ಕರ್ನಾಟಕ

karnataka

ETV Bharat / state

ಬೆಂಗಳೂರಿಗೆ ನಿತ್ಯ 500 ಮಿಲಿಯನ್ ಲೀಟರ್ ನೀರಿನ ಕೊರತೆ: ಸಿಎಂ ಸಿದ್ದರಾಮಯ್ಯ - Water complaint

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಕುರಿತು ಅಧಿಕಾರಿಗಳ ಜೊತೆ ಸಿಎಂ ಸಿದ್ದರಾಮಯ್ಯ ಸಭೆ ನಡೆಸಿ ಹಲವು ಸೂಚನೆಗಳನ್ನು ನೀಡಿದ್ದಾರೆ.

ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ

By ETV Bharat Karnataka Team

Published : Mar 18, 2024, 5:17 PM IST

Updated : Mar 19, 2024, 10:21 AM IST

ಬೆಂಗಳೂರು:ಬೆಂಗಳೂರಿಗೆ ನಿತ್ಯ 500 ಮಿಲಿಯನ್ ಲೀಟರ್ ನೀರಿನ ಕೊರತೆ ಇದ್ದು, ಶೇ 40ರಷ್ಟು ನಗರದ ಜನಸಂಖ್ಯೆ ಬೋರ್‌ವೆಲ್ ಮೇಲೆ ಅವಲಂಬಿತವಾಗಿದೆ. ನೀರಿನ ಬಗ್ಗೆ ದೂರು ಬಂದಲ್ಲಿ ತಕ್ಷಣ ಸ್ಪಂದಿಸಿ ಬಗೆಹರಿಸುವಂತೆ ಮತ್ತು ನಿಯಮ‌ ಪಾಲಿಸದ ಟ್ಯಾಂಕರ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಖಡಕ್ ಸೂಚನೆ ಕೊಟ್ಟಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಗೃಹ ಕಚೇರಿ ಕೃಷ್ಣಾದಲ್ಲಿ ಬೆಂಗಳೂರು ನೀರಿನ ಸಮಸ್ಯೆ ಬಗ್ಗೆ ಅಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ಮಾತನಾಡಿದ ಸಿಎಂ, ಜಲಮಂಡಳಿ, ಬಿಬಿಎಂಪಿ, ಇಂಧನ‌ ಇಲಾಖೆ, ನೀರಾವರಿ ಇಲಾಖೆ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದೇನೆ. ಬೆಂಗಳೂರಿನ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ತಜ್ಞರ ಸಮಿತಿ ರಚಿಸಲು ತೀರ್ಮಾನಿಸಲಾಗಿದೆ. ಈಗ 234 ಟ್ಯಾಂಕರ್ ಗಳಿಂದ ನೀರು ಪೂರೈಕೆ ಮಾಡಲಾಗುತ್ತಿದೆ. ಸುಮಾರು 2,000 ಟ್ಯಾಂಕರ್ ಲಭ್ಯವಿದೆ. 1700 ಟ್ಯಾಂಕರ್ ನೋಂದಣಿಯಾಗಿದೆ. ಉಳಿದ ಟ್ಯಾಂಕರ್ ಗಳನ್ನು ನೋಂದಣಿ ಮಾಡಲು ಹೇಳಿದ್ದೇನೆ. ವಲಯವಾರು ವಾರ್ ರೂಂ ಮಾಡಲು ಸೂಚಿಸಿದ್ದೇನೆ. ಕಡ್ಡಾಯವಾಗಿ ಮಳೆ ನೀರು ಕೊಯ್ಲು ಅಳವಡಿಕೆಗೆ ಹೇಳಿದ್ದೇನೆ.‌ ಟಾಸ್ಕ್ ಫೋರ್ಸ್​ಗಳ ಮೂಲಕ ಕಾನೂನು ಉಲ್ಲಂಘನೆ ಮಾಡಿದವರ ವಿರುದ್ಧ ಮುಲಾಜಿಲ್ಲದೇ ಕ್ರಮ ಕೈಗೊಳ್ಳಲು ಸೂಚಿಸಿದ್ದೇನೆ ಎಂದರು.

