ಕರ್ನಾಟಕ

karnataka

ETV Bharat / state

ಶಕ್ತಿ ಯೋಜನೆ ಸೇರಿ ಎಲ್ಲ ಗ್ಯಾರಂಟಿಗಳೂ ನಮ್ಮ ಸರ್ಕಾರ ಇರುವವರೆಗೂ ಇರಲಿವೆ: ಸಿಎಂ ಸಿದ್ದರಾಮಯ್ಯ - CM Siddaramaiah

ವಿಧಾನಸೌಧದ ಗ್ರಾಂಡ್ ಸ್ಟೆಪ್ಸ್ ಬಳಿ ಸಾರಿಗೆ ಇಲಾಖೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 100 ನೂತನ ಬಿಎಂಟಿಸಿ ಬಸ್​ಗಳನ್ನು ಸಿಎಂ ಸಿದ್ದರಾಮಯ್ಯ ಲೋಕಾರ್ಪಣೆಗೊಳಿಸಿದರು.

CM Siddaramaiah inaugurated BMTC Buses
ಬಿಎಂಟಿಸಿ ಬಸ್​ ಉದ್ಘಾಟಿಸಿ ಸಿಎಂ ಸಿದ್ದರಾಮಯ್ಯ (ETV Bharat)

By ETV Bharat Karnataka Team

Published : Sep 12, 2024, 2:46 PM IST

Updated : Sep 12, 2024, 4:02 PM IST

ಬೆಂಗಳೂರು:"ನಗರದ ಜನರ ಅನುಕೂಲಕ್ಕಾಗಿ ಮೊದಲ ಹಂತದ 100 ನೂತನ ಬಿಎಂಟಿಸಿ ಬಸ್​ಗಳನ್ನು ಇಂದು ಲೋಕಾರ್ಪಣೆ ಮಾಡಿದ್ದೇವೆ. ಒಟ್ಟು 840 ನೂತನ‌ ಬಸ್​ಗಳು ಬಿಎಂಟಿಸಿ ಸೇರಲಿವೆ. ಶಕ್ತಿ ಯೋಜನೆ ಸೇರಿದಂತೆ ನಮ್ಮ ಐದು ಗ್ಯಾರಂಟಿ ಯೋಜನೆಗಳು ನಮ್ಮ ಸರ್ಕಾರ ಇರುವವರೆಗೂ ಮುಂದುವರೆಯಲಿವೆ. ಇದರಲ್ಲಿ ಯಾವುದೇ ಅನುಮಾನ ಬೇಡ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.

ಬಿಎಂಟಿಸಿ ಬಸ್​ ಉದ್ಘಾಟಿಸಿ ಸಿಎಂ ಸಿದ್ದರಾಮಯ್ಯ (ETV Bharat)

ವಿಧಾನಸೌಧದ ಗ್ರಾಂಡ್ ಸ್ಟೆಪ್ಸ್ ಬಳಿ ಸಾರಿಗೆ ಇಲಾಖೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 100 ನೂತನ ಬಿಎಂಟಿಸಿ ಬಸ್​ಗಳನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, "ಬೆಂಗಳೂರು ನಗರದಲ್ಲಿ ಜನಸಂಖ್ಯೆ ಹೆಚ್ಚುತ್ತಿದೆ. ಇಲ್ಲಿನ ಹೆಚ್ಚುತ್ತಿರುವ ಶ್ರಮಿಕ ವರ್ಗಗಳಿಗೆ ಅನುಕೂಲ ಮಾಡುವ ಉದ್ದೇಶದಿಂದ ನೂತನ‌ ಬಸ್​ಗಳನ್ನು ಬಿಎಂಟಿಸಿಗೆ ಸೇರ್ಪಡೆಗೊಳಿಸುವ ಜೊತೆಗೆ ಹಿಂದಿನ ಸರ್ಕಾರ ಸ್ಥಗಿತಗೊಳಿಸಿದ್ದ ಇಂದಿರಾ ಕ್ಯಾಂಟೀನ್​ಗಳನ್ನು ಆರಂಭಿಸಿದ್ದಲ್ಲದೇ, ನೂತನವಾಗಿ ಇನ್ನಷ್ಟು ಕ್ಯಾಂಟೀನ್​ಗಳನ್ನು ಆರಂಭಿಸುತ್ತಿದ್ದೇವೆ. ಇದೇ ಶ್ರಮಿಕ ವರ್ಗದ ಅನುಕೂಲಕ್ಕಾಗಿ ಶಕ್ತಿ ಯೋಜನೆ ಸೇರಿದಂತೆ ಐದೂ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿ ಯಶಸ್ವಿಯಾಗಿ ಮುಂದುವರೆಸುತ್ತಿದ್ದೇವೆ" ಎಂದರು.

