ದಾವಣಗೆರೆ:ಕೇಂದ್ರ ಸಚಿವ ಹೆಚ್. ಡಿ. ಕುಮಾರಸ್ವಾಮಿ ಅವರು ರಾಜ್ಯ ಸರ್ಕಾರದ ವಿರುದ್ಧ ಮಾಡಿರುವ ಶೇ.60 ಕಮಿಷನ್ ಆರೋಪ ಸಾಬೀತು ಮಾಡಲಿ, ದಾಖಲೆಗಳು ಇದ್ದರೆ ಕೊಡಲಿ ಎಂದು ಸಿಎಂ ಸಿದ್ದರಾಮಯ್ಯ ಸವಾಲು ಹಾಕಿದರು.
ವಿಧಾನಸೌಧದಲ್ಲಿ ಶೇ.60 ಕಮಿಷನ್ ದಂಧೆ ನಡೆಯುತ್ತಿದೆ ಎಂಬ ಹೆಚ್ ಡಿ ಕುಮಾರಸ್ವಾಮಿ ಆರೋಪಕ್ಕೆ ಸಿಎಂ ಸಿದ್ದರಾಮಯ್ಯ ಅವರು ನಗರದಲ್ಲಿಂದು ಪ್ರತಿಕ್ರಿಯಿಸಿದರು. ದಾಖಲೆಗಳು ಇದ್ದರೆ ಕೊಡಲಿ, ಕುಮಾರಸ್ವಾಮಿಯವರು ಸಾಬೀತು ಮಾಡಲಿ. ವಿರೋಧ ಪಕ್ಷಗಳು ಕೇವಲ ಆರೋಪ ಮಾಡುವುದಲ್ಲ. ಅದಕ್ಕೆ ಪೂರಕ ದಾಖಲೆ ಇಟ್ಟುಕೊಂಡು ಆರೋಪ ಮಾಡಬೇಕು ಎಂದರು.
ಐದು ನಿಗಮಗಳು ತೊಂದರೆಯಲ್ಲಿರುವುದರಿಂದ ದರ ಏರಿಕೆ :ಸರ್ಕಾರ ಶೇ.15ರಷ್ಟು ಬಸ್ ದರ ಏರಿಕೆ ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ , ಎಲ್ಲಾ ಸರ್ಕಾರಗಳ ಅವಧಿಯಲ್ಲೂ ಬಸ್ ದರ ಜಾಸ್ತಿ ಆಗಿದೆ. ನೌಕರರ ಸಂಬಳ, ಸಾರಿಗೆ ವೆಚ್ಚ, ಬಸ್ ಖರೀದಿ ಜಾಸ್ತಿಯಾಗಿದೆ. ಹಣದುಬ್ಬರ ಕೂಡ ಇದೆ. 2000ನೇ ವರ್ಷದಲ್ಲಿ ಬಸ್ ದರ ಏರಿಕೆಯಾಗಿ ಐದು ವರ್ಷವಾಗಿದೆ. ಜೊತೆಗೆ ಐದು ನಿಗಮಗಳು ತೊಂದರೆಯಲ್ಲಿವೆ ಅಂತಾ ಹೇಳಿದ್ದರು. ಆದ್ದರಿಂದ ಬಹಳ ದಿನಗಳಿಂದ ಬೆಲೆ ಏರಿಕೆ ಬೇಡಿಕೆ ಇತ್ತು. ಅದಕ್ಕೆ ದರ ಏರಿಕೆ ಮಾಡಿದ್ದೇವೆ. 2005ರಲ್ಲಿ ಬೆಲೆ ಏರಿಕೆ ಆಗಿತ್ತು. ಕುಮಾರಸ್ವಾಮಿ ಸಿಎಂ ಆಗಿದ್ದಾಗ, ಬಿಜೆಪಿ ಸರ್ಕಾರದ ಅವಧಿಯಲ್ಲೂ ಬೆಲೆ ಏರಿಕೆ ಆಗಿದೆ. ಕೇಂದ್ರ ಸರ್ಕಾರ ರೈಲ್ವೆ ದರ ಹೆಚ್ಚಿಸಿಲ್ವಾ ಎಂದು ಪ್ರಶ್ನಿಸಿದರು.
ಕೆಪಿಸಿಸಿ ಅಧ್ಯಕ್ಷರ ಆಯ್ಕೆ ಬಗ್ಗೆ ಪ್ರತಿಕ್ರಿಯಿಸಿ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಹೈಕಮಾಂಡ್ ನಿರ್ಧಾರ ಮಾಡುತ್ತೆ ಎಂದರು. ಸಚಿವ ಸಂಪುಟ ಸರ್ಜರಿ ಮಾಡಲ್ಲ, ಮಾಜಿ ಸಚಿವ ನಾಗೇಂದ್ರ ಸಚಿವ ಸ್ಥಾನ ಖಾಲಿ ಇದ್ದು, ಹೈಕಮಾಂಡ್ ಜೊತೆ ಮಾತನಾಡಿ ಭರ್ತಿ ಮಾಡುತ್ತೇನೆ ಎಂದು ಸಿಎಂ ಹೇಳಿದರು.