ಬೆಂಗಳೂರು:ಮುಡಾ ಪ್ರಕರಣ ಸಂಬಂಧ ರಾಜ್ಯಪಾಲರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಾರೆ. ಇದು ರಾಜ್ಯ ರಾಜಕೀಯದಲ್ಲಿ ದೊಡ್ಡ ತಲ್ಲಣ ಮೂಡಿಸಿದೆ. ಸಿಎಂ ಸಿದ್ದರಾಮಯ್ಯ ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದು, ರಾಜಕೀಯ ಪಿತೂರಿ ಮೂಲಕ ಸರ್ಕಾರದ ಪತನದ ಯತ್ನದಲ್ಲಿದೆ ಎಂದು ಆರೋಪಿಸಿದ್ದಾರೆ.
ಇತ್ತ ರಾಜ್ಯಪಾಲರ ತಾರತಮ್ಯದ ಬಗ್ಗೆ ಸರ್ಕಾರ ಕಟು ಟೀಕೆ ಮಾಡಿದೆ. ಬಿಜೆಪಿ, ಜೆಡಿಎಸ್ ದೋಸ್ತಿ ಪಕ್ಷಗಳ ನಾಯಕರ ಮೇಲೆ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿ ರಾಜಭವನಕ್ಕೆ ಮನವಿ ಮಾಡಿದ್ದರೂ ಕ್ರಮ ಕೈಗೊಳ್ಳದ ರಾಜ್ಯಪಾಲರು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮುಡಾ ಪ್ರಕರಣದಲ್ಲಿ ತರಾತುರಿ ನಿರ್ಧಾರ ಮಾಡಿದ್ದಾರೆ ಎಂದು ಕಾಂಗ್ರೆಸ್ ಗಂಭೀರ ಆರೋಪ ಮಾಡಿದೆ.
ಬಿಜೆಪಿ-ಜೆಡಿಎಸ್ ನಾಯಕರುಗಳು ಅಕ್ರಮವೆಸಗಿದ ಆರೋಪ ಪ್ರಕರಣಗಳಲ್ಲಿ ಬಿಜೆಪಿ, ಜೆಡಿಎಸ್ ನಾಯಕರ ವಿರುದ್ಧ ಪ್ರಾಸಿಕ್ಯೂಷನ್ ಅನುಮತಿಗಾಗಿ ಕೋರಿದ್ದರೂ ಅದರ ಬಗ್ಗೆ ಮೌನವಹಿಸಿರುವ ರಾಜ್ಯಪಾಲರು ಪಕ್ಷಪಾತ ಮಾಡಿದ್ದಾರೆ. ಬಿಜೆಪಿ, ಕೇಂದ್ರ ಸರ್ಕಾರದ ಮಾತು ಕೇಳಿ ಮುಡಾ ಪ್ರಕರಣದಲ್ಲಿ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷರಾಗಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ.
ಇದರ ಜೊತೆಗೆ, ಬಿಜೆಪಿಯ ಮುಖಂಡರು ಮಾತ್ತು ಮಾಜಿ ಮುಖ್ಯಮಂತ್ರಿಯಾಗಿರುವ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿ ಸಲ್ಲಿಸಲಾದ ಅರ್ಜಿಗಳನ್ನು ಪರಿಗಣಿಸಿ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಏಕೆ ಸಮ್ಮತಿ ನೀಡಿಲ್ಲವೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ. ಅಷ್ಟಕ್ಕೂ ಬಿಜೆಪಿ, ಜೆಡಿಎಸ್ ನಾಯಕರ ಮೇಲಿನ ಆರೋಪ ಏನು? ಎಂಬ ವರದಿ ಇಲ್ಲಿದೆ.
ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಪ್ರಕರಣ: ಕೇಂದ್ರ ಸಚಿವ ಹಾಗೂ ಜೆಡಿಎಸ್ ಮುಖಂಡ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಅಕ್ರಮ ಗಣಿಗಾರಿಕೆ ಸಂಬಂಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿ ರಾಜ್ಯಪಾಲರಿಗೆ ಮನವಿ ಮಾಡಿದ್ದರೂ ಕ್ರಮ ಕೈಗೊಂಡಿಲ್ಲ ಎಂಬುದು ಸಿಎಂ ಸಿದ್ದರಾಮಯ್ಯ ಆರೋಪವಾಗಿದೆ. ಅಷ್ಟಕ್ಕೂ ಶ್ರೀ ಸಾಯಿ ವೆಂಕಟೇಶ್ವರ ಮಿನರಲ್ಸ್ ಎಂಬ ಬೋಗಸ್ ಸಂಸ್ಥೆಗೆ ಹೆಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ 6.10.2007ರಂದು ಬಳ್ಳಾರಿಯ ಸಂಡೂರು ತಾಲೂಕಿನ ಭಾವಿಹಳ್ಳಿ, ತಿಮ್ಮಪ್ಪಗುಡಿಯಲ್ಲಿ 550 ಎಕರೆ ಜಾಗವನ್ನು ಗಣಿಗಾರಿಕೆಗೆ ಅಕ್ರಮವಾಗಿ ಗುತ್ತಿಗೆಗೆ ನೀಡಿರುವ ಆರೋಪ ಇದೆ. ಗುತ್ತಿಗೆ ನೀಡುವಾಗ ನಿಯಮ 59 (2)ನ್ನು ಉಲ್ಲಂಘಿಸಿ ಕುಮಾರಸ್ವಾಮಿಯವರು ಮಂಜೂರು ಮಾಡಿದ್ದರು ಎಂದು ಹೇಳಲಾಗಿತ್ತು.
ಈ ಅಕ್ರಮದ ಕುರಿತಾಗಿ ಎಫ್‌ಐಆರ್ ದಾಖಲಾಗಿ ಲೋಕಾಯುಕ್ತದ ಎಸ್‌ಐಟಿಯು ತನಿಖೆಯನ್ನು ಕೈಗೆತ್ತಿಕೊಂಡಿತ್ತು. ತನಿಖೆಯನ್ನು ಮಾಡಿದ ನಂತರ ಹೆಚ್.ಡಿ.ಕುಮಾರಸ್ವಾಮಿಯವರು ತಪ್ಪೆಸಗಿದ್ದಾರೆ ಎಂದು ಲೋಕಾಯುಕ್ತಕ್ಕೆ ಮನವರಿಕೆಯಾಗಿ ಚಾರ್ಚ್‌ಶೀಟ್ ಹಾಕಲಾಗಿದೆ. ಬಳಿಕ ಲೋಕಾಯುಕ್ತ ಎಡಿಜಿಪಿಯವರು ರಾಜ್ಯಪಾಲರ ಬಳಿ ಪ್ರಾಸಿಕ್ಯೂಷನ್‌ಗೆ ಅನುಮತಿ ಕೇಳಿದ್ದಾರೆ ಎನ್ನಲಾಗಿದೆ. 21/11/2023ರಂದು ಲೋಕಾಯುಕ್ತದ ಎಡಿಜಿಪಿ ಚಂದ್ರಶೇಖರ್ ಖುದ್ದಾಗಿ ಪತ್ರವನ್ನು ರಾಜ್ಯಪಾಲರಿಗೆ ಬರೆದು ಅನುಮತಿ ನೀಡಲು ಕೋರಿದ್ದರು. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಈ ಬಗ್ಗೆ ತೀರ್ಮಾನ ಕೈಗೊಂಡಿಲ್ಲ ಎಂಬುದು ಕಾಂಗ್ರೆಸ್ ಆರೋಪ.