ಚಾಮರಾಜನಗರ: ಚಾಮರಾಜನಗರಕ್ಕೆ ಬಂದರೆ ಅಧಿಕಾರ ಹೋಗುತ್ತದೆ ಎನ್ನುತ್ತಿದ್ದರು. ಆದರೆ, ನನ್ನ ಮೊದಲ ಸಿಎಂ ಅವಧಿಯಲ್ಲಿ 15ಕ್ಕೂ ಹೆಚ್ಚು ಬಾರಿ ಭೇಟಿ ಕೊಟ್ಟಿದ್ದೆ. ಎರಡನೇ ಅವಧಿಯಲ್ಲಿ 5ನೇ ಬಾರಿ ಭೇಟಿ ಕೊಡುತ್ತಿದ್ದೇನೆ. ಚಾಮರಾಜನಗರಕ್ಕೆ ಬಂದಾಗಲೆಲ್ಲಾ ನನ್ನ ಕುರ್ಚಿ ಗಟ್ಟಿಯಾಗುತ್ತಿದೆ. ಕೆಲವರು ಕುರ್ಚಿ ಅಲ್ಲಾಡಿಸುತ್ತಿದ್ದಾರೆ, ಅವರು ಅಲ್ಲಾಡಿಸುತ್ತಿರಲಿ, ನನ್ನ ಕುರ್ಚಿ ಗಟ್ಟಿ ಆಗ್ತನೇ ಇರುತ್ತದೆ. ನನ್ನನ್ನು ಏನೂ ಮಾಡಕ್ಕಾಗಲ್ಲ ಎಂದು ಬಿಜೆಪಿ ಜೆಡಿಎಸ್ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಲೇವಡಿ ಮಾಡಿದರು.
ಕೊಳ್ಳೇಗಾಲ ತಾಲೂಕಿನ ಭರಚುಕ್ಕಿಯಲ್ಲಿ ಜಲಪಾತೋತ್ಸವವನ್ನು ಸಿಎಂ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಪರಿಸರ ಪ್ರವಾಸೋದ್ಯಮ ಆಹ್ಲಾದಿಸಲು ಚಾಮರಾಜನಗರ ಉತ್ತಮ ಜಿಲ್ಲೆಯಾಗಿದೆ. ಆದರೆ ಆರ್ಥಿಕವಾಗಿ, ಸಾಮಾಜಿಕವಾಗಿ ಬಹಳ ಹಿಂದೆ ಉಳಿದಿದೆ ಎಂದರು. ಇನ್ನಷ್ಟು ಗಟ್ಟಿಯಾಗಿ ಅಧಿಕಾರದ ಚುಕ್ಕಾಣಿ ಹಿಡಿದು ಬಡವರ, ಶೋಷಿತರ ಪರವಾಗಿ ಕಾರ್ಯಕ್ರಮಗಳನ್ನು ರೂಪಿಸ್ತಲೇ ಇರುತ್ತೇನೆ ಎಂದು ಭರವಸೆ ನೀಡಿದರು.
ಸಿದ್ದರಾಮಯ್ಯರ ಕಾಲುಗುಣ ಸರಿ ಇಲ್ಲ. ಅದಕ್ಕೆ ರಾಜ್ಯದಲ್ಲಿ ಮಳೆ ಇಲ್ಲ ಎಂದು ನನ್ನ ಬಗ್ಗೆ ಆರೋಪಿಸಿದ್ದರು. ಆದರೆ, ಈ ಬಾರಿ ಮುಂಗಾರು ಉತ್ತಮವಾಗಿದ್ದು, ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಹೀಗಾಗಿ ನನ್ನ ಬಗ್ಗೆ ಮೂಡಿಸಿದ್ದ ಮತ್ತೊಂದು ಮೂಢನಂಬಿಕೆ ಕೂಡ ಸುಳ್ಳಾಗಿದೆ ಎಂದು ಪ್ರತಿಪಕ್ಷಗಳಿಗೆ ಸಿಎಂ ತಿರುಗೇಟು ನೀಡಿದರು.