ಮಂಡ್ಯ :ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳಂತೆ ನಾವು ಕೊಟ್ಟ ಮಾತಿಗೆ ತಪ್ಪುವುದಿಲ್ಲ. ನುಡಿದಂತೆ ನಡೆದಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಜಿಲ್ಲೆಯ ಮಳವಳ್ಳಿಯಲ್ಲಿ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶ ಹಾಗೂ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಚುನಾವಣೆ ಪೂರ್ವದಲ್ಲಿ ನಾವು ಐದು ಘೋಷಣೆಗಳನ್ನು ಮಾಡಿದ್ದೆವು. ಇವತ್ತು ಬಹಳ ಹೆಮ್ಮೆಯಿಂದ ಹೇಳುತ್ತೇನೆ, ನಾವು ಅಧಿಕಾರಕ್ಕೆ ಬಂದ 8 ತಿಂಗಳಿನಲ್ಲಿ ನುಡಿದಂತೆ ನಡೆದಿದ್ದೇವೆ. ಐದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡುವ ಮೂಲಕ ಕೊಟ್ಟ ಭರವಸೆಗಳನ್ನು ಈಡೇರಿಸಿದ್ದೇವೆ. ಚುನಾವಣೆ ಸಂದರ್ಭದಲ್ಲಿ ಯಾವ ಮಾತು ಕೊಡುತ್ತೇವೆಯೋ ಅದನ್ನು ನೂರಕ್ಕೆ ನೂರು ಈಡೇರಿಸುತ್ತೇವೆ ಎಂದು ಸಿಎಂ ಹೇಳಿದರು.
ಹನಿ ನೀರಾವರಿ ಯೋಜನೆ ಮಂಜೂರು ಮಾಡಿ, ಅದನ್ನು ನೀವೆ ಪೂರ್ಣಗೊಳಿಸಬೇಕು. ಉದ್ಘಾಟನೆಗೆ ನಿಮ್ಮನ್ನೇ ಕರೆಯುತ್ತೇವೆ ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅವರು ಹೇಳಿದ್ದಾರೆ. ಈ ರೀತಿ ಹೇಳಿರುವುದು ಬಹಳ ಸಂತೋಷ. ನಾನೇ ಬಂದು ಆ ಯೋಜನೆಯನ್ನು ಉದ್ಘಾಟನೆ ಮಾಡುತ್ತೇನೆ ಎಂದು ಸಿಎಂ ಭರವಸೆ ನೀಡಿದರು.
ಶಾಸಕ ಪಿ.ಎಂ ನರೇಂದ್ರ ಸ್ವಾಮಿ ಮಾತನಾಡಿ, ವಿರೋಧ ಪಕ್ಷಗಳು ದೇಶ ಆಳುತ್ತಿವೆ. ಸುಳ್ಳಿನ ಸಾಮ್ರಾಜ್ಯ ಪತಿಗಳಾಗಿದ್ದಾರೆ. ಆಡಳಿತಕ್ಕೆ ಬಂದ 7 ತಿಂಗಳಲ್ಲಿ ಕೊಟ್ಟ ಮಾತನ್ನು ಸಿದ್ದರಾಮಯ್ಯ ಸರ್ಕಾರ ಉಳಿಸಿಕೊಂಡಿದೆ. 5 ಗ್ಯಾರಂಟಿಗಳನ್ನು ಜಾರಿಗೆ ತಂದ ದೇಶದ ಮೊದಲ ಸಿಎಂ ಎಂಬ ಹೆಗ್ಗಳಿಕೆಗೆ ಸಿದ್ದರಾಮಯ್ಯ ಪಾತ್ರರಾಗಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಗೆಲ್ಲುತ್ತೇವೆ ಎಂದು ಬಿಜೆಪಿ ಬೀಗುತ್ತಿದೆ, ಅದು ಸಾಧ್ಯವಿಲ್ಲ. ಮಂಡ್ಯಕ್ಕೆ ಸಿಎಂ ಸಿದ್ದರಾಮಯ್ಯ ಸಾಕಷ್ಟು ಕೊಡುಗೆ ಕೊಟ್ಟಿದ್ದಾರೆ. ನಾಲ್ವಡಿ ಕೃಷ್ಣರಾಜರ ನಂತರ ಮಂಡ್ಯಕ್ಕೆ ಹೊಸ ಸಕ್ಕರೆ ಕಾರ್ಖಾನೆ ಕೊಟ್ಟಿದ್ದಾರೆ. 5 ವರ್ಷಗಳ ಆಡಳಿತದಲ್ಲಿ ಒಂದೇ ಒಂದು ಮನೆ ಘೋಷಣೆ ಮಾಡದ ಸರ್ಕಾರಗಳನ್ನು ನೋಡಿದ್ದೇವೆ. ಆದರೆ ನಮ್ಮ ಸರ್ಕಾರದ ಪ್ರಥಮ ಬಜೆಟ್‌ನಲ್ಲಿ 3 ಲಕ್ಷ ಮನೆ ಕೊಟ್ಟಿದ್ದಾರೆ.