ಬೆಂಗಳೂರಲ್ಲಿ 1470 ಎಂಎಲ್​ಡಿ ನೀರು ಬರುತ್ತಿದೆ. ಉಳಿದಿದ್ದು ಬೋರ್ ವೆಲ್‌ ಮೂಲಕ ನೀರು ಪೂರೈಕೆಯಾಗುತ್ತದೆ. ಬೆಂಗಳೂರಲ್ಲಿ 14,000 ಕೊಳವೆ ಬಾವಿ ಇದೆ. ಆ ಪೈಕಿ 6900 ಕೊಳವೆ ಬಾವಿ ಡ್ರೈ ಆಗಿದೆ. ಕೆರೆಗಳು ಬತ್ತಿ ಹೋಗಿವೆ. ಈ ಕಾರಣದಿಂದ 6900 ಬೋರ್ ವೆಲ್ ಡ್ರೈ ಆಗಿದೆ. ಬೆಂಗಳೂರಿಗೆ 2600 ಎಂಎಲ್‌ಡಿ ನೀರು ಬೇಕು. ನಿತ್ಯ 1470 ಮಾತ್ರ ಕಾವೇರಿ ನೀರು ಪೂರೈಕೆ ಆಗುತ್ತಿದೆ. ಅದಕ್ಕಿಂತ ಹೆಚ್ಚಿಗೆ ನೀರು ಪಂಪ್ ಮಾಡಲು ಆಗಲ್ಲ.

ಸದ್ಯ 20-30 ಎಂಎಲ್​ಡಿ ನೀರು ಹೆಚ್ಚಿಗೆ ಪಂಪ್ ಮಾಡುತ್ತಿದ್ದೇವೆ. 110 ಹಳ್ಳಿಗಳಿಗೆ ಜೈಕಾ ನೆರವಿನಿಂದ ಕಾವೇರಿ ನೀರು ಕೊಡುವ ಕಾಮಗಾರಿ ಪ್ರಗತಿಯಲ್ಲಿದೆ. ಜೂನ್ ಒಳಗಡೆ ಅದು ಪೂರ್ಣವಾಗುತ್ತೆ. ಕಾವೇರಿ ಹಾಗೂ ಕಬಿನಿನಲ್ಲಿ ಬೆಂಗಳೂರಿಗೆ ಎಷ್ಟು ನೀರು ಬೇಕೋ ಅಷ್ಟು ನೀರು ಮೀಸಲಿಟ್ಟಿದ್ದೇವೆ. ಜೂನ್ ವರೆಗೆ ನೀರು ಇರಿಸಿದ್ದೇವೆ. ಕಾವೇರಿಯಲ್ಲಿ 11.4 ಟಿಎಂಸಿ ನೀರು ಇದೆ. ಕಬಿನಿಯಲ್ಲಿ 9.02 ಟಿಎಂಸಿ ಲೈವ್ ಸ್ಟಾಕ್ ಇದೆ. ಕಾವೇರಿ ನೀರಿನ ಲಭ್ಯತೆ ಇದೆ. 6,900 ಬೋರ್ ವೆಲ್ ಡ್ರೈ ಆಗಿರುವುದು ನಮಗೆ ನೀರಿನ ಸಮಸ್ಯೆ ಆಗಲು ಕಾರಣವಾಗಿದೆ. 51 ಹಳ್ಳಿಗಳಲ್ಲಿ ಬಹಳ ಸಮಸ್ಯೆ ಇದೆ. ಜೂನ್ ಒಳಗಡೆ ಕಾವೇರಿ ಐದನೇ ಹಂತ ಪೂರ್ಣ ಆಗುತ್ತದೆ. 775 ಎಂಎಲ್​ಡಿ ನೀರು ಸಿಗಲಿದೆ. ಆಗ 110 ಹಳ್ಳಿಗಳಿಗೆ ನೀರು ಪೂರೈಕೆ ಆಗಲಿದೆ ಎಂದು ಸಿದ್ದರಾಮಯ್ಯ ಭರವಸೆ ನೀಡಿದರು.

