ಹಾವೇರಿ:''ಕಾಂಗ್ರೆಸ್ ಸೋಲಿಸಲೇಬೇಕೆಂದು ಜೆಡಿಎಸ್ ಮತ್ತು ಬಿಜೆಪಿ ಅಪವಿತ್ರ ಮೈತ್ರಿ ಮಾಡಿಕೊಂಡಿವೆ. ಕೋಮುವಾದಿ ಪಕ್ಷದ ಜೊತೆ ಕೈಜೋಡಿಸುವುದಿಲ್ಲ ಎಂದು ಬಿಜೆಪಿಯನ್ನು ವಾಚಾಮಗೋಚರವಾಗಿ ಬೈಯ್ದಿದ್ದ ದೇವೇಗೌಡರು ಈಗ ಬಿಜೆಪಿ ಜೊತೆ ಸೇರಿಕೊಂಡಿದ್ದಾರೆ'' ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಹಾವೇರಿ ಜಿಲ್ಲೆಯ ಶಿಗ್ಗಾಂವ್ ತಾಲೂಕು ತಡಸದಲ್ಲಿಂದು ನಡೆದ ಧಾರವಾಡ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನೋದ್ ಅಸೂಟಿ ಪರ ಸಿಎಂ ಮತ ಪ್ರಚಾರ ನಡೆಸಿದರು. ''ತಾನು ಮುಂದಿನ ಜನ್ಮದಲ್ಲಿ ಮುಸ್ಲಿಮನಾಗಿ ಹುಟ್ಟುತ್ತೇನೆ ಎಂದು ದೇವೇಗೌಡ ಹೇಳಿದ್ದರು. ಅಷ್ಟೇ ಅಲ್ಲ, 2019ರಲ್ಲಿ ಮೋದಿ ಪ್ರಧಾನಿಯಾದರೆ ದೇಶ ಬಿಡುತ್ತೇನೆ ಎಂದಿದ್ದರು. ಆದರೀಗ ಮೋದಿ ರಾಜ್ಯಕ್ಕೆ ಅಕ್ಷಯ ಪಾತ್ರೆ ಕೊಟ್ಟಿದ್ದಾರೆ ಎಂದು ಹಾಡಿಹೊಗಳುತ್ತಿದ್ದಾರೆ'' ಎಂದು ಸಿದ್ದರಾಮಯ್ಯ ಟೀಕಿಸಿದರು.
''ಪ್ರಧಾನಿ ನರೇಂದ್ರ ಮೋದಿ ಕರ್ನಾಟಕಕ್ಕೆ ಅನ್ಯಾಯ ಮಾಡಿದ್ದಾರೆ. ನಮಗೆ 11,495 ಕೋಟಿ ರೂ. ಹಣ ಬಿಡುಗಡೆ ಮಾಡಲಿಲ್ಲ. ಇದರಿಂದ 11,495 ಕೋಟಿ ರೂ. ಅನ್ಯಾಯವಾಗಿದೆ. ಇಷ್ಟಾದರೂ ಇಲ್ಲಿನ ಸಂಸದರಾದ ಪ್ರಲ್ಹಾದ್ ಜೋಶಿ ಮಾತನಾಡಲಿಲ್ಲ. ನೀವು ಅವರನ್ನೇ ಆಯ್ಕೆ ಮಾಡಿ ಕಳುಹಿಸುತ್ತಿದ್ದೀರಿ. 25 ಜನ ಸಂಸದರಲ್ಲಿ ಒಬ್ಬರೂ ರಾಜ್ಯದ ಪರ ಮಾತನಾಡಲಿಲ್ಲ. ಇವರನ್ನು ಮತ್ತೆ ಆರಿಸಿ ಕಳುಹಿಸುತ್ತೀರಾ'' ಎಂದು ಅವರು ಪ್ರಶ್ನಿಸಿದರು.
