ಬೆಳಗಾವಿ:''ಉತ್ತರ ಕರ್ನಾಟಕದ ಬಗ್ಗೆ ಚರ್ಚಿಸಲು ನಮ್ಮ ಸರ್ಕಾರ ಸಿದ್ಧವಿದೆ. ಅಲ್ಲದೇ ವಕ್ಫ್ ಚರ್ಚೆಗೂ ಉತ್ತರ ನೀಡಲು ನಾವು ಸಿದ್ಧರಿದ್ದೇವೆ'' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ''ಸೋಮವಾರ, ಮಂಗಳವಾರ, ಬುಧವಾರ ಉತ್ತರ ಕರ್ನಾಟಕ ಬಗ್ಗೆ ಚರ್ಚಿಸಲು ತೀರ್ಮಾನಿಸಲಾಗಿದೆ. ಪ್ರತಿಪಕ್ಷದವರು ಯಾವ ವಿಷಯದ ಬಗ್ಗೆ ಧ್ವನಿ ಎತ್ತುತ್ತಾರೋ, ಅದಕ್ಕೆ ಸರ್ಕಾರ ಉತ್ತರ ನೀಡಲಿದೆ'' ಎಂದು ತಿಳಿಸಿದರು.
ವಿಡಿಯೋ ರೆಕಾರ್ಡ್ ಇದೆ:ವಿಜಯೇಂದ್ರ ವಿರುದ್ಧ ಅನ್ವರ್ ಮಾಣಿಪ್ಪಾಡಿ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ''ಮಾಣಿಪ್ಪಾಡಿಯೇ ಸ್ವತಃ ಹೇಳಿಕೆ ನೀಡಿದ್ದಾರಲ್ಲ. ಅದು ಯಾವುದು ಸರಿ, ಯಾವುದು ತಪ್ಪು ಗೊತ್ತಾಗಬೇಕಲ್ಲವೇ? ಅದರ ಮೇಲೆಯೇ ನಾವು ಪ್ರತಿಕ್ರಿಯೆ ಕೊಟ್ಟಿದ್ದೇವೆ. ನಾವು ಪ್ರತಿಕ್ರಿಯಿಸಿದ್ದು ಸರಿ ಇದೆ. ತಮಗೆ 150 ಕೋಟಿ ಆಫರ್ ಮಾಡಿದ್ದಾರೆ ಅಂತ ಅವರೇ ಹೇಳಿದ್ದಾರೆ. ಅವರೇ ಪ್ರೆಸ್ಮೀಟ್ ಮಾಡಿ ಮಾತನಾಡಿರುವುದು ವಿಡಿಯೋ ರೆಕಾರ್ಡ್ನಲ್ಲಿ ಇದೆ. ಆಗ ಹೇಳಿದ್ದಾರೆ ಅಂತ ಹೇಳಿ, ಈಗ ಬಹಳ ವರ್ಷಗಳ ಬಳಿಕ ಅವರೇ ಇಲ್ಲ ಅಂತ ಹೇಳುತ್ತಿದ್ದಾರೆ. ಏನು ಮಾಡಬೇಕು ನೀವೇ ಹೇಳಿ'' ಎಂದು ಪ್ರಶ್ನಿಸಿದರು.
ಪಂಚಮಸಾಲಿ ಸಮಾಜದ ಕ್ಷಮೆ ಕೇಳಬೇಕು ಎಂಬ ಒತ್ತಾಯ ವಿಚಾರಕ್ಕೆ, ''ಪ್ರಲ್ಹಾದ್ ಜೋಶಿಯವರು ಯಾಕೆ ಪಂಚಮಸಾಲಿ ಮೀಸಲಾತಿ ಸಮಸ್ಯೆ ಇತ್ಯರ್ಥ ಮಾಡಲಿಲ್ಲ. ಯಾರು ಇತ್ಯರ್ಥ ಮಾಡಲಿಲ್ಲವೋ ಅವರು ಕ್ಷಮೆ ಕೇಳಬೇಕು'' ಎಂದು ಸಿಎಂ ಸಿದ್ದರಾಮಯ್ಯ ಒತ್ತಾಯಿಸಿದರು.