ಕರ್ನಾಟಕ

karnataka

ETV Bharat / state

ಐರ್ಲೆಂಡ್​, ಸ್ಕಾಟ್ಲೆಂಡ್​ ತಂಡದ ಜೆರ್ಸಿ ಮೇಲೆ ನಂದಿನಿ ಲೋಗೋಗೆ ಸಿಎಂ ಸಿದ್ದರಾಮಯ್ಯ ಸಂತಸ - Nandini brand

ಟಿ20 ವಿಶ್ವಕಪ್​ನಲ್ಲಿ ಐರ್ಲೆಂಡ್​, ಸ್ಕಾಟ್ಲೆಂಡ್​ ತಂಡದ ಜೆರ್ಸಿಯ ಮೇಲೆ ನಂದಿನಿ ಲೋಗೋ ಇರುವುದಕ್ಕೆ ಸಿಎಂ ಸಿದ್ದರಾಮಯ್ಯ ಅವರು ಸಂತಸ ವ್ಯಕ್ತಪಡಿಸಿದ್ದಾರೆ.

ಸ್ಕಾಟ್ಲೆಂಡ್​ ತಂಡದ ಜೆರ್ಸಿ ಮೇಲೆ ನಂದಿನಿ ಲೋಗೋಗೆ ಸಿಎಂ ಸಿದ್ದರಾಮಯ್ಯ ಸಂತಸ
ಸ್ಕಾಟ್ಲೆಂಡ್​ ತಂಡದ ಜೆರ್ಸಿ ಮೇಲೆ ನಂದಿನಿ ಲೋಗೋಗೆ ಸಿಎಂ ಸಿದ್ದರಾಮಯ್ಯ ಸಂತಸ (File Photo ETV Bharat)

By ETV Bharat Karnataka Team

Published : May 16, 2024, 4:49 PM IST

ಬೆಂಗಳೂರು:ರಾಜ್ಯದ ಹಾಲಿನ ಉತ್ಪನ್ನಗಳ ಬ್ರ್ಯಾಂಡ್​ ಆಗಿರುವ ನಂದಿನಿ ಸಂಸ್ಥೆಯು ವಿಶ್ವಮಟ್ಟದಲ್ಲಿ ಮಿಂಚುತ್ತಿದೆ. ಮುಂಬರುವ ಟಿ20 ವಿಶ್ವಕಪ್​ನಲ್ಲಿ ಸ್ಕಾಟ್ಲೆಂಡ್​ ಮತ್ತು ಐರ್ಲೆಂಡ್​ ತಂಡಗಳ ಪ್ರಾಯೋಜಕತ್ವ ಪಡೆದಿದೆ. ಇದು ಕನ್ನಡಿಗರಿಗೆ ಹೆಮ್ಮೆಯ ವಿಷಯವಾಗಿದೆ.

ಈ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ರಾಜ್ಯದ ಉತ್ಕೃಷ್ಟ ಗುಣಮಟ್ಟದ ಹಾಲಿನ ಉತ್ಪನ್ನಗಳು ಮತ್ತು ನಾಡಿನ ರೈತರ ಶ್ರಮವೆರಡನ್ನೂ ವಿಶ್ವಕ್ಕೆ ನಂದಿನಿ ಸಂಸ್ಥೆಯು ಪರಿಚಯಿಸುತ್ತಿದೆ ಎಂದಿದ್ದಾರೆ.

ಈ ಬಗ್ಗೆ ತಮ್ಮ ಎಕ್ಸ್​ ಖಾತೆಯಲ್ಲಿ ಬರೆದುಕೊಂಡಿರುವ ಅವರು, ಈ ಬಾರಿಯ ಟಿ20 ವಿಶ್ವಕಪ್​ನಲ್ಲಿ ನಂದಿನಿ ರಾರಾಜಿಸಲಿದೆ. ಕನ್ನಡ ಕಂಗೊಳಿಸಲಿದೆ. ಉತ್ಕೃಷ್ಟ ಗುಣಮಟ್ಟದ ಹಾಲಿನ ಉತ್ಪನ್ನಗಳು ಮತ್ತು ನಾಡಿನ ರೈತರ ಶ್ರಮ ಎರಡನ್ನೂ ವಿಶ್ವಕ್ಕೆ ಪರಿಚಯಿಸುವ ಸಂಕಲ್ಪ ಇದಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಮಲೇಷಿಯಾ, ವಿಯೆಟ್ನಾಂ, ಸಿಂಗಾಪುರ, ಅಮೆರಿಕ, ದುಬೈ, ಯುಎಇ ಮುಂತಾದ ರಾಷ್ಟ್ರಗಳಲ್ಲಿ ಹೆಸರುವಾಸಿಯಾಗಿರುವ ಕರ್ನಾಟಕದ ಹೆಮ್ಮೆಯ ನಂದಿನಿ ಸಂಸ್ಥೆ, ಈಗ ಟಿ20 ವಿಶ್ವಕಪ್ ಪಂದ್ಯದಲ್ಲೂ ಸ್ಕಾಟ್ಲೆಂಡ್ ಮತ್ತು ಐರ್ಲೆಂಡ್ ತಂಡಗಳ ಪ್ರಾಯೋಜಕತ್ವ ಪಡೆದಿದೆ. ನಂದಿನಿಯನ್ನು ಜಾಗತಿಕ ಬ್ರಾಂಡ್ ಆಗಿ ರೂಪಿಸುವಲ್ಲಿ ಇದು ಮಹತ್ವದ ಹೆಜ್ಜೆಯಾಗಲಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಜೆರ್ಸಿಯ ತೋಳಿನ ಮೇಲೆ ನಂದಿನಿ ಬ್ರ್ಯಾಂಡ್‌:ಸ್ಕಾಟ್ಲೆಂಡ್​ ಮತ್ತು ಐರ್ಲೆಂಡ್​ ಕ್ರಿಕೆಟ್​ ತಂಡಗಳ ಪ್ರಾಯೋಜಕತ್ವವನ್ನು ನಂದಿನ ಸಂಸ್ಥೆಯು ಪಡೆದುಕೊಂಡಿದೆ. ಅದರಂತೆ ನಂದಿನಿ ಬ್ರ್ಯಾಂಡ್​ನ ಲೋಗೋವು ಟೂರ್ನಿಯಲ್ಲಿ ಸ್ಕಾಟ್ಲೆಂಡ್ ತಂಡ ಧರಿಸುವ ಜೆರ್ಸಿಯ ತೋಳಿನ ಮೇಲೆ ಇರಲಿದೆ. ಈಚೆಗಷ್ಟೇ ಸ್ಕಾಟ್ಲೆಂಡ್​ ತಂಡ ಹೊಸ ಜರ್ಸಿಯನ್ನು ಅನಾವರಣ ಮಾಡಿದ್ದು, ನಂದಿನಿ ಲೋಗೋ ರಾರಾಜಿಸುತ್ತಿದೆ.