''ಬರ ಪರಿಹಾರಕ್ಕೆ ಕಳೆದ ಸೆಪ್ಟೆಂಬರ್ನಲ್ಲಿಯೇ ಮನವಿ ಮಾಡಿದ್ದೇವೆ. ಕೇಂದ್ರ ತಂಡ ವರದಿ ನೀಡಿದರೂ ಪರಿಹಾರ ನೀಡಿಲ್ಲ. ವರದಿ ಸಲ್ಲಿಸಿದ ಒಂದು ತಿಂಗಳಲ್ಲಿ ಪರಿಹಾರ ನೀಡಬೇಕಾಗಿತ್ತು. ಆದರೆ ಇಲ್ಲಿಯವರೆಗೆ ಒಂದು ನಯಾಪೈಸೆ ನೀಡಿಲ್ಲ. ಇದಕ್ಕಾಗಿ ನಾನೇ ಹೋಗಿ ಅಮಿತ್ ಶಾರನ್ನು ಸಹ ಭೇಟಿಯಾದೆ. ಆದರೆ ನಾಲ್ಕು ತಿಂಗಳಾದರೂ ಒಂದು ಸಭೆಯನ್ನೂ ಕರೆಯಲಿಲ್ಲ. ಇಲ್ಲಿಯ ಪ್ರಲ್ಹಾದ್ ಜೋಶಿ ಈ ಬಗ್ಗೆ ಒಂದು ಮಾತೂ ಹೇಳಲಿಲ್ಲ. ಈ ಸಲ ಅವರಿಗೆ ಮತ ಹಾಕದೇ, ಕಾಂಗ್ರೆಸ್ನ ವಿನೋದ್ ಅಸೂಟಿಗೆ ಬೆಂಬಲಿಸಿ'' ಎಂದು ಸಿದ್ದರಾಮಯ್ಯ ಮನವಿ ಮಾಡಿದರು.
''ನಾವು ಹಲವು ಬಾರಿ ಮನವಿ ಸಲ್ಲಿಸಿದ್ದರೂ ಸಹ ತಡವಾಗಿದೆ ಎಂದು ಅವರು ಹೇಳುತ್ತಿದ್ದಾರೆ. ಗ್ಯಾರಂಟಿ ಯೋಜನೆಗೆ ಹಣ ಕೇಳುತ್ತಿದ್ದಾರೆ ಎಂದು ಸೀತಾರಾಮನ್ ಹೇಳುತ್ತಿದ್ದಾರೆ. ಈ ಬಗ್ಗೆ ನಾವು ಸುಪ್ರೀಂ ಕದತಟ್ಟಿದ್ದೇವೆ. 48 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಹಾನಿ ಆಗಿದೆ. ಸುಪ್ರೀಂ ಕೋರ್ಟ್ಗೆ ಹೋಗದಿದ್ದರೆ ನಮಗೆ ಪರಿಹಾರ ಸಂಪೂರ್ಣ ಸಿಗುತ್ತಿರಲಿಲ್ಲ'' ಎಂದರು.
''ಮೋದಿ 2014ರಲ್ಲಿ ಕಪ್ಪು ಹಣ ತರುತ್ತೇವೆ ಎಂದರು, ಪ್ರತಿ ಕುಟುಂಬಕ್ಕೆ 15 ಲಕ್ಷ ರೂ. ಜಮಾ ಮಾಡುತ್ತೇನೆ ಎಂಬುದು ಮೊದಲನೇ ಸುಳ್ಳು. ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದು ಎರಡನೆೇ ಸುಳ್ಳು ಹೇಳಿದರು. ಆದರೆ, ಬಳಿಕ ಪಕೋಡಾ ಮಾರಿ ಎನ್ನುತ್ತಿದ್ದಾರೆ. ರೈತರ ಆದಾಯ ದುಪ್ಪಟ್ಟು ಮಾಡುತ್ತೇನೆ ಎಂದರೂ ಈಗ ಅವರ ಆದಾಯ ಕಡಿಮೆಯಾಗಿದೆ. ಈ ಹಿಂದೆ ಮನಮೋಹನ ಸಿಂಗ್ ರೈತರ ಸಾಲ ಮನ್ನಾ ಮಾಡಿದ್ದರು. ಆದರೆ, ಮೋದಿ ಉದ್ಯಮಿಗಳ ಸಾಲ ಮನ್ನಾ ಮಾಡಿದರು. ಮೋದಿಯವರು ಶ್ರೀಮಂತರ ಪರ ಇದ್ದಾರೆ. ಅವರಿಗೆ ತಕ್ಕಪಾಠ ಕಲಿಸಿ'' ಎಂದು ಆಗ್ರಹಿಸಿದರು.
ಇದನ್ನೂ ಓದಿ:ಉತ್ತಮ ಆರೋಗ್ಯಕ್ಕಾಗಿ ಕುಮಾರಸ್ವಾಮಿ, ವಿಜಯೇಂದ್ರ ಮದ್ಯ ಸೇವಿಸುವುದು ಬಿಡಲಿ: ಸುರ್ಜೇವಾಲಾ - Surjewala