ಸಿಎಂ ಸಿದ್ದರಾಮಯ್ಯ (ETV Bharat) ಬೆಂಗಳೂರು :ನಾನು ಹಿಂದಿನ ಸಿದ್ದರಾಮಯ್ಯ ಅಲ್ಲ ಅಂತ ಯತ್ನಾಳ್ ಅವರು ಹೇಳಿದ್ದಾರೆ. ಯತ್ನಾಳ್ ಅವರು ಕೂಡ ಈಗ ವಾಜಪೇಯಿ ಅವರ ಸಂಪುಟದಲ್ಲಿದ್ದ ಯತ್ನಾಳ್ ಆಗಿ ಉಳಿದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ವಿಧಾನಸಭೆಯಲ್ಲಿ ವಾಲ್ಮೀಕಿ ಅಭಿವೃದ್ಧಿ ನಿಗಮ ಅಕ್ರಮ ಮೇಲಿನ ಚರ್ಚೆ ಕುರಿತು ಉತ್ತರಿಸಿದ ಅವರು, ಸಿದ್ದರಾಮಯ್ಯ ಅವರು ಹಿಂದೆ ಇದ್ದಂತೆ ಇಲ್ಲ ಅಂತ ಯತ್ನಾಳ್ ಹೇಳ್ತಾರೆ ಎಂದು ಉಲ್ಲೇಖಿಸಿದರು. ಆಗ ಯತ್ನಾಳ್, ಆ ಸಿದ್ದರಾಮಯ್ಯನವರೇ ಕಳೆದು ಹೋಗಿದ್ದಾರೆ ಅಂತ ನಿಮ್ಮ ಜೊತೆಯಲ್ಲಿ ಇದ್ದ ಮಂತ್ರಿಗಳೇ ಹೇಳ್ತಾರೆ ಎಂದರು.
2013 ರಿಂದ 2018 ರವರೆಗೆ ಹೇಗಿದ್ದೆ ಇವಾಗ್ಲೂ ಹಾಗೆ ಇದ್ದೇನೆ ಎಂದು ಸಿಎಂ ಸ್ಪಷ್ಟನೆ ನೀಡಿದರು. ಆಗ ಆಡಳಿತ ಪಕ್ಷ ಸದಸ್ಯರು ಮೇಜು ತಟ್ಟಿದರು. ಈ ವೇಳೆ ಯತ್ನಾಳ್ ನಿಮ್ಮವರು ಪೂರ್ತಿಯಾಗಿ ಚಪ್ಪಾಳೆ ತಟ್ಟಿಲ್ಲ. ನಿಮ್ಮ ಮಾತಿಗೆ ಸಹಮತ ಇಲ್ಲ ಎಂದರ್ಥ ಎಂದರು.
ಯತ್ನಾಳ್ ಮಾತಿನ ಬಳಿಕ ಆಡಳಿತ ಪಕ್ಷದ ಸದಸ್ಯರು ಜೋರಾಗಿ ಒಟ್ಟಿಗೆ ಮೇಜು ತಟ್ಟಿದರು. ಆಗ ಯತ್ನಾಳ್, ನಿಮಗಾಗಿ ಅವರು ಚಪ್ಪಾಳೆ ತಟ್ಟಿದ್ದಲ್ಲ, ಯಾರೋ ಕೆಲವರು ಅಷ್ಟೇ ಚಪ್ಪಾಳೆ ತಟ್ಟಿದರು. ನನ್ನ ಮಾತಿಗೆ ಜೋರಾಗಿ ಚಪ್ಪಾಳೆ ತಟ್ಟಿದ್ದಾರೆ ಎಂದು ಕಿಚಾಯಿಸಿದರು. ಆಗ ಸಿಎಂ ಸಿದ್ದರಾಮಯ್ಯ, ಯತ್ನಾಳ್ಗೆ ತಿರುಗೇಟು ಕೊಟ್ಟು ವಾಜಪೇಯಿ ಜೊತೆ ಕೇಂದ್ರದಲ್ಲಿ ಯತ್ನಾಳ್ ಮಂತ್ರಿ ಆಗಿದ್ದಂತವರು, ಆ ರೀತಿಯಲ್ಲಿ ಇವಾಗ ಯತ್ನಾಳ್ ಇದ್ದಾರಾ? ಎಂದು ಕಾಲೆಳೆದರು. ಮಾತು ಮುಂದುವರಿಸಿದ ಸಿಎಂ ಸಿದ್ದರಾಮಯ್ಯ, ಕೊನೆಗೆ ಅಪ್ಪಾಜಿ ಅಂದ್ರಲ್ಲ ಆ ಮಾತು ಸರಿಯಾಗಿದೆ ಎಂದು ಯತ್ನಾಳ್ರನ್ನು ಮಾತಿಗೆ ಎಳೆದರು.
ಆಗ ಯತ್ನಾಳ್ ಹೌದು ಮೋದಿ ಹೇಳಿದ್ದಾರೆ, ಯಾರು ಕಾಲಿಗೆ ಬೀಳೋದು ಬೇಡ ಅಂತ. ತಂದೆಯಾದವರಿಗೆ ಮಾತ್ರ ಅಪ್ಪಾಜಿ ಎನ್ನಬೇಕು ಎಂದು ತಿಳಿಸಿದರು. ಆಗ ಸಿಎಂ ಸಿದ್ದರಾಮಯ್ಯ, ಯತ್ನಾಳ್ ಮಾತು ಸರಿಯಾಗಿದೆ. ಖಂಡಿತ ಯತ್ನಾಳ್ ಮಾತಿನಂತೆ ಯಾರೇ ಆದರೂ ತಂದೆ ಆದವರನ್ನು ಮಾತ್ರ ಅಪ್ಪಾಜಿ ಎನ್ನಬೇಕು ಎಂದು ಸಿದ್ದರಾಮಯ್ಯ ಕಿಚಾಯಿಸಿದರು.
ಇದನ್ನೂ ಓದಿ :Watch.. ಸಿದ್ದರಾಮಯ್ಯಗೆ 100 ಪರ್ಸೆಂಟ್ ಸಿಎಂ ಎಂದ ಬಿಜೆಪಿ ಶಾಸಕರು: ನಿಮ್ಮ ಭ್ರಷ್ಟಾಚಾರ ಹೊರ ತೆಗೆಯುವೆ ಎಂದು ಗುಡುಗಿದ CM - allegations against Siddaramaiah