ಈ ಬಗ್ಗೆ ಕರ್ನಾಟಕ ಹಾಲು ಉತ್ಪಾದಕ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಎಂ.ಕೆ. ಜಗದೀಶ್ ಪ್ರತಿಕ್ರಿಯಿಸಿ, ಟಿ20 ವಿಶ್ವಕಪ್‌ನಲ್ಲಿ ಸ್ಕಾಟ್ಲೆಂಡ್ ತಂಡದ ಅಭಿಯಾನದಲ್ಲಿ ಪಾಲುದಾರಿಕೆ ಹೊಂದಿರುವುದು ಸಂತಸವಾಗಿದೆ. ನಂದಿನಿಯು ಒಂದು ಬ್ರ್ಯಾಂಡ್‌ ಆಗಿ ಶ್ರೇಷ್ಠತೆ ಹಾಗೂ ಶುದ್ಧತೆಯನ್ನು ಪ್ರತಿನಿಧಿಸುತ್ತದೆ. ಕಳೆದ 40 ವರ್ಷಗಳಲ್ಲಿ ನಾವು ಜಾಗತಿಕ ಬ್ರ್ಯಾಂಡ್‌ ಆಗಿ ಬೆಳೆದಿದ್ದೇವೆ ಎಂದಿದ್ದಾರೆ.

ಈ ವಿಶ್ವಕಪ್‌ನಲ್ಲಿ ಕ್ರಿಕೆಟ್ ಸ್ಕಾಟ್ಲೆಂಡ್ ಜೊತೆಗಿನ ನಮ್ಮ ಪಾಲುದಾರಿಕೆಯಿಂದ ನಂದಿನಿ ಬ್ರ್ಯಾಂಡ್ ಜಾಗತಿಕ ಪ್ರೇಕ್ಷಕರನ್ನು ತಲುಪಲು ಸಹಾಯವಾಗಲಿದೆ. ನಮ್ಮ ಬ್ರ್ಯಾಂಡ್‌ ಅನ್ನು ವಿಶ್ವದಾದ್ಯಂತ ಹೆಚ್ಚಿನ ದೇಶಗಳಿಗೆ ಕೊಂಡೊಯ್ಯುವಲ್ಲಿ ಇದು ಮೊದಲ ಹೆಜ್ಜೆಯಾಗಿದೆ. ಭಾರತದ ಎರಡನೇ ಅತಿ ದೊಡ್ಡ ಡೈರಿ ಬ್ರ್ಯಾಂಡ್ ಆಗಿ, ಭಾರತ ಮತ್ತು ಜಗತ್ತಿಗೆ ಪೌಷ್ಠಿಕ ಹಾಗೂ ಗುಣಮಟ್ಟದ ಡೈರಿ ಉತ್ಪನ್ನಗಳನ್ನು ಪೂರೈಸುವ ನಮ್ಮ ಬದ್ಧತೆಯನ್ನು ನಾವು ನಿರಂತರವಾಗಿ ಬಲಪಡಿಸಲು ನೋಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ಟಿ20 ವಿಶ್ವಕಪ್‌: ಸ್ಕಾಟ್ಲೆಂಡ್ ಕ್ರಿಕೆಟಿಗರ ತೋಳಿನಲ್ಲಿ ನಂದಿನಿ ಲಾಂಛನ, ಜೆರ್ಸಿ ಬಿಡುಗಡೆ - Nandini

ABOUT THE AUTHOR

...view details