ಬೆಂಗಳೂರಲ್ಲಿ ನೀರು ಸಿಗುವ 313 ಕಡೆ ಹೊಸ ಬೋರ್ ವೆಲ್ ಕೊರೆಸುತ್ತೇವೆ. 1300 ನಿಷ್ಕ್ರಿಯ ಬೋರ್ ವೆಲ್​ ಗಳನ್ನು ಮತ್ತೆ ಕೊರೆಯುವ ಕೆಲಸ ಮಾಡುತ್ತಿದ್ದೇವೆ.‌ ಟ್ಯಾಂಕರ್ ಎಲ್ಲೆಲ್ಲಿ ಸಿಗುತ್ತೆ ಆ ಟ್ಯಾಂಕರ್​ ಅನ್ನು ಬಳಸಲು ಸೂಚನೆ ನೀಡಿದ್ದೇನೆ. ಕಂಟ್ರೋಲ್ ರೂಂ ಗಳನ್ನು ಹೆಚ್ಚು ಮಾಡಲು ಹೇಳಿದ್ದೇವೆ. ದೂರು ಕೊಟ್ಟ ತಕ್ಷಣ ಟ್ಯಾಂಕರ್ ರೆಡಿ ಇರಬೇಕು ಎಂದು ಸೂಚಿಸಿದ್ದೇನೆ. ಸೂಕ್ಷ್ಮ ಪ್ರದೇಶದ ಪತ್ತೆ ಮಾಡಿ ಅಲ್ಲಿಗೆ ಟ್ಯಾಂಕರ್ ಮೂಲಕ ನೀರು ಕೊಡಲು ಹೇಳಿದ್ದೇನೆ. ಟಾಸ್ಕ್ ಫೋರ್ಸ್ ಹೆಚ್ಚಿಸಲು ಸೂಚಿಸಿದ್ದೇನೆ ಎಂದು ಸಿದ್ದರಾಮಯ್ಯ ತಿಳಿಸಿದರು.

ನೀರಿನ ದುರುಪಯೋಗ ಆಗಬಾರದು. ಪಾರ್ಕ್​ಗಳಲ್ಲಿ ಕುಡಿಯುವ ನೀರು ಬಳಸ ಬಾರದು ಎಂದಿದ್ದೇನೆ. ಸಂಸ್ಕರಿತ ನೀರು ಬಳಸಲು ಸೂಚಿಸಿದ್ದೇನೆ. ಕೆ.ಸಿ ವ್ಯಾಲಿಯಿಂದ ಬೆಂಗಳೂರಿನ ಕೆರೆಯನ್ನೂ ಭರ್ತಿ ಮಾಡಲು ಹೇಳಿದ್ದೇನೆ. ಆ ಮೂಲಕ ಒಟ್ಟು 14 ಕೆರೆಗಳನ್ನು ರಾತ್ರಿ ಹೊತ್ತು ತುಂಬಿಸಲು ಸೂಚಿಸಿದ್ದೇನೆ. ಅದರಿಂದ ಅಂತರ್ಜಲ ನೀರು ಹೆಚ್ಚಿಸಲು ಸಾಧ್ಯವಾಗಲಿದೆ ಎಂದರು.

ಕುಡಿಯುವ ನೀರಿಗೆ ಹಣದ ಸಮಸ್ಯೆ ಇಲ್ಲ:ಹಣ ಇದಕ್ಕೆ ಸಮಸ್ಯೆ ಅಲ್ಲ. ಎಷ್ಟು ದುಡ್ಡಾದರು ಸರ್ಕಾರ ಕೊಡುತ್ತದೆ. ದುಡ್ಡಿನಿಂದ ತೊಂದರೆ ಆಯಿತು ಎಂದು ಆಗಬಾರದು. ಪ್ರತಿದಿನ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಸಂಬಂಧಿತ ಇಲಾಖೆ ಅಧಿಕಾರಿಗಳ ಜೊತೆ ಸಭೆ ನಡೆಸಿ ಪರಾಮರ್ಶೆ ಮಾಡಬೇಕು. ಸಭೆ ಮಾಡಿ ವಾರಕ್ಕೊಮ್ಮೆ ನೀರು ಪೂರೈಕೆ ಸಂಬಂಧ ಒಂದು ಪ್ಲಾನ್ ರೂಪಿಸಬೇಕು ಎಂದು ಸಿದ್ದರಾಮಯ್ಯ ಹೇಳಿದರು.

ಇದನ್ನೂ ಓದಿ :ಬೆಂಗಳೂರಲ್ಲಿ ನೀರಿಗಾಗಿ ಹಾಹಾಕಾರ: ಇಂದು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಮಹತ್ವದ ಸಭೆ

Last Updated : Mar 19, 2024, 10:21 AM IST

ABOUT THE AUTHOR

...view details