ಸಚಿವ ಚಲುವರಾಯಸ್ವಾಮಿ ಪ್ರತಿಕ್ರಿಯೆ :ಇತಿಹಾಸದಲ್ಲಿ ಯಶಸ್ವಿಯಾಗಿ ಸಾರ್ವಜನಿಕ ಕಾರ್ಯಕ್ರಮ ಕೊಟ್ಟಿರುವ ಸರ್ಕಾರ ನಮ್ಮುದು. ನಮ್ಮ ಗ್ಯಾರಂಟಿಯನ್ನೇ ಅವರ ಗ್ಯಾರಂಟಿಯಾಗಿ ಪರಿವರ್ತನೆ ಮಾಡಲು ಪ್ರಧಾನಿ ನರೇಂದ್ರ ಮೋದಿ ಹೊರಟಿದ್ದಾರೆ. ಅವರ ಆಡಳಿತದಲ್ಲಿ ಸಿದ್ದರಾಮಯ್ಯ ಸರಿಸಮನಾಗಿ ಪೈಪೋಟಿ ಕೊಡಬಲ್ಲ ನಾಯಕರಾಗಿದ್ದಾರೆ. ಹಲವು ರಾಜ್ಯಗಳು ಸಿದ್ದರಾಮಯ್ಯ ಆಡಳಿತ ಪ್ರಶಂಸೆ ವ್ಯಕ್ತಪಡಿಸಿವೆ. ಸಾರ್ವಜನಿಕ ಬಜೆಟ್ ಧಿಕ್ಕರಿಸಿದ ಏಕೈಕ ಪಕ್ಷ ಬಿಜೆಪಿ. ಜನರ ಒಳಿತು ಅವರಿಗೆ ಬೇಕಿಲ್ಲ, ನಮ್ಮನ್ನ ವಿರೋಧಿಸುವುದಷ್ಟೇ ಕೆಲಸವಾಗಿದೆ. ಜನರ ವಿಶ್ವಾಸ ಕಳೆದುಕೊಂಡು ಸರ್ಕಾರ ಕಳೆದಕೊಂಡರು ಎಂದು ಸಚಿವ ಚಲುವರಾಯಸ್ವಾಮಿ ಬಿಜೆಪಿ ವಿರುದ್ಧ ಕಿಡಿಕಾರಿದರು.
ಸಿದ್ದರಾಮಯ್ಯರನ್ನು ಮಂಡ್ಯ ವಿರೋಧಿ ಅಂತಾರೆ. ಸಿದ್ದರಾಮಯ್ಯಗೆ ಬೀದರ್, ಮಂಡ್ಯ, ಮೈಸೂರು ಎಂಬ ಭೇದ-ಭಾವ ಗೊತ್ತಿಲ್ಲ. ರಾಜ್ಯದ 7 ಕೋಟಿ ಜನರ ಮುಖದಲ್ಲಿ ನಗುವನ್ನು ಸಿದ್ದರಾಮಯ್ಯ ನೋಡಿದ್ದಾರೆ. ಚುನಾವಣೆ ವೇಳೆ ಡಿಕೆಶಿ-ಸಿದ್ದು ಕಿತ್ತಾಡುತ್ತಾರೆ ಎಂದ್ರು. ಸಿಎಂ ಸ್ಥಾನಕ್ಕಾಗಿ ಸಿದ್ದರಾಮಯ್ಯ- ಡಿಸಿಎಂ ಡಿ.ಕೆ ಶಿವಕುಮಾರ್ ಕಿತ್ತಾಡುತ್ತಾರೆ ಎಂದಿದ್ದರು. ಅದ್ಯಾವುದು ಆಗಲಿಲ್ಲ, ಒಗ್ಗಟ್ಟಿನಿಂದ ಸರ್ಕಾರ ನಡೆಸುತ್ತಿದ್ದಾರೆ. ಮುಂದಿನ ಚುನಾವಣೆಯನ್ನು ಸಹ ಜೊತೆಯಾಗೆ ಮಾಡುತ್ತಾರೆ ಎಂದು ಚಲುವರಾಯಸ್ವಾಮಿ ತಿಳಿಸಿದರು.
ಇದನ್ನೂ ಓದಿ :ವಾಕ್ ಸ್ವಾತಂತ್ರ್ಯ ದುರ್ಬಳಕೆಯಲ್ಲಿ ಬಿಜೆಪಿ ನಂಬರ್ ಒನ್: ಸಂತೋಷ್ ಲಾಡ್ ಕಿಡಿ