ಕರ್ನಾಟಕ

karnataka

ETV Bharat / state

ಸಾಮಾಜಿಕ ನ್ಯಾಯ, ಅಭಿವೃದ್ಧಿ ಸರಿದೂಗಿಸುವ ಬಜೆಟ್​ನ್ನು ಸಿಎಂ ನೀಡಿದ್ದಾರೆ : ಎಂ ಬಿ ಪಾಟೀಲ್‌

14ನೇ ಕಮೀಷನ್ ನಿಂದ 15 ನೇ ಕಮೀಷನ್ ನಲ್ಲಿ ರಾಜ್ಯಕ್ಕೆ ಬರಬೇಕಾದ ಅನುದಾನ ಹೆಚ್ಚು ಆಗಬೇಕಿತ್ತು. ಆದರೂ ಕೇಂದ್ರದಿಂದ 62 ಸಾವಿರ ಕೋಟಿ ರೂಪಾಯಿ ಕಡಿಮೆ ಬಂದಿದೆ. ಕೇಂದ್ರದಿಂದ ತೆರಿಗೆ ಪಾಲು ರಾಜ್ಯಕ್ಕೆ ಬಾರದಿರುವ ಕಾರಣ ಕೊರತೆ ಉಂಟಾಗಿದೆ ಎಂದು ಸಚಿವ ಎಂ.ಬಿ.ಪಾಟೀಲ್‌ ತಿಳಿಸಿದ್ದಾರೆ.

Minister MB Patil visited
ವಿಜಯಪುರದ ಭೂತನಾಳ ಕೆರೆಗೆ ಸಚಿವ ಎಂ ಬಿ ಪಾಟೀಲ್​ ಭೇಟಿ ನೀಡಿ ಪರಿಶೀಲಿಸಿದರು.

By ETV Bharat Karnataka Team

Published : Feb 17, 2024, 6:58 PM IST

ವಿಜಯಪುರ: ಸಿಎಂ ಸಿದ್ದರಾಮಯ್ಯ ಅವರು 15ನೇ ಬಜೆಟ್ ಮಂಡಿಸಿದ್ದು, ಇದು ಸಾಮಾಜಿಕ ನ್ಯಾಯ ಹಾಗೂ ಅಭಿವೃದ್ಧಿ ಸರಿದೂಗಿಸುವ ಬಜೆಟ್ ಆಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ್‌ ಹೇಳಿದರು.

ಬರ ಮತ್ತು ಬೇಸಿಗೆ ಹಿನ್ನೆಲೆ ವಿಜಯಪುರದ ಭೂತನಾಳ ಕೆರೆಗೆ ಭೇಟಿ ನೀಡಿದ್ದ ವೇಳೆ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಈ ಬಜೆಟ್​ದಲ್ಲಿ ಐದು ಗ್ಯಾರಂಟಿ ಹಾಗೂ ಎಲ್ಲ ಇಲಾಖೆಗಳಿಗೆ ಹಣ ಒದಗಿಸಲಾಗಿದೆ. ಕೇಂದ್ರ ಸರ್ಕಾರ ರಾಜ್ಯದ ಪಾಲು ತೆರಿಗೆ ನೀಡದೆ ಅನ್ಯಾಯದ ಮಾಡಿದೆ, ಇದರ ನಡುವೆಯೂ ಸಿಎಂ ಉತ್ತಮ ಬಜೆಟ್ ನೀಡಿದ್ದಾರೆ ಎಂದು ಅಭಿಪ್ರಾಯ ತಿಳಿಸಿದರು.