ನಾವು ನುಡಿದಂತೆ ನಡೆದಿದ್ದೇವೆ:"ಬಡವರ ಮತ್ತು ಮಧ್ಯಮ ವರ್ಗದ ವಿರೋಧಿಯಾಗಿರುವ ಬಿಜೆಪಿ ಈ ಗ್ಯಾರಂಟಿ ಯೋಜನೆಗಳ ವಿರುದ್ಧ ಅಪಪ್ರಚಾರ ಮಾಡುತ್ತಿವೆ. ಈ ಅಪಪ್ರಚಾರಕ್ಕೆ ಕಿವಿಗೊಡಬೇಡಿ. ಈ ಗ್ಯಾರಂಟಿಗಳು ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿ ಆಗಲಿವೆ. ಗೃಹಲಕ್ಷ್ಮಿ ಹಣದಿಂದ ಸಾವಿರಾರು ಕುಟುಂಬಗಳು ನಾನಾ ರೀತಿಯ ಅನುಕೂಲಗಳನ್ನು ಒದಗಿಸಿಕೊಳ್ಳುತ್ತಿರುವ ಬಗ್ಗೆ ಪ್ರತಿದಿನ ಮಾಧ್ಯಮಗಳು ತೋರಿಸುತ್ತಿವೆ. ನಾವು ಬಡವರಿಗೆ ಅಕ್ಕಿ ಕೊಡುವ ಯೋಜನೆಗೆ ಮುಂದಾದರೆ ಕೇಂದ್ರ ಸರ್ಕಾರ ನಮಗೆ ಅಕ್ಕಿ ಕೊಡದೆ ತೊಂದರೆ ನೀಡಿತು. ಆದರೆ ನಾವು ಅಕ್ಕಿಯ ಬದಲಿಗೆ, ಅಕ್ಕಿಯ ಹಣವನ್ನು ಜನರಿಗೆ ನೀಡಿ ನುಡಿದಂತೆ ನಡೆದಿದ್ದೇವೆ" ಎಂದರು.‌

ಬಿಎಂಟಿಸಿಯ ನೂತನ ಬಸ್​ಗಳು (ETV Bharat)

"ರಾಜ್ಯದ ಪ್ರತೀ ಕುಟುಂಬಗಳಿಗೆ ತಿಂಗಳಿಗೆ 4-5 ಸಾವಿರ ರೂಪಾಯಿ ಅನುಕೂಲ ಆಗುತ್ತಿದೆ. ಇದರಿಂದ ಲಕ್ಷಾಂತರ ಕುಟುಂಬಗಳಿಗೆ ಆರ್ಥಿಕ ಶಕ್ತಿ ನೀಡಿದ್ದೇವೆ. ನಮ್ಮ ಸರ್ಕಾರ ಬಂದ ಮೇಲೆ ನಾಲ್ಕು ಬಾರಿ ಹೊಸ ಬಸ್​ಗಳನ್ನು‌ ಖರೀದಿಸಿ ಸವಲತ್ತು ಒದಗಿಸಿದ್ದೇವೆ" ಎಂದರು.

