ಸಿಎಂ ಸಿದ್ದರಾಮಯ್ಯ ಮಾತನಾಡುತ್ತಿರುವುದು (ETV Bharat) ಮೈಸೂರು:ಮಗ ಯತೀಂದ್ರ ಸಿದ್ದರಾಮಯ್ಯಗೆ ವಿಧಾನ ಪರಿಷತ್ ಟಿಕೆಟ್ ನೀಡುವ ವಿಚಾರ ಹೈಕಮಾಂಡ್ಗೆ ಬಿಟ್ಟಿದ್ದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ನಗರದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ಯತೀಂದ್ರ ಸಿದ್ದರಾಮಯ್ಯಗೆ ವಿಧಾನ ಪರಿಷತ್ನಿಂದ ಟಿಕೆಟ್ ನೀಡುವ ವಿಚಾರ ಹೈಕಮಾಂಡ್ಗೆ ಬಿಟ್ಟಿದ್ದೇವೆ. ನಾನು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೋಲಾರದಿಂದ ಸ್ಪರ್ಧೆ ಮಾಡಲು ತೀರ್ಮಾನಿಸಿದ್ದೆ. ಆದರೆ, ಹೈಕಮಾಂಡ್ ಕೋಲಾರದಿಂದ ಬೇಡ, ವರುಣದಿಂದಲ್ಲೇ ಸ್ಪರ್ಧೆ ಮಾಡುವಂತೆ ಹೇಳಿತ್ತು. ಆಗ ಅಲ್ಲಿನ ಶಾಸಕರಾಗಿದ್ದ ಯತೀಂದ್ರಗೆ ಸೀಟು ಬಿಟ್ಟು ಕೊಡುವಂತೆ ಹೈಕಮಾಂಡ್ ಸೂಚಿಸಿತ್ತು. ಮುಂದೆ ಎಂಎಲ್ಸಿ ಮಾಡುವುದಾಗಿಯೂ ಹೇಳಿತ್ತು. ಈಗ ಆ ವಿಚಾರದಲ್ಲಿ ಹೈಕಮಾಂಡ್ ಏನು ಮಾಡುತ್ತದೆಯೋ ಗೊತ್ತಿಲ್ಲ. ಎಲ್ಲ ತೀರ್ಮಾನವನ್ನು ಹೈಕಮಾಂಡ್ಗೆ ಬಿಟ್ಟಿದ್ದೇವೆ ಎಂದರು.
ಪೆನ್ ಡ್ರೈವ್ ಪ್ರಕರಣ ಡೈವರ್ಟ್: ಪೆನ್ ಡ್ರೈವ್ ಪ್ರಕರಣದಲ್ಲಿ ಡಿ.ಕೆ.ಶಿವಕುಮಾರ್ ಅವರನ್ನು ವಿಚಾರಣೆಗೆ ಒಳಪಡಿಸಬೇಕೆಂಬ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿಎಂ, ಪ್ರಜ್ವಲ್ ರೇವಣ್ಣ ಮೇಲೆ ರೇಪ್, ಲೈಂಗಿಕ ಕಿರುಕುಳದಂತಹ ಗಂಭೀರ ಆರೋಪಗಳಿವೆ. ಈ ವಿಚಾರ ಡೈವರ್ಟ್ ಮಾಡಲು ಡಿ.ಕೆ.ಶಿವಕುಮಾರ್ ಹೆಸರು ಹೇಳುತ್ತಿದ್ದಾರೆ. ನಾವು ಕೂಡ ಪ್ರಜ್ವಲ್ ರೇವಣ್ಣ ಅವರನ್ನು ಆರೋಪಿಯೆಂದು ಹೇಳುತ್ತಿದ್ದೇವೆ ವಿನಃ ಆತ ಅಪರಾಧಿಯಲ್ಲ ಎಂದರು.
ವಿದೇಶದಿಂದ ವಾಪಸ್ ಆಗದಿದ್ದರೆ ಕುಟುಂಬದಿಂದ ಹೊರ ಹಾಕುವ ಬಗ್ಗೆ ದೇವೇಗೌಡರು ಮಾತನಾಡುತ್ತಿದ್ದಾರೆ. ದೇವೇಗೌಡರು ಹಾಗೂ ಅವರ ಮನೆಯವರಿಗೆ ಗೊತ್ತಿಲ್ಲದೇ ಪ್ರಜ್ವಲ್ ಮನೆಯಿಂದ ಹೋಗಿದ್ದಾನಾ ಎಂದು ಪ್ರಶ್ನಿಸಿದ ಸಿಎಂ, ಎಲ್ಲದರ ಬಗ್ಗೆ ಗೊತ್ತಿದೆ ಎಂದರು.
