ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾವೇರಿ ನಿವಾಸದಲ್ಲಿ ಸಂಪುಟ ಸಚಿವರ ಜೊತೆ ಬ್ರೇಕ್ ಫಾಸ್ಟ್ ಮೀಟಿಂಗ್ ನಡೆಸಿ, ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚಿಸಿದರು. ರಾಜ್ಯಪಾಲರು ಮುಡಾ ಪ್ರಕರಣ ಸಂಬಂಧ ಮುಖ್ಯಮಂತ್ರಿಗೆ ನೋಟಿಸ್ ನೀಡಿರುವ ಬೆನ್ನಲ್ಲೇ ಈ ಬ್ರೇಕ್ಫಾಸ್ಟ್ ಮೀಟಿಂಗ್ ಕುತೂಹಲ ಕೆರಳಿಸಿದೆ.
ಸಿಎಂ ಕಾವೇರಿ ನಿವಾಸದಲ್ಲಿ ನಡೆದ ಸಭೆಗೆ ಡಿಸಿಎಂ ಡಿ. ಕೆ. ಶಿವಕುಮಾರ್ ಸೇರಿ ಬಹುತೇಕ ಎಲ್ಲಾ ಸಚಿವರು ಹಾಜರಾಗಿದ್ದರು. ಬ್ರೇಕ್ ಫಾಸ್ಟ್ ಮೀಟಿಂಗ್ನಲ್ಲಿ ಅಡ್ವೊಕೇಟ್ ಜನರಲ್ ಶಶಿ ಕಿರಣ್ ಶೆಟ್ಟಿಯೂ ಭಾಗಿಯಾಗಿದ್ದರು. ರಾಜ್ಯದ ಪ್ರಸಕ್ತ ರಾಜಕೀಯ ಬೆಳವಣಿಗೆ, ವಾಲ್ಮೀಕಿ ಅಭಿವೃದ್ಧಿ ನಿಗಮ ಹಾಗೂ ಮುಡಾ ಪ್ರಕರಣ ಕುರಿತು ಗಂಭೀರ ಚರ್ಚೆ ನಡೆಸಲಾಗಿದೆ. ಮುಡಾ ವಿರುದ್ಧ ಪ್ರತಿಪಕ್ಷಗಳ ಪಾದಯಾತ್ರೆ, ಪ್ರಾಸಿಕ್ಯೂಷನ್ ಸಂಭಾವ್ಯತೆ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ.
ವಾಲ್ಮೀಕಿ ಅಭಿವೃದ್ಧಿ ನಿಗಮ, ಮುಡಾ ಹಗರಣದಿಂದ ಸರ್ಕಾರ, ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗಿದೆ. ಇತ್ತ ವೈಯಕ್ತಿಕವಾಗಿ ಸಿಎಂ ವ್ಯಕ್ತಿತ್ವಕ್ಕೂ ಧಕ್ಕೆಯಾಗುತ್ತಿರುವ ಹಿನ್ನೆಲೆ ಸಂಪುಟ ಸಚಿವರ ಜೊತೆ ಸಭೆ ನಡೆಸಿದರು. ಮುಂದಿನ ನಡೆ, ದೆಹಲಿಯಲ್ಲಿ ಹೈ ಕಮಾಂಡ್ ಭೇಟಿ ವೇಳೆ ನಡೆದ ಚರ್ಚೆ, ಹೈಕಮಾಂಡ್ ಸಲಹೆ ಸೂಚನೆಗಳ ಬಗ್ಗೆ ಸಚಿವರಿಗೆ ಮಾಹಿತಿ ನೀಡಿದರು.