ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಮಹಿಳೆಯರ ಸುರಕ್ಷತೆ ಮತ್ತು ಕಾನೂನು ಹಾಗೂ ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿ ನಿರ್ವಹಿಸುವಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ದೆಹಲಿ ಮಾಜಿ ಸಿಎಂ, ಎಎಪಿ ನಾಯಕ ಅರವಿಂದ್ ಕೇಜ್ರಿವಾಲ್ ವಾಗ್ದಾಳಿ ನಡೆಸಿದರು.
ತ್ಯಾಗರಾಜ್ ಸ್ಟೇಡಿಯಂನಲ್ಲಿ ನಡೆದ ಮಹಿಳಾ ಆದಾಲತ್ನಲ್ಲಿ ಮಾತನಾಡಿದ ಅವರು, ಬಿಜೆಪಿ ಮಹಿಳೆಯರ ಸುರಕ್ಷತೆಯನ್ನು ಆದ್ಯತೆಯಾಗಿ ಪರಿಗಣಿಸಿಲ್ಲ. ಆದರೆ, ನಮ್ಮ ಸರ್ಕಾರ ಎಲ್ಲಾ ಭರವಸೆಗಳನ್ನು ಪೂರೈಸಿತು ಎಂದರು.
10 ವರ್ಷದ ಹಿಂದೆ ದೆಹಲಿಯಲ್ಲಿನ ಶಾಲೆ, ಆಸ್ಪತ್ರೆ ಮತ್ತು ನೀರಿನ ಪೂರೈಕೆ ಸುಧಾರಣೆ ಜವಾಬ್ದಾರಿಯನ್ನು ನೀವು ನನಗೆ ನೀಡಿದ್ರಿ. ನಾನು ನನ್ನ ಕೆಲಸವನ್ನು ಮಾಡಿದೆ. ಆದರೆ, ಬಿಜೆಪಿ ಮತ್ತು ಅಮಿತ್ ಶಾ ಭದ್ರತೆ ಜವಾಬ್ದಾರಿಯನ್ನು ನಿರ್ವಹಿಸುವಲ್ಲಿ ವಿಫಲವಾಗಿದ್ದಾರೆ ಎಂದು ಆರೋಪಿಸಿದರು.
ದೆಹಲಿ ಮಹಿಳೆಯರು ನನಗೆ ಮತಬ್ಯಾಂಕ್ ಅಲ್ಲ. ಅವರನ್ನು ನಾನು ನನ್ನ ಸಹೋದರಿಯರು ಮತ್ತು ತಾಯಿಯಂತೆ ನೋಡುತ್ತೇನೆ. ನನ್ನ ಅಧಿಕಾರದಲ್ಲಿ ಅವರ ಸುರಕ್ಷತೆಗಾಗಿ ಎಲ್ಲವನ್ನು ನಿರ್ವಹಿಸಿದ್ದೇನೆ. ಎಎಪಿ ಅಧಿಕಾರಕ್ಕೆ ಬರುವ ಮೊದಲು ನಗರದಲ್ಲಿ ಸಿಸಿಟಿವಿಗಳಿರಲಿಲ್ಲ. ನಾವು ಜನರ ಸುರಕ್ಷತೆಗಾಗಿ ಸಿಸಿಟಿವಿ ಮತ್ತು ಮಾರ್ಷಲ್ಗಳ ನೇಮಕ ಮಾಡಿದ್ದೇವೆ ಎಂದು ತಿಳಿಸಿದರು.
2012ರಂದು ದೆಹಲಿಯಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ದೇಶದಲ್ಲಿ ಅತ್ಯಾಚಾರ ವಿರೋಧಿ ಕಠಿಣ ನಿಯಮಕ್ಕೆ ಕಾರಣವಾದ ನಿರ್ಭಯಾ ಘಟನೆ 12 ವರ್ಷಾಚರಣೆ ಹಿನ್ನೆಲೆ ಎಎಪಿ ಮಹಿಳಾ ಆದಾಲತ್ ಅನ್ನು ನಡೆಸಿತು. ಈ ವೇಳೆ ನೂರಾರು ಮಹಿಳೆಯರು ನಿರ್ಭಯಾ ಅಮರ್ ರಹೇ ಮತ್ತು ಮಹಿಳಾ ಶಕ್ತಿ ಜಿಂದಾಬಾದ್ನಂತಹ ಘೋಷಣೆಗಳನ್ನು ಕೂಗಿದರು.
ಈ ಕಾರ್ಯಕ್ರಮದಲ್ಲಿ ಇಂಡಿಯಾ ಒಕ್ಕೂಟದ ನಾಯಕ ಹಾಗೂ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಕೂಡ ಭಾಗಿಯಾಗಿದ್ದರು. ಕಾರ್ಯಕ್ರಮದಲ್ಲಿ ಮಾತನಾಡಿದ ಯಾದವ್, ದೆಹಲಿಯಲ್ಲಿ ಕೇಂದ್ರ ಗೃಹ ಸಚಿವರು ಯಾವುದೇ ಕೆಲಸ ಮಾಡಿಲ್ಲ ಎಂದು ಟೀಕಿಸಿದರು.
ಮುಂದುವರೆದು ಮಾತನಾಡಿದ ಅವರು ಕೇಜ್ರಿವಾಲ್ ಧೈರ್ಯವನ್ನು ಹತ್ತಿಕ್ಕಲು ಸಾಧ್ಯವಿಲ್ಲ, ತಾಯಂದಿರುವ ಮತ್ತು ಸಹೋದರಿಯರಿಗೆ ಬೆಂಬಲವಾಗಿ ನಿಂತಿರುವ ಪಕ್ಷವನ್ನು ಯಾರೂ ಕೂಡ ಹತ್ತಿಕ್ಕಲು ಸಾಧ್ಯವಿಲ್ಲ. ಎಎಪಿ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದೆ ಎಂದರು.
ಕಾರ್ಯಕ್ರಮದಲ್ಲಿ ದೆಹಲಿ ಸಿಎಂ ಅತಿಶಿ ಮತ್ತ ಎಎಪಿ ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ ಸೇರಿದಂತೆ ಅನೇಕರು ಭಾಗಿಯಾಗಿದ್ದರು.
ಇದನ್ನೂ ಓದಿ: ಆದಿವಾಸಿ ವ್ಯಕ್ತಿಯನ್ನು ಕಾರಿನಲ್ಲಿ ಸಿಕ್ಕಿಸಿಕೊಂಡು 500 ಮೀಟರ್ ಎಳೆದೊಯ್ದ ಪ್ರವಾಸಿಗರು!