ಬಿಎಂಟಿಸಿಗೆ ಹೊಸ ಬಸ್​​​​ಗಳು:ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, "ಬಿಎಂಟಿಸಿಗೆ ಒಟ್ಟು ಹೊಸದಾಗಿ 840 ಬಸ್​ಗಳು ಬರಲಿವೆ. ಸಾಂಕೇತಿಕವಾಗಿ ಇಂದು 100 ಬಸ್​ಗಳಿಗೆ ಚಾಲನೆ ಕೊಡಲಾಗಿದೆ. ನಮ್ಮ ಸರ್ಕಾರ ಬಂದ ನಂತರ ನಾಲ್ಕನೇ ಬಾರಿ ಹೊಸ ಬಸ್​ಗಳಿಗೆ ಚಾಲನೆ ಕೊಡಲಾಗುತ್ತಿದೆ. ಪ್ರತಿದಿನ 40 ಲಕ್ಷ ಜನ ಬಿಎಂಟಿಸಿ ಬಸ್​ಗಳಲ್ಲಿ ಸಂಚರಿಸುತ್ತಿದ್ದಾರೆ. ಮೆಟ್ರೋದಲ್ಲಿ 4-5 ಲಕ್ಷವೇ ಹೆಚ್ಚು, ಈಗ ಬಿಎಂಟಿಸಿಗೆ 100 ಹೊಸ ಬಸ್​ಗಳು ಬಂದಿವೆ. ಎಲ್ಲವೂ ನಾನ್ ಎಸಿ, ಪರಿಸರಸ್ನೇಹಿ ಬಸ್​ಗಳು. 12 ಮೀಟರ್ ಉದ್ದ, 41 ಆಸನ ಸಾಮರ್ಥ್ಯ, ಹೆಚ್ಚು ಜನ ನಿಲ್ಲಲು ಅವಕಾಶ, 3 ಕ್ಯಾಮೆರಾ, ಎಲ್ಇಡಿ ಬೋರ್ಡ್, ಮಹಿಳೆಯರ ಸುರಕ್ಷತೆಗೆ ತುರ್ತು ಪ್ಯಾನಿಕ್ ಬಟನ್ ಹೊಂದಿದ್ದು, ಅಗ್ನಿ ಅವಘಡ ತಪ್ಪಿಸಲು ಎಚ್ಚರಿಕೆ ವ್ಯವಸ್ಥೆ ಇದೆ. ಟ್ರ್ಯಾಕಿಂಗ್ ವ್ಯವಸ್ಥೆ ಇರಲಿದೆ. ಹೆಡ್ ಆಫೀಸ್​ನಲ್ಲಿ ಕುಳಿತೇ ಬಸ್ ಎಲ್ಲಿದೆ ಎಂದು ನೋವಂತಹ ಆಧುನಿಕ ತಂತ್ರಜ್ಞಾನಗಳಿವೆ" ಎಂದು ವಿವರಿಸಿದರು.

