ಬೆಂಗಳೂರು: ಕನ್ನಡದ ಉತ್ತಮ ಸಾಹಿತಿಯನ್ನು ನಾವು ಕಳೆದುಕೊಂಡಿದ್ದೇವೆ. ಕಮಲಾ ಹಂಪನಾ ಅವರನ್ನು ನಾಲ್ಕೈದು ತಿಂಗಳ ಹಿಂದೆ ಭೇಟಿಯಾಗಿದ್ದೆ. ಮಹಿಳಾ ಸಾಹಿತಿಗಳ ಪೈಕಿ ಅತಿ ಹೆಚ್ಚು ಅಂದರೆ 48 ಕೃತಿಗಳನ್ನು ಬರೆದಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ರವೀಂದ್ರ ಕಲಾ ಕ್ಷೇತ್ರದಲ್ಲಿಂದು ಹಿರಿಯ ಸಾಹಿತಿ ಡಾ. ಕಮಲಾ ಹಂಪನಾ ಅವರ ಪಾರ್ಥಿವ ಶರೀರದ ದರ್ಶನ ಪಡೆದ ನಂತರ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.
ಕಮಲಾ ಹಂಪನಾ ಬೋಧಕರಾಗಿ, ಸಂಶೋಧಕರಾಗಿ, ಸಾಹಿತಿಯಾಗಿ ಕನ್ನಡ ಭಾಷೆಗಾಗಿ ಬಹಳ ಶ್ರಮಿಸಿದ್ದಾರೆ. ಪ್ರಾಕೃತ ಭಾಷೆಯ ಕುರಿತು ಸಂಶೋಧನೆ ಮಾಡಿದ್ದಾರೆ. ಬೆಂಗಳೂರು, ಮೈಸೂರು, ವಿಜಯನಗರದಲ್ಲಿ ಕನ್ನಡ ಬೋಧಕರಾಗಿ ಕೆಲಸ ಮಾಡಿದ್ದಾರೆ. ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ. ಹಂಪಾ ನಾಗರಾಜಯ್ಯ ಮತ್ತು ಅವರ ಕುಟುಂಬದವರಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸಿದರು.
ಅಂತಿಮ ದರ್ಶನ ಪಡೆದ ಡಿಸಿಎಂ:ಇದೇ ವೇಳೆ ಅಂತಿಮ ದರ್ಶನ ಪಡೆದ ಡಿಸಿಎಂ ಡಿ.ಕೆ.ಶಿವಕುಮಾರ್, ಹಿರಿಯ ಸಾಹಿತಿ ಕಮಲಾ ಹಂಪನಾ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಕಮಲಾ ಹಂಪನಾ ಅವರ ನಿಧನದ ಸುದ್ದಿ ಕೇಳಿ ನೋವಾಗಿದೆ. ಸುದೀರ್ಘ 6 ದಶಕಗಳ ಕಾಲ ಲೇಖನ, ಭಾಷಣ, ಅಧ್ಯಯನ ಮತ್ತು ಅಧ್ಯಾಪನ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ಇವರು ನೀಡಿರುವ ಕೊಡುಗೆ ಅಪಾರ ಎಂದು ಸ್ಮರಿಸಿದರು.