ಬೆಂಗಳೂರು:ರಾಜ್ಯದ ಜನಸಾಮಾನ್ಯರಿಗೆ ಉಚಿತ, ಉತ್ತಮ ಡಯಾಲಿಸಿಸ್ ಆರೋಗ್ಯ ಸೇವೆ ಒದಗಿಸುವ ಹೊಸ ಡಯಾಲಿಸಿಸ್ ಸೇವೆಗೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದ್ದಾರೆ. ಬೆಂಗಳೂರಿನ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ನೂತನ ಡಯಾಲಿಸಿಸ್ ಯಂತ್ರಗಳ ಸೇವೆಗೆ ಶನಿವಾರ ಚಾಲನೆ ಸಿಕ್ಕಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಬಡವರಿಗೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸಲು ರಾಜ್ಯ ಸರ್ಕಾರ ಬದ್ಧ. ಖಾಸಗಿ ವಲಯದಲ್ಲಿ ಡಯಾಲಿಸಿಸ್ ಮಾಡಿಸಿಕೊಳ್ಳುವುದು ಹೊರೆಯಾಗಿತ್ತು. ಹೀಗಾಗಿ ಉಚಿತ ಡಯಾಲಿಸಿಸ್ ಸೇವೆಯನ್ನು ಸರ್ಕಾರದಿಂದ ಒದಗಿಸಲಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಬಡವರ ಬಗ್ಗೆ ಕಾಳಜಿ ವಹಿಸಿ ಸೇವೆ ಒದಗಿಸಬೇಕು. ಈ ನಿಟ್ಟಿನಲ್ಲಿ ಡಯಾಲಿಸಿಸ್ ಆರೋಗ್ಯ ಸೇವೆಯನ್ನು ಇನ್ನಷ್ಟು ಹೆಚ್ಚಿಸುತ್ತೇವೆ ಎಂದರು.
ಡಯಾಲೈಸರ್ಗಳಿಂದ ಸೋಂಕು ಕಡಿಮೆ ಮಾಡಬಹುದು. ಡಯಾಲಿಸಿಸ್ ಕೇಂದ್ರಗಳಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡೂ ಅನುದಾನ ಒದಗಿಸಿಕೊಟ್ಟಿವೆ. ರಾಜ್ಯ ಸರ್ಕಾರ ಶೇ.60ರಷ್ಟು ಹಾಗೂ ಕೇಂದ್ರ ಸರ್ಕಾರ ಶೇ.40ರಷ್ಟು ಅನುದಾನ ನೀಡಲಿದೆ. ಆದರೆ ಹೆಸರು ಮಾತ್ರ ಪ್ರಧಾನಮಂತ್ರಿ ಡಯಾಲಿಸಿಸ್ ಎಂದು ಇದೆ. ಹೆಚ್ಚು ಅನುದಾನ ಒದಗಿಸುವುದು ರಾಜ್ಯ ಸರ್ಕಾರ. ಸಣ್ಣ ವಯಸ್ಸಿನವರಿಗೂ ಕಿಡ್ನಿ ಸಮಸ್ಯೆ ಬರುತ್ತಿದೆ. ಅದಕ್ಕಾಗಿ ಸರ್ಕಾರ ಎಷ್ಟು ಸಾಧ್ಯವೋ ಅಷ್ಟು ಜನರಿಗೆ ಡಯಾಲಿಸಿಸ್ ಮಾಡಿಸುವ ಕೆಲಸ ಮಾಡುತ್ತಿದೆ. ಎಲ್ಲಾ ಜಿಲ್ಲಾ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ಈ ಸೇವೆ ದೊರಕಬೇಕು ಎಂದರು.
ಕೆ.ಸಿ.ಜನರಲ್ ಆಸ್ಪತ್ರೆ ಮೇಲ್ದರ್ಜೆಗೆ:ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಸೇರಿದಂತೆ, 150 ಕೋಟಿ ರೂ ವೆಚ್ಚದಲ್ಲಿ ಮೇಲ್ದರ್ಜೆಗೇರಿಸುವುದಾಗಿ ಸಿಎಂ ಸಿದ್ದರಾಮಯ್ಯ ತಿಳಿಸಿದರು. ಆಸ್ಪತ್ರೆ ತುಂಬ ಹಳೆಯದಾಗಿದ್ದು ಇಲ್ಲಿಗೆ ಸಾಕಷ್ಟು ರೋಗಿಗಳು ಬರುತ್ತಾರೆ. ಈ ಬಗ್ಗೆ ದಿನೇಶ್ ಗುಂಡೂರಾವ್ ಕ್ಯಾಬಿನೆಟ್ಗೆ ಪ್ರಸ್ತಾವನೆ ತರುವುದಾಗಿ ಹೇಳಿದ್ದಾರೆ ಎಂದರು.
800 ಹೊಸ ಏಕಬಳಕೆಯ ಡಯಾಲೈಸರ್ ಸೇವೆ:ರಾಜ್ಯದಲ್ಲಿದ್ದ 171 ಡಯಾಲಿಸಿಸ್ ಕೇಂದ್ರಗಳನ್ನು 219ಕ್ಕೆ ಹೆಚ್ಚಿಸಲಾಗಿದ್ದು, 800 ಹೊಸ ಏಕಬಳಕೆಯ ಡಯಾಲೈಸರ್ ಯಂತ್ರಗಳನ್ನು ಅಳವಡಿಸಲಾಗುತ್ತಿದೆ. ಬೆಂಗಳೂರು ವಿಭಾಗದ 57 ಡಯಾಲಿಸಿಸ್ ಕೇಂದ್ರಗಳಲ್ಲಿ 250 ಯಂತ್ರಗಳು, ಮೈಸೂರು ವಿಭಾಗದ 55 ಕೇಂದ್ರಗಳಲ್ಲಿ 222 ಯಂತ್ರಗಳು, ಬೆಳಗಾವಿ ವಿಭಾಗದ 62 ಕೇಂದ್ರಗಳಲ್ಲಿ 201 ಯಂತ್ರಗಳು, ಕಲಬುರಗಿ ವಿಭಾಗದ 45 ಕೇಂದ್ರಗಳಲ್ಲಿ 127 ಯಂತ್ರಗಳು ಸೇರಿದಂತೆ ಒಟ್ಟು 800 ಏಕಬಳಕೆಯ ಡಯಾಲೈಸರ್ಗಳ ಅಳವಡಿಕೆ ಕಾರ್ಯ ಅಂತಿಮ ಘಟ್ಟಕ್ಕೆ ತಲುಪಿದ್ದು, ಇಂದಿನಿಂದ 475 ಏಕಬಳಕೆಯ ಡಯಾಲೈಸರ್ಗಳು ಕಾರ್ಯಾರಂಭಿಸಿವೆ. ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ 20 ನೂತನ ಏಕಬಳಕೆಯ ಡಯಾಲೈಸರ್ ಯಂತ್ರಗಳನ್ನು ಅಳವಡಿಸಲಾಗಿದೆ.