾಗಿದ್ದು, ಶೇ.6.46 ಬೆಳವಣಿಗೆ ದರ ಸಾಧಿಸಲಾಗಿದೆ.
- ರಾಜ್ಯದಲ್ಲಿ 2023-24ರಲ್ಲಿ 34,628 ಕೋಟಿ ರೂ. ಅಬಕಾರಿ ರಾಜಸ್ವ ಸಂಗ್ರಹಿಸಲಾಗಿತ್ತು. ರಾಜಸ್ವ ಸಂಗ್ರಹ ಹೆಚ್ಚಿಸಲು ಜಾಗೃತ ದಳ ಇನ್ನಷ್ಟು ಚುರುಕಾಗಿ ಕಾರ್ಯನಿರ್ವಹಿಸಬೇಕು. ಅಬಕಾರಿ ಇಲಾಖೆಯಲ್ಲಿ ಖಾಲಿಯಿರುವ ಗ್ರೂಪ್ ಸಿ ಹುದ್ದೆಗಳನ್ನು ತುಂಬಲು ಕ್ರಮ ವಹಿಸಲಾಗಿದೆ.