ಬೆಂಗಳೂರು: ಬಿಹಾರದ ಮಾಜಿ ಮುಖ್ಯಮಂತ್ರಿ ಕರ್ಪೂರಿ ಠಾಕೂರ್ ಅವರಿಗೆ ಮರಣೋತ್ತರ ಭಾರತ ರತ್ನ ಪ್ರಶಸ್ತಿ ನೀಡಿರುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಸ ವ್ಯಕ್ತಪಡಿಸಿದ್ದಾರೆ. ಭಾರತ ರತ್ನ ಪ್ರಶಸ್ತಿಗೆ ಅವರು ಅತ್ಯಂತ ಅರ್ಹರು ಎಂದು ತಿಳಿಸಿದ್ದಾರೆ.
ಇಂದು ಸ್ವಾತಂತ್ರ್ಯ ಹೋರಾಟಗಾರ, ಸಮಾಜವಾದಿ ನಾಯಕರಾದ ಕರ್ಪೂರಿ ಠಾಕೂರ್ ಅವರ ಜನ್ಮ ಶತಮಾನೋತ್ಸವ ಆಚರಿಸಲಾಗುತ್ತಿದೆ. ಇದಕ್ಕೂ ಮುನ್ನ ದಿನವಾದ ಮಂಗಳವಾರ ಕರ್ಪೂರಿ ಠಾಕೂರ್ ಅವರಿಗೆ ಮರಣೋತ್ತರವಾಗಿ ಭಾರತ ರತ್ನ ಪ್ರಶಸ್ತಿ ಪ್ರಕಟಿಸಲಾಗಿದೆ. ಈ ಕುರಿತು ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಸಿಎಂ ಸಿದ್ದರಾಮಯ್ಯ ಪೋಸ್ಟ್ ಮಾಡಿದ್ದು, ಸಾಮಾಜಿಕ ನ್ಯಾಯದ ಪ್ರಬಲ ಪ್ರತಿಪಾದಕರಾಗಿದ್ದ ಬಿಹಾರದ ಮಾಜಿ ಮುಖ್ಯಮಂತ್ರಿ ಕರ್ಪೂರಿ ಠಾಕೂರ್ ಅವರಿಗೆ ಮರಣೋತ್ತರ ಭಾರತ ರತ್ನ ಪ್ರಶಸ್ತಿ ನೀಡಿರುವುದು ನನಗೆ ಅತೀವ ಸಂತಸ ಉಂಟುಮಾಡಿದೆ ಎಂದು ಹೇಳಿದ್ದಾರೆ.
ಎಪ್ಪತ್ತರ ದಶಕದಲ್ಲಿಯೇ ಕರ್ನಾಟಕದ ಮಾದರಿಯಲ್ಲಿ ಬಿಹಾರದಲ್ಲಿ ಹಿಂದುಳಿದ ಜಾತಿಗಳಿಗೆ ಮೀಸಲಾತಿಯನ್ನು ಕಲ್ಪಿಸಿದ್ದ ಕರ್ಪೂರಿ ಠಾಕೂರ್ ಅವರನ್ನು 'ಬಿಹಾರದ ದೇವರಾಜ ಅರಸು' ಎಂದು ಬಣ್ಣಿಸಲಾಗುತ್ತದೆ. ಹಿಂದುಳಿದ ಸವಿತಾ ಸಮಾಜಕ್ಕೆ ಸೇರಿರುವ ಕರ್ಪೂರಿ ಠಾಕೂರ್ ಅವರು ಜಾತಿಗ್ರಸ್ತ ಬಿಹಾರ ರಾಜ್ಯದಲ್ಲಿ ಎರಡು ಬಾರಿ ಮುಖ್ಯಮಂತ್ರಿಯಾಗಿದ್ದೇ ಅವರ ಜನಪ್ರಿಯತೆಗೆ ಸಾಕ್ಷಿ. ಭಾರತ ರತ್ನ ಪ್ರಶಸ್ತಿಗೆ ಅವರು ಅತ್ಯಂತ ಅರ್ಹರು. ಅವರಿಗೆ ನನ್ನ ಗೌರವಪೂರ್ವಕ ನಮನಗಳು ಎಂದು ಸಿಎಂ ಬರೆದುಕೊಂಡಿದ್ದಾರೆ.