ಪ್ರಧಾನಿಯಿಂದ ಎರಡು ಪತ್ರಕ್ಕೂ ಉತ್ತರವಿಲ್ಲ: ಪೆನ್ ಡ್ರೈವ್ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಪ್ರಜ್ವಲ್ ಅವರನ್ನು ಕರೆ ತರುವ ಬಗ್ಗೆ ರಾಜ್ಯದಿಂದ ಪ್ರಧಾನಿಗೆ ನಾನು ಎರಡು ಪತ್ರ ಬರೆದಿದ್ದೇನೆ. ಈ ಪತ್ರಗಳಿಗೆ ಇಲ್ಲಿಯವರೆಗೆ ಯಾವುದೇ ಉತ್ತರ ಬಂದಿಲ್ಲ. ಒಬ್ಬ ರಾಜ್ಯದ ಮುಖ್ಯಮಂತ್ರಿ ಪತ್ರ ಬರೆದರೂ ಪ್ರಧಾನಿಯವರು ಅ ಪತ್ರಕ್ಕೆ ಉತ್ತರ ಕೊಟ್ಟಿಲ್ಲ. ಅವರು ಉತ್ತರ ಕೊಡಬೇಕಿತ್ತು. ಆದರೆ, ಉತ್ತರ ಕೊಡುವ ಕೆಲಸ ಮಾಡಿಲ್ಲ. ಈ ವಿಚಾರವನ್ನ ಪ್ರಹ್ಲಾದ್ ಜೋಶಿಗೆ ಹೇಳಬೇಕು ಎಂದು ಕುಟುಕಿದರು.
ಫಲಿತಾಂಶ ನಂತರ ಸ್ಥಳೀಯ ಸಂಸ್ಥೆಗಳ ಚುನಾವಣೆ:ಲೋಕಸಭಾ ಚುನಾವಣೆಯಾ ಫಲಿತಾಂಶದ ನಂತರ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಬಿಬಿಎಂಪಿ, ಚುನಾವಣೆ ದಿನಾಂಕಗಳನ್ನ ಘೋಷಣೆ ಮಾಡುತ್ತೇವೆ. ಈ ಬಗ್ಗೆ ಎಲ್ಲ ಕ್ರಮಗಳನ್ನ ಕೈಗೊಳ್ಳುವಂತೆ ತಿಳಿಸಲಾಗಿದೆ. ಆದರೂ, ಕ್ಷೇತ್ರ ಪುನರ್ ವಿಂಗಡನೆ ಆಗುತ್ತದೆ. ನಂತರ ಮೀಸಲಾತಿ ಘೋಷಣೆ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿಗಳು ಇದೇ ಸಂದರ್ಭದಲ್ಲಿ ತಿಳಿಸಿದರು.
ಮೈಲಾರಿ ಹೋಟೆಲ್ನಲ್ಲಿ ದೋಸೆ ಸವಿದ ಸಿಎಂ:ಇದಕ್ಕೂ ಮುನ್ನ ಸ್ನೇಹಿತರೊಂದಿಗೆ ಮೈಸೂರಿನ ಪ್ರಸಿದ್ಧ ಮೈಲಾರಿ ಹೋಟೆಲ್ಗೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅಲ್ಲಿ ಬಿಸಿಬಿಸಿ ದೋಸೆ ಸವಿದರು. ಇದೇ ವೇಳೆ, ತಮ್ಮ ಕಾಲೇಜು ದಿನಗಳ ಮೈಸೂರು ಜೀವನವನ್ನು ನೆನಪಿಸಿಕೊಂಡರು. ಅಲ್ಲದೇ ಮೈಸೂರು ಎಂದರೆ ನನಗೆ ಹುಟ್ಟೂರು ಅಲ್ಲ, ಬದುಕನ್ನು ಕೊಟ್ಟ ಊರು. ದೈಹಿಕವಾಗಿ ಮೈಸೂರುನಿಂದ ದೂರವಿದ್ದರು ಮೈಸೂರಿನ ನೆನೆಪು ನನ್ನ ಮನಸಿಗೆ ಸದಾ ಹತ್ತಿರದಲ್ಲೇ ಇರುತ್ತದೆ. ಈ ಮಣ್ಣಿನ ಋಣ ಬಹಳ ದೊಡ್ದದು. ಅದರೆದುರು ನಾವು ಸಣ್ಣವರು ಎಂದು ಮುಖ್ಯಮಂತ್ರಿಗಳು ತಮ್ಮ ಬಾಲ್ಯದ ದಿನಗಳನ್ನ ಇದೇ ಸಂದರ್ಭದಲ್ಲಿ ನೆನಪಿಸಿಕೊಂಡರು.
ಇದನ್ನೂ ಓದಿ:ಪ್ರಜ್ವಲ್ ರೇವಣ್ಣ ರಾಜತಾಂತ್ರಿಕ ಪಾಸ್ಪೋರ್ಟ್ ರದ್ದು ಮಾಡಲಿ: ಗೃಹಸಚಿವ ಜಿ.ಪರಮೇಶ್ವರ್ - G Parameshwar