ಮೈಸೂರು: ಮುಡಾ (ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ) ಹಗರಣದಲ್ಲಿ ಎ1 ಆರೋಪಿಯಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಇಂದು ಮೈಸೂರಿನಲ್ಲಿರುವ ಲೋಕಾಯುಕ್ತ ಕಚೇರಿಗೆ ತೆರಳಿ ಸುಮಾರು ಎರಡು ಗಂಟೆಗಳ ಕಾಲ ತನಿಖೆ ಎದುರಿಸಿ ತಾವು ಬಂದ ಖಾಸಗಿ ಕಾರಿನಲ್ಲೇ ಹೊರ ಹೋದರು.
ತಮ್ಮ ಧರ್ಮಪತ್ನಿ ಹೆಸರಿನಲ್ಲಿ ಪಡೆದ 14 ಬದಲಿ ನಿವೇಶನ ಸಂಬಂಧ ಪ್ರಕರಣದ ಮೊದಲ ಆರೋಪಿಯಾಗಿರುವ ಸಿಎಂ ಸಿದ್ದರಾಮಯ್ಯ, ಮೈಸೂರು ಲೋಕಾಯುಕ್ತ ಎಸ್.ಪಿ. ಉದೇಶ್ ಅವರು, ನೀಡಿದ ನೋಟಿಸ್ ಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾಗಿದ್ದರು. ಬೆಳಗ್ಗೆ 10 ಗಂಟೆ 09 ನಿಮಿಷಕ್ಕೆ ಮೈಸೂರು ಲೋಕಾಯುಕ್ತ ಕಚೇರಿಗೆ ಆಗಮಿಸಿದ್ದ ಸಿಎಂ, ವಿಚಾರಣೆ ಮುಗಿಸಿ 12 ಗಂಟೆ 8 ನಿಮಿಷಕ್ಕೆ ಲೋಕಾಯುಕ್ತ ಕಚೇರಿಯಿಂದ ಖಾಸಗಿ ಕಾರಿನಲ್ಲಿ ಮಾಧ್ಯಮಗಳ ಮುಂದೆ ಬರದೇ ಅಲ್ಲಿಂದ ತೆರಳಿದರು.
ವಿಚಾರಣೆ ಹೇಗಿತ್ತು:ಸುಮಾರು 2 ಗಂಟೆಗಳ ಕಾಲ ಲೋಕಾಯುಕ್ತ ಕಚೇರಿಯಲ್ಲಿ ವಿಚಾರಣೆ ನಡೆಸಲಾಯಿತು. ಮುಖ್ಯಮಂತ್ರಿಯನ್ನು ಲೋಕಾಯುಕ್ತ ಎಸ್.ಪಿ. ಉದೇಶ್ ನೇತೃತ್ವದಲ್ಲಿ ವಿಚಾರಣೆ ಮಾಡಲಾಯಿತು. ಸಿಎಂ ಅವರ ವೈಯಕ್ತಿಕ ವಿವರ, ತಮ್ಮ ಪತ್ನಿ ಹೆಸರಿನಲ್ಲಿ ಕೆಸರೆಯಾ ಸರ್ವೆ ನಂ. 464 ರಲ್ಲಿದ್ದ 3 ಎಕರೆ 16 ಗುಂಟೆ ಜಾಗವನ್ನು ಯಾವ ರೀತಿ ಪಡೆಯಲಾಯಿತು, ಇದೇ ಸಂದರ್ಭದಲ್ಲಿ ಬದಲಿ ನಿವೇಶ ಮುಡಾದಿಂದ ಪಡೆದ 14 ನಿವೇಶನಗಳನ್ನ ಪಡೆಯುವ ಸಂದರ್ಭದಲ್ಲಿ ತಮ್ಮದೇನಾದರೂ ಒತ್ತಡ ಇತ್ತೇ, ಪತ್ನಿ ಪಾರ್ವತಿ ಸಿದ್ದರಾಮಯ್ಯ ಅವರಿಗೆ ಕೆಸರೆ ಜಮೀನನ್ನು ಅವರ ಸಹೋದರ ಯಾವ ರೀತಿ ನೀಡಿದ, ದಾನಪತ್ರ ರಿಜಿಸ್ಟರ್ ಆಗಿದ್ದು ಹೇಗೆ, ಈ ಪ್ರಕರಣದ ನಂತರ 14 ನಿವೇಶನಗಳನ್ನು ವಾಪಸ್ ನೀಡಿದ್ದು ಸೇರಿದಂತೆ ಸುಮಾರು 50 ಪ್ರಶ್ನೆಗಳಿಗೆ ಉತ್ತರವನ್ನು ಸಿದ್ದರಾಮಯ್ಯ ಲೋಕಾಯುಕ್ತ ಎಸ್.ಪಿ. ಪಡೆದರು ಎಂಬ ಮಾಹಿತಿ ಸಿಕ್ಕಿದೆ.