ಬೆಂಗಳೂರು: ಇಂದಿನ ಡಿಜಿಟಲ್ ಯುಗದಲ್ಲಿ ಬಹುತೇಕ ಎಲ್ಲರೂ ಮೊಬೈಲ್ ಫೋನ್ ಹೊಂದಿರುವುದು ಸಾಮಾನ್ಯ, ಅದರಲ್ಲಿಯೂ ಸ್ಮಾರ್ಟ್ ಫೋನ್ ಇಲ್ಲದವರು ವಿರಳ. ಇನ್ನು ನಾಡಿನ ದೊರೆ ಎನ್ನಬಹುದಾದ ಹುದ್ದೆ ಮುಖ್ಯಮಂತ್ರಿ ಹುದ್ದೆಯಾಗಿದ್ದು, ನಮ್ಮ ರಾಜ್ಯದ ಮುಖ್ಯಮಂತ್ರಿಗಳು ಮೊಬೈಲ್ ಹೊಂದಿದ್ದಾರಾ ಎನ್ನುವ ಪ್ರಶ್ನೆ ಎಲ್ಲರಲ್ಲಿಯೂ ಇದೆ. ಆದರೆ, ಮೊಬೈಲ್ ಹೊಂದಿದ್ದ ಸಿದ್ದರಾಮಯ್ಯ ಈಗ ಮೊಬೈಲ್ ನಿಂದ ದೂರ ಉಳಿದಿದ್ದಾರೆ. ಅದಕ್ಕೆ ಕಾರಣವೂ ಇದೆ ಇದನ್ನು ಅವರೇ ಬಹಿರಂಗಪಡಿಸಿದ್ದಾರೆ.
ಹೌದು, ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಮೊಬೈಲ್ ಫೋನ್ ಹೊಂದಿಲ್ಲ, ಈ ವಿಷಯವನ್ನು ಸ್ವತಃ ಸಿಎಂ ಸಿದ್ದರಾಮಯ್ಯ ಅವರೇ ಹೇಳಿಕೊಂಡಿದ್ದಾರೆ. ಪ್ರೆಸ್ಕ್ಲಬ್ ನಲ್ಲಿ ನಡೆದ ಪತ್ರಿಕಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ನಾನು ಮೊಬೈಲ್ ಫೋನ್ ಇಟ್ಟುಕೊಂಡಿಲ್ಲ. ಹಾಗಾಗಿ ಸಾಮಾಜಿಕ ಜಾಲತಾಣದಲ್ಲಿ ಏನಾಗುತ್ತದೆ ಎಂದು ನನಗೆ ಗೊತ್ತಾಗುವುದಿಲ್ಲ. ನನ್ನ ಮಗ ಹೇಳಿದರೆ ಮಾತ್ರ ಗೊತ್ತಾಗುತ್ತದೆ ಎಂದು ತಿಳಿಸಿದರು.
ಈ ಹಿಂದೆ ಫೋನ್ ಇರಬೇಕು ಎನ್ನುವ ಕಾರಣಕ್ಕೆ ಆರು ತಿಂಗಳು ಇಟ್ಟುಕೊಂಡಿದ್ದೆ. ಆಗ ರಾತ್ರಿ ಹೊತ್ತೆಲ್ಲ ಫೋನ್ಕಾಲ್ ಬರೋದು ಸಾಮಾನ್ಯವಾಗಿತ್ತು, ನಿದ್ದೆ ಮಾಡೋಕೇ ಬಿಡುತ್ತಿರಲಿಲ್ಲ. ಅವತ್ತಿಂದ ಮೊಬೈಲ್ ಫೋನ್ ಇಟ್ಟುಕೊಳ್ಳಬಾರದು ಎಂದು ನಿರ್ಧರಿಸಿ ಮೊಬೈಲ್ ಫೋನ್ ಇಟ್ಟುಕೊಳ್ಳುವುದನ್ನು ಬಿಟ್ಟಿದ್ದೇನೆ. ಹಾಗಾಗಿ ನನ್ನ ಬಳಿ ಈಗ ಮೊಬೈಲ್ ಫೋನ್ ಇಲ್ಲ ಎಂದು ಹೇಳಿದರು.
ನಮ್ಮ ಆಪ್ತ ಸಹಾಯಕರು, ಗನ್ಮ್ಯಾನ್ಗಳು ಏನೇ ವಿಷಯ ಇದ್ದರೂ ಬಂದು ತಿಳಿಸುತ್ತಾರೆ. ಕರೆ ಮಾಡಲು, ಸಂವಹನ ನಡೆಸಲು ಈ ರೀತಿಯ ಅವಕಾಶಗಳನ್ನು ಬಳಕೆ ಮಾಡಿಕೊಳ್ಳುತ್ತೇನೆ. ನಮ್ಮ ಆಪ್ತ ಸಹಾಯಕರು, ಗನ್ಮ್ಯಾನಗಳಿಂದ ಪಡೆದ ಮಾಹಿತಿಗಳ ಆಧಾರದಲ್ಲಿ ಪ್ರತಿಕ್ರಿಯೆಗಳಿಗೆ ಉತ್ತರ ಕೊಡುವುದಕ್ಕೆ ಪ್ರಯತ್ನ ಮಾಡುತ್ತೇನೆ ಎಂದು ಮೊಬೈಲ್ ಫೋನ್ ಇಲ್ಲದೇ ಇದ್ದರೂ ಪರಿಸ್ಥಿತಿ ಮ್ಯಾನೇಜ್ ಮಾಡುತ್ತಿರುವ ಪರಿಯನ್ನು ವಿವರಿಸಿದರು.
ಇದನ್ನೂ ಓದಿ:ಸಿಎಂ-ಡಿಸಿಎಂ ಹುದ್ದೆ ಜಟಾಪಟಿಗೆ ತೆರೆ ಎಳೆಯಲು ಹೈಕಮಾಂಡ್ ತಾಕೀತು: ಸಂಪುಟ ಪುನಾರಚನೆಗೆ ಸೂಚನೆ? - Congress High Command