ನಾವು ರಾಜ್ಯಕ್ಕೆ ಆದ ಅನ್ಯಾಯದ ವಿರುದ್ಧ ದೆಹಲಿಗೆ ಹೋಗಿ ಪ್ರತಿಭಟನೆ ಮಾಡಿ ಬಂದಿದ್ದೇವೆ. 14ನೇ ಕಮೀಷನ್ ನಿಂದ 15 ನೇ ಕಮೀಷನ್ ನಲ್ಲಿ ಅನುದಾನ ಹೆಚ್ಚಾಗಬೇಕಿತ್ತು. ಆದರೆ 62 ಸಾವಿರ ಕೋಟಿ ರೂಪಾಯಿ ಕಡಿಮೆ ಬಂದಿದೆ. ಈ ಬಾರಿ ಬಜೆಟ್ ಗಾತ್ರ ಜಾಸ್ತಿಯಾದರೂ ಸಹ ಕೇಂದ್ರದಿಂದ ರಾಜ್ಯಕ್ಕೆ ಹಣ ಬಂದಿಲ್ಲ ಎಂದರು.

ಶ್ವೇತ ಪತ್ರ ಹೊರಡಿಸುತ್ತೀರಾ ಎಂದು ಸಿಎಂ ಅವರನ್ನು ಬಿಜೆಪಿಯವರು ಕೇಳುತ್ತಿದ್ದರು, ಶ್ವೇತಪತ್ರ ಒಳಗೊಂಡಂತಹ ಬಜೆಟ್​ನ್ನೂ ಸಿಎಂ ಸಿದ್ದರಾಮಯ್ಯ ಅವರು ನೀಡಿದ್ದಾರೆ. ಹಾಗಾಗಿ ಬಜೆಟ್ ಮಂಡನೆ ವೇಳೆ ಬಿಜೆಪಿಯವರು 10 ನಿಮಿಷ ಸಹ ಕೂಡಲಿಲ್ಲ. ಕೇಂದ್ರದ ಬಂಡವಾಳ ಹೊರ ಬರುತ್ತದೆ ಎಂದು ಪಲಾಯನ ಮಾಡಿ ಓಡಿ ಹೋದರು ಎಂದು ಬಿಜೆಪಿ ವಿರುದ್ಧ ಎಂಬಿಪಿ ವಾಗ್ದಾಳಿ ನಡೆಸಿದರು.

ರಾಜ್ಯ ಬಜೆಟ್‌ನಲ್ಲಿ ಎಲ್ಲಾ ಇಲಾಖೆಗಳಿಗೂ ಅನುದಾನ ನೀಡಲಾಗಿದೆ. ಗ್ಯಾರಂಟಿಗಳಿಗೆ 56 ಸಾವಿರ ಕೋಟಿ ಹಣ ನೀಡುವ ಜತೆಗೆ ಇತರೆ ಯೋಜನೆಗೂ ನೀಡಲಾಗಿದೆ, ಬೆಂಗಳೂರು ಅಭಿವೃದ್ಧಿ ಹಿಡಿದು ಸಮಗ್ರ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಅಲ್ಲದೇ, ವಿಜಯಪುರ ಜಿಲ್ಲೆಗೂ ಬಜೆಟ್ ನಲ್ಲಿ ಕೊಡುಗೆ ನೀಡಲಾಗಿದೆ. ಧಾರವಾಡದಲ್ಲಿ 6 ಸಾವಿರ ಕೋಟಿ ವೆಚ್ಚದಲ್ಲಿ ಕೇಂದ್ರ ರಾಜ್ಯ ಜಂಟಿಯಾಗಿ ಕೈಗಾರಿಕೆ ವಲಯ ಸ್ಥಾಪನೆ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.

ಬಜೆಟ್‌ ಆರ್ಥಿಕ ಶಿಸ್ತನನ್ನು ಮೀರಿ ಹೋಗಿಲ್ಲಾ, ಕೇಂದ್ರದಿಂದ ತೆರಿಗೆ ಹಣ ರಾಜ್ಯಕ್ಕೆ ಬಾರದಿರುವ ಕಾರಣ ಕೊರತೆ ಬಜೆಟ್ ಉಂಟಾಗಿದೆ. ರಾಜ್ಯ ಸರ್ಕಾರ ಸಾಲ ಹೆಚ್ಚು ಮಾಡಲೂ ಸಹ ಕೇಂದ್ರ ಸರ್ಕಾರ, ನರೇಂದ್ರ ಮೋದಿ ಕಾರಣ ಎಂದು ಸಚಿವ ಎಂ ಬಿ ಪಾಟೀಲ್ ಆರೋಪಿಸಿದರು.

