ನೇಹಾ ಕೊಲೆಗೆ ಆದಷ್ಟು ಬೇಗ ನ್ಯಾಯ ಸಿಗುತ್ತೆ: ಎಚ್.ಕೆ. ಪಾಟೀಲ್ ಭರವಸೆ, ಫೋನ್ ಕರೆ ಮಾಡಿ ಕುಟುಂಬಕ್ಕೆ ಧೈರ್ಯ ತುಂಬಿದ ಸಿಎಂ ಹುಬ್ಬಳ್ಳಿ:ಇತ್ತೀಚೆಗೆ ಕೊಲೆಯಾದ ಕಾಲೇಜು ಯುವತಿ ನೇಹಾ ಅವರ ತಂದೆ ನಿರಂಜನ ಹಿರೇಮಠ ಜೊತೆ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಫೋನ್ ಮೂಲಕ ಮಾತನಾಡಿ, "ವೆರಿ ಸ್ವಾರಿ. ನಾವು ನಿಮ್ಮ ಜೊತೆ ಇರ್ತೀವಿ" ಎಂದು ಧೈರ್ಯ ತುಂಬಿದ್ದಾರೆ. ಸಚಿವ ಎಚ್.ಕೆ.ಪಾಟೀಲ್ ಅವರು ನಿರಂಜನ ಹಿರೇಮಠ ಅವರ ಮನೆಗೆ ಭೇಟಿ ನೀಡಿದ ವೇಳೆ ಸಿಎಂ ಫೋನ್ ಮೂಲಕ ಮಾತನಾಡಿದ್ದಾರೆ.
ಬಳಿಕ ಪ್ರತಿಕ್ರಿಯಿಸಿದ ನಿರಂಜನ ಹಿರೇಮಠ, "ಪ್ರಕರಣವನ್ನು ಸಿಐಡಿಗೆ ಹಸ್ತಾಂತರಿಸಿದ್ದಕ್ಕೆ ಸಮಾಧಾನವಿದೆ. ಸ್ಪೆಷಲ್ ಕೋರ್ಟ್ ವಿಚಾರಕ್ಕೂ ಸಮಾಧಾನ ತರಿಸಿದೆ. ಸಿಎಂಗೆ ಧನ್ಯವಾದ" ಎಂದರು.
ಸಚಿವ ಎಚ್.ಕೆ.ಪಾಟೀಲ ಪ್ರತಿಕ್ರಿಯಿಸಿ, ''ನ್ಯಾಯದಾನ ವಿಳಂಬವಾಗಬಾರದೆಂದು ವಿಶೇಷ ನ್ಯಾಯಾಲಯ ಸ್ಥಾಪನೆಗೆ ತೀರ್ಮಾನಿಸಲಾಗಿದೆ. ಇವತ್ತು ಉಚ್ಛ ನ್ಯಾಯಾಲಯಕ್ಕೆ ವಿಶೇಷ ನ್ಯಾಯಾಲಯ ಸ್ಥಾಪನೆ ಪತ್ರ ತಲುಪುತ್ತದೆ. ತಪ್ಪಿತಸ್ಥರಿಗೆ ಸೂಕ್ತ ಶಿಕ್ಷೆ ಆಗಬೇಕಿದೆ. ಅನಿವಾರ್ಯ ಕಾರಣದಿಂದ ಸಿಎಂ ಇಲ್ಲಿಗೆ ಬರಲು ಆಗಿಲ್ಲ. ಹೀಗಾಗಿ, ನಿರಂಜನ್ ಹಿರೇಮಠ ಅವರೊಂದಿಗೆ ಫೋನ್‌ನಲ್ಲಿ ಮಾತನಾಡಿ ಸಾಂತ್ವನ ಹೇಳಿದ್ದಾರೆ'' ಎಂದು ತಿಳಿಸಿದರು.
ತಪ್ಪು ಮಾಹಿತಿಯಿಂದ ಮಾತನಾಡಿದ್ದೇನೆ:"ನನ್ನ ಮಗಳ ಕೊಲೆ ಪ್ರಕರಣದಲ್ಲಿ ಸರ್ಕಾರ ತಕ್ಷಣ ಸ್ಪಂದಿಸಿದೆ. ಮಾಹಿತಿ ಕೊರತೆಯಿಂದ ಸರ್ಕಾರದ ವಿರುದ್ಧ ಹೇಳಿಕೆ ಕೊಟ್ಟಿದ್ದೇವೆ. ಪೊಲೀಸ್ ಆಯುಕ್ತರ ವಿರುದ್ಧವೂ ಮಾತನಾಡಿದ್ದೇನೆ. ದುಃಖದಲ್ಲಿ ಮಾಹಿತಿ ಕೊರತೆಯಿಂದ ಮಾತನಾಡಿದ್ದೆ" ಎಂದು ನಿರಂಜನ ಹಿರೇಮಠ ಇದೇ ಸಂದರ್ಭದಲ್ಲಿ ಹೇಳಿದರು.
ಇದನ್ನೂ ಓದಿ:ರಾಜ್ಯಕ್ಕೆ ಬಾಂಬ್ ಕೊಟ್ಟ ಕಾಂಗ್ರೆಸ್ ಕೈಗೆ ಜನತೆ ಚೊಂಬು ಕೊಡುತ್ತಾರೆ: ನಳಿನ್ ಕುಮಾರ್ ಕಟೀಲ್ - Nalin Kumar Kateel