"ಕಳೆದ ವರ್ಷ ಶಕ್ತಿ ಯೋಜನೆ ಜಾರಿಗೂ ಮುನ್ನ ನಾಲ್ಕು ನಿಗಮಗಳಿಂದ ಸೇರಿ ರಾಜ್ಯಾದ್ಯಂತ ಒಟ್ಟು 80 ಲಕ್ಷ ಜನ ನಮ್ಮ ಸಾರಿಗೆ ಬಸ್​ಗಳಲ್ಲಿ ಸಂಚರಿಸುತ್ತಿದ್ದರು. ಈಗ 1 ಕೋಟಿಗೂ ಹೆಚ್ಚು ಜನ ಸಂಚರಿಸುತ್ತಿದ್ದಾರೆ. 20 ಲಕ್ಷಕ್ಕೂ ಹೆಚ್ಚಿನ ಪ್ರಯಾಣಿಕರು ಸಂಚರಿಸುತ್ತಿದ್ದಾರೆ. 287 ಕೋಟಿ ಮಹಿಳಾ ಪ್ರಯಾಣಿಕರು ಪ್ರಯಾಣಿಸುತ್ತಿದ್ದಾರೆ. ಇನ್ನೊಂದು ತಿಂಗಳಿನಲ್ಲಿ 300 ಕೋಟಿ ತಲುಪಲಿದೆ. 87 ಕೋಟಿ ಮಹಿಳೆಯರು ಕೇವಲ ಬಿಎಂಟಿಸಿಯಲ್ಲಿಯೇ ಸಂಚರಿಸಿದ್ದಾರೆ. ಉದ್ಯೋಗಕ್ಕೆ ಹೋಗುವ ಮಹಿಳೆಯರಿಗೆ ಹೆಚ್ಚಿನ ಅವಕಾಶವಾಗಿದೆ. ಸಾವಿರಕ್ಕೂ ಹೆಚ್ಚು ಇವಿ ಬಸ್ ಈಗ ಬಿಎಂಟಿಸಿಯಲ್ಲಿದೆ. ಇನ್ನೂ 800 ಸೇರ್ಪಡೆಯಾಗಲಿದೆ. ಮೆಟ್ರೋ ಇರುವ ಕಡೆ ಫೀಡರ್ ಸೇವೆ ಒದಗಿಸಲಾಗಿದೆ. ನಾಲ್ಕು ನಿಗಮ ಸೇರಿ 1 ಲಕ್ಷಕ್ಕೂ ಹೆಚ್ಚು ಕಾರ್ಮಿಕರಿದ್ದಾರೆ. ಕರ್ತವ್ಯನಿರತ ಅಥವಾ ರಜೆಯಲ್ಲಿದ್ದಾಗ ಅಪಘಾತವಾಗಿ ಮೃತರಾದರೂ ಮೃತ ಕಾರ್ಮಿಕರ ಕುಟುಂಬಕ್ಕೆ ಒಂದು ಕೋಟಿ ರೂ. ವಿಮೆ ಕೊಡುವ ವ್ಯವಸ್ಥೆ ಮಾಡಲಾಗಿದೆ. ಪ್ರಯಾಣಿಕರು ಮೃತರಾದಲ್ಲಿ 10 ಲಕ್ಷ ಕೊಡಲಾಗುತ್ತಿದೆ. ಸಾರ್ವಜನಿಕರು ಮತ್ತು ನೌಕರರಿಬ್ಬರ ಹಿತವನ್ನೂ ನೋಡಿ ಕೆಲಸ ಮಾಡುತ್ತಿದ್ದೇವೆ" ಎಂದರು.

ಸಿಎಂ ಸಿದ್ದರಾಮಯ್ಯ (ETV Bharat)

"ಕಾರ್ಮಿಕರ ಬೇಡಿಕೆ, ಸಮಸ್ಯೆಗಳ ಕುರಿತು ಸಿಎಂ ಗಮನಕ್ಕೆ ತರಲಾಗಿದೆ. ಎಲ್ಲ ಸಮಸ್ಯೆಗಳನ್ನು ಪರಿಹರಿಸಲಾಗುತ್ತದೆ ಎನ್ನುವ ವಿಶ್ವಾಸವಿದೆ" ಎಂದು ಸ್ಪಷ್ಟಪಡಿಸಿದರು.

ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ವಸತಿ ಸಚಿವ ಜಮೀರ್ ಅಹಮದ್, ಇಂಧನ ಸಚಿನ ಕೆ.ಜೆ.ಜಾರ್ಜ್, ಕೆಕೆಆರ್​ಡಿಬಿ ಅಧ್ಯಕ್ಷ ಅಜಯ್ ಸಿಂಗ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ನಸೀರ್ ಅಹಮದ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಇದನ್ನೂ ಓದಿ:ಮುಡಾ ಹಗರಣದಲ್ಲಿ ಪ್ರಾಸಿಕ್ಯೂಷನ್ ಪ್ರಶ್ನಿಸಿ ಸಿಎಂ ಅರ್ಜಿ: ಮಧ್ಯಾಹ್ನ 2.30ಕ್ಕೆ ವಿಚಾರಣೆ ಮುಂದೂಡಿಕೆ - CM Siddaramaiah Prosecution

Last Updated : Sep 12, 2024, 4:02 PM IST

ABOUT THE AUTHOR

...view details