ಆದರೆ 2013 ರಲ್ಲಿ ಸಿಎಂ ಸಿದ್ದರಾಮಯ್ಯ 165 ಭರವಸೆ ನೀಡಿ ಅದರಲ್ಲಿ 158 ಭರವಸೆ ಈಡೇರಿಸಿದ್ದಾರೆ. ಮತ್ತೆ 30 ಯೋಜನೆ ಜಾರಿ ಮಾಡಿದ್ದೇವೆ. ಈಗಾ ಐದು ಗ್ಯಾರಂಟಿ ಭರವಸೆ ನೀಡಿ ಅವುಗಳನ್ನು ಈಡೇರಿಸಿದ್ದೇವೆ. 1.5 ಲಕ್ಷ ಕೋಟಿ ಅನುದಾನ ಕೃಷ್ಣೆಯ ಯೋಜನೆಗೆ ಕೊಡೋದಾಗಿ, ರಕ್ತದಲ್ಲಿ ಬರೆದು ಕೊಡುವೆ ಎಂದು ಬಿ ಎಸ್ ಯಡಿಯೂರಪ್ಪ ಹುಬ್ಬಳ್ಳಿಯಲ್ಲಿ ಹೇಳಿದ್ದರು. ಅವರು ಎಲ್ಲಿ ಕೊಟ್ಟಿದ್ದಾರೆ ಎಂದು ಎಂ ಬಿ ಪಾಟೀಲ್‌ ತಿರುಗೇಟು ನೀಡಿದರು.

ಕೃಷ್ಣಾ ಮೇಲ್ದಂಡೆ ಯೋಜನೆ ಪುನರ್ವಸತಿ ಹಾಗೂ ಪುನರ್ ನಿರ್ಮಾಣ ವಿಚಾರದಲ್ಲಿ ಸಿಎಂ ಅವರು ಸಭೆ ಕರೆಯಲಿದ್ದು, ಈ ವೇಳೆ 5 ವರ್ಷ 8 ವರ್ಷ ಹಂತದ ಯೋಜನೆ ಮಾಡುತ್ತೇವೆ. ಇವತ್ತಿನ ದಿವಸ 19000 ಕೋಟಿ ರೂ ನೀರಾವರಿಗೆ ನೀಡಿದ್ದೇವೆ. ಕೃಷ್ಣಾ ಜಲ ವಿವಾದದ ಕುರಿತು ನ್ಯಾಯಾಧೀಕರಣ ಗೆಜೆಟ್ ನೊಟೀಫಿಕೇಷನ್ ಮಾಡಿಸಲು ಹೇಳಿದ್ರೂ ಡಬಲ್ ಎಂಜಿನ್ ಸರ್ಕಾರ ಏನೂ ಮಾಡಲಿಲ್ಲ. ಈಗಾದರೂ ಬಿಜೆಪಿ ಸಂಸದರು ಗೆಜೆಟ್ ನೊಟೀಫಿಕೇಷನ್ ಮಾಡಿಸುವಂತೆ ಕೇಂದ್ರಕ್ಕೆ ಒತ್ತಾಯಿಸಲಿ ಎಂದು ಆಗ್ರಹಿಸಿದರು.

ಇದನ್ನೂಓದಿ:ರಾಜಕಾರಣಿಗಳು ಇನ್ನೊಬ್ಬರಿಗೆ ಮಾದರಿಯಾಗಿರಬೇಕು: ಬಸವರಾಜ ಹೊರಟ್ಟಿ

ABOUT THE AUTHOR

...view details