ಬೆಂಗಳೂರು:ಭಾರತ ವಿಕಾಸ ಸಂಗಮ ಸಂಸ್ಥೆಯವರು ಆಯೋಜಿಸಿರುವ ಭಾರತೀಯ ಸಂಸ್ಕೃತಿ ಉತ್ಸವದಲ್ಲಿ ಭಾಗವಹಿಸದಿರಲು ಸಿಎಂ ಸಿದ್ದರಾಮಯ್ಯ ತೀರ್ಮಾನಿಸಿದ್ದಾರೆ. ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಭಾರತ ವಿಕಾಸ ಸಂಗಮ ಸಂಸ್ಥೆಯವರು ಆಯೋಜಿಸಿರುವ ಭಾರತೀಯ ಸಂಸ್ಕೃತಿ ಉತ್ಸವ ಉದ್ಘಾಟನೆಯ ಆಮಂತ್ರಣ ಪತ್ರಿಕೆಯಲ್ಲಿ ನನ್ನ ಹೆಸರು ಮುದ್ರಣವಾಗಿರುವುದನ್ನು ಗಮನಿಸಿದ್ದೇನೆ. ಈ ಬಗ್ಗೆ ನನಗೆ ಅಧಿಕೃತ ಆಹ್ವಾನ ಬಂದಿಲ್ಲ. ಈ ಕಾರ್ಯಕ್ರಮ ಆಯೋಜಿಸಿರುವ ಸಂಸ್ಥೆಯ ಹಿನ್ನೆಲೆಯ ವಿವರವನ್ನು ತರಿಸಿ ಪರಿಶೀಲಿಸಿದ ನಂತರ ಅದರಲ್ಲಿ ಭಾಗವಹಿಸದೇ ಇರಲು ತೀರ್ಮಾನಿಸಿದ್ದೇನೆ ಎಂದು ಸಿಎಂ ಸ್ಪಷ್ಟಪಡಿಸಿದ್ದಾರೆ.
ಕಲಬುರಗಿ ಜಿಲ್ಲೆಯ ಸೇಡಂನಲ್ಲಿ ಜ.29 ರಿಂದ ಫೆ. 6ರವರೆಗೆ 'ಭಾರತೀಯ ಸಂಸ್ಕೃತಿ ಉತ್ಸವ–7' ನಡೆಸಲು ಉದ್ದೇಶಿಲಾಗಿದೆ. ಭಾರತ ವಿಕಾಸ ಸಂಗಮ, ಕಲಬುರಗಿಯ ವಿಕಾಸ ಅಕಾಡೆಮಿ, ಸೇಡಂನ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿಯ ಜಂಟಿ ಸಹಯೋಗದಲ್ಲಿ ಈ ಉತ್ಸವ ನಡೆಯುತ್ತಿದೆ. ಈ ಸಂಬಂಧ 52 ಪುಟಗಳ ಆಮಂತ್ರಣ ಪತ್ರಿಕೆ ಈಗಾಗಲೇ ಬಿಡುಗಡೆಗೊಂಡಿದೆ. ಜ.29ರಂದು ಬೆಳಗ್ಗೆ ನಡೆಯಲಿರುವ ಮಾತೃ ಸಮಾವೇಶ – 'ಮಾತೃ ದೇವೋಭವ'ವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಲಿದ್ದಾರೆ ಎಂದು ಆಮಂತ್ರಣ ಪತ್ರಿಕೆಯಲ್ಲಿದೆ.